Advertisement

ಸ್ಥಾನದಲ್ಲಿ ಮುಂದುವರಿಯಲು ಅಕಾಡೆಮಿ ಅಧ್ಯಕ್ಷರ ನಿರ್ಧಾರ

12:20 PM May 20, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಸ್ಥಾನದಲ್ಲಿ ಮುಂದುವರಿಯಬೇಕೇ ಅಥವಾ ತೊರೆಯಬೇಕೇ ಎಂಬ ಜಿಜ್ಞಾಸೆಯಲ್ಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಅಕಾಡೆಮಿಗಳು ಅಧ್ಯಕ್ಷರು, ಸಮ್ಮಿಶ್ರ ಸರ್ಕಾರ ರಚನೆಯಿಂದಾಗಿ ಸ್ಥಾನದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.

Advertisement

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಹಿನ್ನೆಲೆಯಲ್ಲಿ ಹಲವು ನಿಗಮ, ಅಕಾಡೆಮಿಗಳ ಅಧ್ಯಕ್ಷರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದರು.

ಕೆಲವರು ಸ್ವಯಂಪ್ರೇರಿತವಾಗಿ ಸ್ಥಾನ ತೊರೆಯಲು ಚಿಂತಿಸಿದ್ದರೆ, ಇನ್ನೂ ಕೆಲವರು ರಾಜೀನಾಮೆ ಕೇಳಿದರೆ ಸ್ಥಾನ ತೊರೆಯುವ ಮನಸ್ಥಿತಿಯಲ್ಲಿದ್ದರು. ಆದರೆ. ಸುಪ್ರೀಂ ಕೋರ್ಟ್‌ ಶನಿವಾರ ಸಂಜೆಯೇ ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರಕ್ಕೆ ಮುಂದಾದರು.

ಶನಿವಾರ ಸಂಜೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರ ರಚನೆಯಿಂದಾಗಿ ನಿಗಮ, ಅಕಾಡೆಮಿಗಳ ಅಧ್ಯಕ್ಷರ ಅಧಿಕಾರಾವಧಿಯು ಬಹುತೇಕ ಅಬಾಧಿತವಾಗಿದ್ದು, ಸ್ಥಾನಗಳಲ್ಲೇ ಮುಂದುವರಿಯುವ ಮನಸ್ಸು ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕಾಡೆಮಿ, ನಿಗಮಗಳ ಅಧಿಕಾರಾವಧಿ ಬಗ್ಗೆಯೂ ಪ್ರಶ್ನೆಗಳೆದ್ದಿದ್ದವು. ಇನ್ನೂ ಒಂದೆರಡು ವರ್ಷ ಅಧಿಕಾರಾವಧಿ ಬಾಕಿಯಿರುವ ಅಧ್ಯಕ್ಷರು ಉದ್ದೇಶಿತ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಿನ್ನಡೆಯಾಗುವ ಆತಂಕದಲ್ಲಿದ್ದರು. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಡಿ ಇಲಾಖಾವಾರು ಅಕಾಡೆಮಿಗಳ ಅಧ್ಯಕ್ಷರು ಅವಧಿ ಪೂರ್ತಿಗೊಳಿಸಲು ಅವಕಾಶ ನೀಡಬೇಕು ಎಂಬ ಚರ್ಚೆಯೂ ಶುರುವಾಗಿತ್ತು.

Advertisement

ಈ ಮಧ್ಯೆ ನಾಡಿನ ಕಲೆ ಮತ್ತು ಸಂಸ್ಕೃತಿಯ ವಿಚಾರದಲ್ಲಿ ರಾಜಕೀಯ ಬರಬಾರದು. ಈ ಇಲಾಖೆಯನ್ನು ರಾಜಕೀಯದಿಂದ ದೂರವಿಡಬೇಕು ಎಂಬ ಮಾತುಗಳು ಕೂಡ ಸಾಹಿತ್ಯ ಲೋಕದಲ್ಲಿ ಕೇಳಿಬಂದಿದ್ದವು. ಇದೀಗ ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಎಲ್ಲ ಗೊಂದಲ, ಜಿಜ್ಞಾಸೆಗಳಿಗೂ ತೆರೆ ಬಿದ್ದಂತಾಗಿದೆ.

ಈ ವಿದ್ಯಮಾನಗಳನ್ನು ಪರಿಶೀಲಿಸಿ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದೆ. ಆದರೆ ಸುಪ್ರೀಂ ಕೋರ್ಟ್‌ ಶನಿವಾರವೇ ವಿಶ್ವಾಸಮತ ಯಾಚನೆಗೆ ಸೂಚಿಸಿದ್ದರಿಂದ ಬೆಳವಣಿಗೆ ಗಮನಿಸಿ ಮುಂದುವರಿಯಲು ನಿರ್ಧರಿಸಿದೆ. ಸಮ್ಮಿಶ್ರ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಸ್ಥಾನದಲ್ಲಿ ಮುಂದುವರಿಯಲು ತೀರ್ಮಾನಿಸಿದ್ದೇನೆ.
-ವಸುಂಧರಾಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ

ನಾನು ಅಕಾಡೆಮಿಯಲ್ಲಿ ಒಳ್ಳೆಯ ಕಾರ್ಯ ಮಾಡುವ ಉದ್ದೇಶದಿಂದ ಬಂದಿದ್ದೇನೆ. ಹಾಗೆಂದು ಖರ್ಚಿಗಾಗಿ ಅಂಟಿಕೊಂಡವಳಲ್ಲ. ಹಾಗಾಗಿ ಕೆಲಸ ಮುಂದುವರಿಸುತ್ತೇನೆ.
-ಪ್ರೊ.ಎಂ.ಜೆ.ಕಮಲಾಕ್ಷಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷೆ

ಹೊಸ ಸರ್ಕಾರ ರಾಜೀನಾಮೆ ಕೇಳುವವರೆಗೂ ನಾನು ನೀಡುತ್ತಿರಲಿಲ್ಲ. ಒಂದು ವೇಳೆ ಸರ್ಕಾರ ಲಿಖೀತ ರಾಜೀನಾಮೆ ಕೇಳಿದ್ದರೆ ಮಾತ್ರ ಆಲೋಚಿಸುತ್ತಿದ್ದೆ.
-ಜೆ.ಲೋಕೇಶ್‌, ನಾಟಕ ಅಕಾಡೆಮಿ ಅಧ್ಯಕ್ಷ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next