Advertisement

ಪರಿಶ್ರಮದ ಬೆಲೆ

08:19 AM Apr 29, 2020 | mahesh |

ಗುರುಕುಲದಲ್ಲಿ ದಡ್ಡಶಿಖಾಮಣಿ ಬಾಲಕನೊಬ್ಬ ಅಧ್ಯಯನ ಮಾಡುತ್ತಿದ್ದ. ಒಮ್ಮೆ ಪಾಠ ಒಪ್ಪಿಸುವಲ್ಲಿ ತಪ್ಪು ಮಾಡಿದ್ದಕ್ಕೆ ಗುರುಗಳು, ಬೆತ್ತ ಪ್ರಹಾರಕ್ಕಾಗಿ ಕೈಚಾಚಲು ಹೇಳಿದರು. ಬಾಲಕ ಹಾಗೆಯೇ ಮಾಡಿದ. ಅವನ ಕೈನೋಡಿದ ತಕ್ಷಣ, ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದುಕೊಂಡರು. ಯಾಕೆಂದರೆ, ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಆಗ
ಗುರುಗಳು “ನಿನ್ನ ಕೈಯಲ್ಲಿ ವಿದ್ಯಾರೇಖೆಯೇ ಇಲ್ಲ. ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು’ ಎಂದುಬಿಟ್ಟರು.

Advertisement

ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ, ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರು ಸೇದುತ್ತಿರುವುದನ್ನು ನೋಡಿದ. ಹೆಂಗಸರು ನೀರು ಸೇದಿ, ಕೊಡ ಇಡುವ ಜಾಗದಲ್ಲಿ ಹೊಂಡ ಸೃಷ್ಟಿಯಾಗಿತ್ತು. ಅದನ್ನು ಕಂಡ ಬಾಲಕ- “ಬಾವಿ ಕಟ್ಟೆ ಕಟ್ಟುವಾಗಲೇ ಹೀಗೆ ಕೊರೆದು ಕಟ್ಟಿದ್ದಾರೆಯೇ?’ ಎಂದು ಕೇಳಿದ.  ಅವರು “ಇಲ್ಲ, ಕಟ್ಟುವಾಗ ಸರಿಯಾಗಿಯೇ ಕಟ್ಟಿದ್ದರು. ದಿನವೂ ಕೊಡವನ್ನು ಇಟ್ಟು ಇಟ್ಟು ಹೀಗಾಗಿದೆ’ ಎಂದರು. ಆಗ ಬಾಲಕನಿಗೆ ಒಂದು ಯೋಚನೆ ಬಂತು. ಕಡು ಕಠಿಣ ಕಲ್ಲೇ ಹೀಗೆ ಬದಲಾಗಿರಬೇಕಾದರೆ, ನಾನು ಪ್ರಯತ್ನಪಟ್ಟರೆ ವಿದ್ಯೆ ಒಲಿಯುವುದಿಲ್ಲವೇ ಅನಿಸಿತು. ಆದರೆ, ತನಗೆ ವಿದ್ಯಾರೇಖೆಯೇ ಇಲ್ಲವೆಂದು ಗುರುಗಳು ಹೇಳಿದ ಮಾತು ನೆನಪಾದಾಗ, ಹರಿತವಾದ ಕತ್ತಿಯಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಮರಳಿ ಬಂದ.

ಗುರುಗಳು ಸಿಟ್ಟಿನಿಂದ- “ನಿನಗೆ ವಿದ್ಯಾರೇಖೆಯೇ ಇಲ್ಲ. ಇಲ್ಲಿಗೆ ಬರಬೇಡ ಎಂದಿದ್ದನಲ್ಲ’ ಎಂದರು. ಆತ, “ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ’ ಎಂದನು. ಗುರುಗಳು ಅಚ್ಚರಿಯಿಂದ, “ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?’ ಎಂದು ಬಾಲಕನ ಕೈ ನೋಡುತ್ತಾರೆ. ವಿದ್ಯಾರೇಖೆ ಇರುವಲ್ಲಿ ಕೈ ಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬರುತ್ತದೆ. ಆಗ ಅವರು ಪ್ರೀತಿಯಿಂದ, “ಮಗು, ಸಹಜವಾಗಿ ಇರಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆ ಹೋಗು’ ಎಂದು ಹುಡುಗನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೊರತಪಸ್ಸಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾಗುತ್ತಾನೆ. ಆದರೆ, ಒಂದಕ್ಷರವನ್ನೂ ಮಾತನಾಡದೆ ತನ್ನ ಡಮರುಗವನ್ನು 14 ಸಾರಿ ಬಾರಿಸುತ್ತಾನೆ. ಆಗ 14 ನಾದಗಳು ಹೊರಹೊಮ್ಮಿದವು. ಅದನ್ನು ಆಧರಿಸಿ, ಸಂಸ್ಕೃತ- ವ್ಯಾಕರಣ ಶಾಸ್ತ್ರ ರಚನೆ ಮಾಡಿದ ಆ ಬಾಲಕನೇ ಪಾಣಿನಿ ಮಹರ್ಷಿ.

ರತ್ನಾವತಿ ಟಿ.ಎಸ್‌., ಅಧ್ಯಾತ್ಮ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

Advertisement

Udayavani is now on Telegram. Click here to join our channel and stay updated with the latest news.

Next