ಚಿಕ್ಕಬಳ್ಳಾಪುರ: ಉಪ ಚುನಾವಣೆ ಘೋಷಣೆಯಾದ ಬಳಿಕ ಸುಧಾಕರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಜೊತೆಗೆ, ರಾಜಕೀಯ ದುರುದ್ದೇಶದಿಂದ ಬೇರೆ ಯಾರೋ ಈ ಆಡಿಯೋ ಸೃಷ್ಟಿ ಮಾಡಿದ್ದಾರಾ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಶ್ರೀ ಸಾಯಿಕೃಷ್ಣ ಚಾರಿಬಟಲ್ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕ ರೊಂದಿಗೆ ಸುಧಾಕರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದು.
ಆಡಿಯೋದಲ್ಲಿ ಇರುವುದೇನು?: “18ಕ್ಕೆ ನನ್ನ ನಾಮಿನೇಷನ್ ಇದೆ. ನಾನು ನಾಮಪತ್ರ ಸಲ್ಲಿಸುವ ದಿನದಂದು ಇಡೀ ಕಾರ್ಯಕ್ರಮ ಒನ್ ವೇ ಆಗಿ ನಡೆಯುತ್ತಿದೆ ಎಂದು ಗೊತ್ತಾಗಬೇಕು. ಅದಕ್ಕೆ ನೀವು ಬೂತ್ ಮಟ್ಟದ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಬೇಕು. ನಿಮಗೆ ಒಂದು ತಿಂಗಳ ಸಂಬಳವನ್ನು ಬೋನಸ್ ಆಗಿ ಕೊಡಿಸುವೆ. ಯಾರೂ ರಜೆ ಪಡೆಯಬಾರದು.
ಚುನಾವಣೆ ಮುಗಿದ ಬಳಿಕ ನಾನೇ ನಿಮ್ಮನ್ನೆಲ್ಲಾ ಒಳ್ಳೆ ಸ್ಥಳಕ್ಕೆ ಟೂರ್‌ಗೆ ಕರೆದುಕೊಂಡು ಹೋಗುವೆ. ಮತದಾರರಿಗೆ ಬೆಲೆ ಬಾಳುವ ಅಪರೂಪದ ಕಾಣಿಕೆ ಕೊಡಬೇಕು. ಅವರ ಮನೆಯ ಯಜಮಾನ ಅಥವಾ ಪತ್ನಿಯ ಹೆಸರು, ಅಡ್ರೆಸ್, ಫೋನ್ ನಂಬರ್ ತೆಗೆದುಕೊಳ್ಳಿ. ಅವರ ಹೆಸರಿನಲ್ಲಿ ನಾನು ಬಿಲ್ ಮಾಡಿ ಕೊಡಬೇಕಾಗುತ್ತದೆ. ನಾನು ಕೊಡುವ ಕಾಣಿಕೆಯನ್ನು ನೀವು ಎಲ್ಲರ ಮನೆಗಳಿಗೆ ತಲುಪಿಸಬೇಕು.
ನಾನು ಬಹಳ ಬೆಲೆ ಬಾಳುವ ವಸ್ತು ಕೊಡುತ್ತೇನೆ. ಅದು ಏನು ಅಂತ ಮತ್ತೆ ಹೇಳುತ್ತೇನೆ. ಚುನಾವಣೆಯ ಸಂದರ್ಭದಲ್ಲಿ ನಾವು ಬಹಳ ಕೇರ್‌ಫುಲ್ ಆಗಿ ಇದನ್ನು ಮಾಡಬೇಕಾಗುತ್ತದೆ. ಇವತ್ತಿನಿಂದ ನಾಗರಾಜ್ ಅವರ ಮಾತು, ನಮ್ಮ ಸೀನಿಯರ್ ಕೋಡಿನೇಟರ್ ರವಿ, ಹರೀಶ್ ಯರೀಸ್ವಾಮಿ ಇವರೆಲ್ಲರ ಮಾತುಗಳನ್ನು ತಾವು ಶಿರಸಾ ವಹಿಸಿ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ತಮಗೆ ಹೆಚ್ಚಿನ ಸೌಲಭ್ಯ, ಅವಕಾಶಗಳನ್ನು ಟ್ರಸ್ಟ್ ಕಡೆಯಿಂದ ಕೊಡಿಸುತ್ತೇನೆ’.
ದೂರು ನೀಡುವೆ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎನ್.ಚ್.ಶಿವಶಂಕರರೆಡ್ಡಿ, ಈ ಬಗ್ಗೆ ದೂರು ಕೊಡಲು ಪಕ್ಷದಿಂದ ತಯಾರಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.