ಬೆಂಗಳೂರು: ರಾತ್ರಿ ವೇಳೆ ಒಂಟಿಯಾಗಿ ನಡೆದು ಹೋಗುತ್ತಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಕರ್ನಾಟಕ ರಕ್ಷಣ ವೇದಿಕೆ ವಾರ್ಡ್ ಅಧ್ಯಕ್ಷ ಸೇರಿದಂತೆ ಇಬ್ಬರನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ಜೋಗುಪಾಳ್ಯ ವಾರ್ಡ್ ಘಟಕ ಅಧ್ಯಕ್ಷ ವರುಣ್ ಮತ್ತು ಈತನ ಬೆಂಬಲಿಗ ರಿಷಿ ಬಂಧಿತರು.
ಆರೋಪಿಗಳು ಸೋಮವಾರ ನಸುಕಿನ 3 ಗಂಟೆ ಸುಮಾರಿಗೆ ಮಂಗಳೂರು ಮೂಲದ ಯುವಕ ವಿಲ್ಸನ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಆತನ ಬಳಿಯಿದ್ದ ಹಣ, ಎಟಿಎಂ ಕಾರ್ಡ್, ಮೊಬೈಲ್ ಇತರೆ ವಸ್ತುಗಳನ್ನು ದರೋಡೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಲಸೂರು ಬಳಿಯ ಹೋಟೆಲ್‌ವೊಂದರಲ್ಲಿ ನಿರ್ವಾಹಕನಾಗಿ ಕೆಲಸ ಮಾಡುವ ಯುವಕ ವಿಲ್ಸನ್ ಭಾನುವಾರ ರಾತ್ರಿ ಕೆಲಸ ಮುಗಿಸಿ ಮೆಟ್ರೋದಲ್ಲಿ ಮನೆಗೆ ಹೋಗುತ್ತಿದ್ದ. ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಇಳಿದು ಮನೆಗೆ ನಡೆದುಹೋಗುತ್ತಿದ್ದ ಈತನನ್ನು ಹಲಸೂರು ಮೆಟ್ರೋ ಬಳಿ ಅಡ್ಡಗಟಿxದ ವರುಣ್ ಮತ್ತು ಸಹಚರ ರಿಷಿ ಮಾರಕಾಸ್ತ್ರಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಭಯಗೊಂಡ ವಿಲ್ಸನ್ ತನ್ನ ಬಳಿಯಿದ್ದ 800 ರೂ. ಕೊಟ್ಟಿದ್ದಾನೆ. ನಂತರ ಆತನ ಬಳಿಯಿದ್ದ ಎಟಿಎಂ ಕಾರ್ಡ್ ಕಸಿದುಕೊಂಡು ಆತನನ್ನು ಎಟಿಎಂ ಕೇಂದ್ರಕ್ಕೆ ಕರೆದೊಯ್ದು 4,500 ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆತಂಕದಿಂದಲೇ ಆರೋಪಿಗಳಿಂದ ಬಿಡುಗಡೆಯಾಗಿ ಬಂದ ವಿಲ್ಸನ್ ಕೂಡಲೇ ಪೊಲೀಸ್ ಸಹಾಯವಾಣಿ “ನಮ್ಮ-100’ಕ್ಕೆ ಕರೆ ಮಾಡಿದ್ದಾನೆ. ಸಹಾಯವಾಣಿ ಸಿಬ್ಬಂದಿ ಹಲಸೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮಾಹಿತಿ ಪಡೆದು, ಕ್ಷೀಪ್ರ ಕಾರ್ಯಾಚರಣೆ ನಡೆಸಿ. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಊಟ ಕೊಡಿಸಲು ಒತ್ತಾಯ: ಬೆಳಗಾದ್ರೆ ಕನ್ನಡ ಪರ ಹೋರಾಟ ನಡೆಸುವ ಆರೋಪಿ ವರುಣ್ ರಾತ್ರಿಯಾದ್ರೆ ದರೋಡೆಗೆ ಇಳಿಯುತ್ತಿದ್ದ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಸೋಮವಾರ ನಸುಕಿನಲ್ಲಿ ವಿಲ್ಸನ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳು,
ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ನಂತರ ಶಿವಾಜಿನಗರದ ಹೋಟೆಲ್‌ವೊಂದರಲ್ಲಿ ಊಟ ಕೊಡಿಸುವಂತೆ ಒತ್ತಾಯಿಸಿದ್ದರು. ನಂತರ ಹೇಗೋ ಉಪಾಯ ಮಾಡಿ ವಿಲನ್ಸ್ ಆರೋಪಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.