Advertisement

ಸಚಿವ ಸ್ಥಾನಕ್ಕೆ ಕಾರ್ಯಕರ್ತರ ಒತ್ತಡ: ಖಂಡ್ರೆ

11:42 AM Jun 10, 2018 | Team Udayavani |

ಬೀದರ: ಕೆಲವರು ಕುತಂತ್ರ ಹಾಗೂ ಹೆದರಿಸುವ ತಂತ್ರಗಳನ್ನು ಅನುಸರಿಸಿ ಸಚಿವ ಸ್ಥಾನ ಪಡೆದಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ನನಗೂ ಸಚಿವ ಸ್ಥಾನ ನೀಡುವಂತೆ ಪಕ್ಷದ ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ ಎಂದು ಮಾಜಿ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಒತ್ತಡ ಹಾಗೂ ಅಸಮಾಧಾನ ಕುರಿತು ಈಗಾಗಲೇ ಪಕ್ಷದ ಹೈಕಮಾಂಡ್‌ ಗಮನಕ್ಕೆ ತರಲಾಗಿದ್ದು, ಇನ್ನುಮುಂದೆಯೂ ಕೂಡ ಹೈಕಮಾಂಡ್‌ ಮನವೊಲಿಕೆಗೆ ಪ್ರಯತ್ನಿಸುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಗಳಿಸಿದ್ದು, ನನ್ನ ಅವಧಿಯಲ್ಲಿ ಇದೊಂದು ಸಾಧನೆಯಾಗಿದೆ. ನನಗೆ ಮಂತ್ರಿಯಾಗಿ ಕೆಲಸ ಮಾಡಲು ಸಿಕ್ಕಿದ್ದು ಕೇವಲ 22 ತಿಂಗಳು ಮಾತ್ರ. ಆದರೂ ಅಲ್ಪ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದೇನೆ.

ಈ ಅವಧಿಗೂ ಸಚಿವ ಸ್ಥಾನ ಸಿಕ್ಕಿದರೆ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿತ್ತು. ಜಿಲ್ಲೆಯಲ್ಲಿ ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಯೋಜನೆ ಕಾಮಗಾರಿಗಳನ್ನು ಅನುಷ್ಠಾನಗೊಳ್ಳಿಸಿದ್ದೇನೆ. ಈ ಎಲ್ಲಾ ಕಾಮಗಾರಿಗಳು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿವೆ ಎಂದರು.

ಕಾರಂಜಾ ಯೋಜನೆಯ ಎಡ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣ ಕಾಮಗಾರಿ, ಬಸವಕಲ್ಯಾಣದ 13 ಕೆರೆಗಳಿಗೆ ನೀರು ಹರಿಸುವ ಯೋಜನೆ, ಮಾಂಜ್ರಾ ನದಿಯಿಂದ ನೀರು ಎತ್ತುವ ಮೂಲಕ ಕಾರಂಜಾ ಜಲಾಶಯಕ್ಕೆ ತುಂಬಿಸುವ ಯೋಜನೆ, ಭಾಲ್ಕಿ ಪಟ್ಟಣ ಹಾಗೂ 23 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳ ಕಾಮಗಾರಿ ಸದ್ಯ ಪ್ರಗತಿಯಲ್ಲಿವೆ. ಪೌರಾಡಳಿತ ಸಚಿವನಾಗಿ ಇಲಾಖೆಗೆ ಹೊಸ ತಂತ್ರಜ್ಞಾನದ ಮೂಲಕ ಆನ್‌ಲೈನ್‌ ವ್ಯವಸ್ಥೆಗಳನ್ನು ಕಲ್ಪಿಸಿದ್ದೇನೆ. ಇನ್ನೊಂದು ಬಾರಿ ಸಚಿವನಾಗಿ ಕೆಲಸ ಮಾಡಿದ್ದರೆ ಅವುಗಳನ್ನು ಪರಿಪೂರ್ಣಗೊಳಿಸಿ ಇನ್ನು ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೆ ಎಂದು ಅಳಲು ತೊಡಿಕೊಂಡರು.ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡುವ ಸಂದರ್ಭದಲ್ಲಿ ಇಲ್ಲಿನ ಎಲ್ಲ ಶಾಸಕರ ಅಭಿಪ್ರಾಯ ಪಡೆಯಬೇಕಾಗಿತ್ತು ಎಂದರು. 

Advertisement

ಎಂ.ಬಿ. ಪಾಟೀಲ ಬಣದಲ್ಲಿ ತಾವೂ ಕೂಡ ಇದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರೆಗೂ ಎಂ.ಬಿ. ಪಾಟೀಲ ಜೊತೆ ನೇರವಾಗಿ ಮಾತನಾಡಿಲ್ಲ ಎಂದರು.

ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಿ ಒಂದು ಕ್ಷೇತ್ರದಲ್ಲಿ ಗೆದ್ದ ಜಿಲ್ಲೆಗೂ ಕೂಡ ಸಚಿವ ಸ್ಥಾನ ನೀಡಲಾಗುತ್ತಿದೆ. ಆದರೆ ಬೀದರ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಗಳಿಸಿದ್ದು, ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1978ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ವಿಜಯಕ್ಕೆ ಈಶ್ವರ ಖಂಡ್ರೆ ಕಾರಣ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈಶ್ವರ ಖಂಡ್ರೆ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಕುರಿತು ಈಗಾಗಲೇ ನಾಲ್ಕು ಶಾಸಕರು ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದೇವೆ ಎಂದರು. ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುವುದಿಲ್ಲ ಎಂದರು. 

ಹೈ.ಕ. ಭಾಗದ ಮುಸ್ಲಿಂ ಸುಮುದಾಯಕ್ಕೆ ಕೊಡಿ ಹೈದ್ರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಸುಮುದಾಯಕ್ಕೆ ಸಚಿವ ಸ್ಥಾನ ನೀಡಿಲ್ಲ. ಕಾರಣ ಈ ಭಾಗದ ಜನರು ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಾನು ಕೂಡ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಸಚಿವ
ಸ್ಥಾನದ ಆಕಾಂಕ್ಷಿಯಾಗಿದ್ದೇನೆ.
 ರಹೀಮ್‌ ಖಾನ್‌, ಬೀದರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next