ಅಯೋಧ್ಯೆಯನ್ನು ದೇಶದಲ್ಲೇ ಮಾದರಿ ಧಾರ್ಮಿಕ ಕೇಂದ್ರವನ್ನಾಗಿಸಿ ಪ್ರವಾಸೋದ್ಯಮವನ್ನು ಬಲಪಡಿಸುವುದು, ಆ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸು. ಅದನ್ನು ಕಾರ್ಯಪ್ರವೃತ್ತಗೊಳಿಸುವ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಇತ್ತೀಚಿಗಷ್ಟೆ ಅಂಕಿತ ಬಿದ್ದಿದೆ. ಅದರ ಅಂಗವಾಗಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಸ್ಥಾಪಿಸಿದಂತೆಯೇ, ಅಯೋಧ್ಯೆಯಲ್ಲಿ ಶ್ರೀರಾಮನ 100 ಅಡಿ ಎತ್ತರದ ಬೃಹತ್ ವಿಗ್ರಹವನ್ನು ಪ್ರತಿಷ್ಠಾಪಿಸುವ ವಿಚಾರವೂ ಪ್ರಸ್ತಾವನೆಯಲ್ಲಿದೆ. ಸರ್ಕಾರದ ಉದ್ದೇಶ ವಿಗ್ರಹ ಸ್ಥಾಪನೆಯಷ್ಟೇ ಅಲ್ಲ.
ಅದನ್ನೇ ಕೇಂದ್ರವನ್ನಾಗಿಸಿಕೊಂಡು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಈ ಯೋಜನೆಯ ಕಾರ್ಯತಂತ್ರವಾಗಿದೆ. ಯೋಜನೆಗೆ ತಗುಲುವ ಖರ್ಚು 447.46 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಯೋಜನೆಯಲ್ಲಿ ಡಿಜಿಟಲ್ ಮ್ಯೂಸಿಯಂ ನಿರ್ಮಾಣವೂ ಸೇರಿದೆ. ಶೀಘ್ರದಲ್ಲಿ ಅಯೋಧ್ಯೆ, ಮಾದರಿ ಸ್ವತ್ಛ ಹಾಗೂ ಸುಂದರ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಾಡಾಗಲಿದೆ. ಕಳೆದವರ್ಷ ಅಯೋಧ್ಯೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.92 ಕೋಟಿ. 2017ರಲ್ಲಿ ಅಯೋಧ್ಯೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1.75 ಕೋಟಿ. 2016ರಲ್ಲಿ ಈ ಸಂಖ್ಯೆ 1.55 ಕೋಟಿಯಷ್ಟಿತ್ತು. ಇದು ರಾಜ್ಯ ಸರ್ಕಾರದ ಅಭಿವೃದ್ದಿ ಕೆಲಸಗಳ ಫಲಶ್ರುತಿಯೆಂದು ತಿಳಿಯಬಹುದಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಯೋಧ್ಯೆಯಲ್ಲಿ ನೂತನ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಲುವಾಗಿ ಈಗಾಗಲೇ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ನಲ್ಲಿ ಸುಮಾರು 400 ಕೋಟಿ ರೂ.ನಷ್ಟು ಹಣವನ್ನು ಯೋಜನೆಗೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಶೇ. 80ರಷ್ಟು ಭೂಮಿಯನ್ನು ರೈತರ ಅನುಮತಿ ಮೇರೆಗೆ ಪಡೆದುಕೊಳ್ಳಲಾಗಿದ್ದು, ಈಗಾಗಲೇ ಇರುವ ಏರ್‌ಸ್ಟ್ರಿಪ್‌ಅನ್ನು ಉನ್ನತ ದರ್ಜೆಗೆ ಏರಿಸಲಾಗಿದೆ.
ರಸ್ತೆಗಳೆಲ್ಲವೂ ರಾಮನ ಸನ್ನಿಧಾನಕ್ಕೆ: ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್ ವೇ ಎಂಬ ಖ್ಯಾತಿಗೆ ಪಾತ್ರ ವಾಗಲಿರುವ 354 ಕಿ.ಮೀ. ಉದ್ದದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಚಾಲನೆ ನೀಡಿರುವುದು ಸರ್ಕಾರದ ಸಾಧನೆಗಳಲ್ಲೊಂದು. ಆರು ಲೇನ್‌ಗಳನ್ನು ಹೊಂದಿರುವ ಈ ರಸ್ತೆಗೆ 23,000 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಪೂರ್ವಾಂಚಲ ಹೆದ್ದಾರಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಶಿಲಾನ್ಯಾಸ ನೆರವೇರಿಸಿದ್ದರು. ಈ ಯೋಜನೆಯಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿರುವ ಹಳ್ಳಿ, ಪಟ್ಟಣ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ ಎಂಬ ಭರವಸೆ ರಾಜ್ಯ ಸರ್ಕಾರದ್ದು. ಅವೆಲ್ಲಕ್ಕಿಂತ ಹೆಚ್ಚಾಗಿ, ಈ ಯೋಜನೆ ಅಯೋಧ್ಯಾ ಮತ್ತು ಕಾಶಿಯನ್ನು ಸಂಪರ್ಕಿಸುವ ರಸ್ತೆಗೆ ಕೊಂಡಿಯಾಗಲಿದೆ.
ರಸ್ತೆ ನಿರ್ಮಾಣವಿರಲಿ, ವಿಮಾನ ನಿಲ್ದಾಣವಿರಲಿ ಸಂಪರ್ಕ ಮಾಧ್ಯಮದಿಂದಲೇ ಅಭಿವೃದ್ಧಿ ಸಾಧ್ಯ ಎನ್ನುವ ಮೋದಿಯವರ ಮಾತಿನ ಮೇಲೆ ಯೋಗಿ ಅತೀವ ವಿಶ್ವಾಸವನ್ನಿರಿಸಿದ್ದಾರೆ. ಅಯೋಧ್ಯೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವೂ ಕಟಿಬದ್ಧವಾಗಿದೆ. ಅದು ರಸ್ತೆ ನಿರ್ಮಾಣಕ್ಕಾಗಿ ಈಗಾಗಲೇ 5,300 ಕೋಟಿ ರೂ.ಗಳ ನೆರವು ನೀಡಿದ್ದು, ಮೊದಲ ಹಂತದಲ್ಲಿ 91 ಕಿ.ಮೀ. ಉದ್ದದ ಕೋಸಿ ಪರಿಕ್ರಮ ಮಾರ್ಗ(250 ಕಿ.ಮೀ)ವನ್ನು 4 ಲೇನ್‌ಗಳ ಉನ್ನತ ದರ್ಜೆಯ ರಸ್ತೆಯನ್ನಾಗಿ ಮಾರ್ಪಡಿಸಲಾಗುವುದು. ಅಯೋಧ್ಯೆ ಮತ್ತು ಚಿತ್ರಕೂಟದ ನಡುವೆ ರಾಮವನ ಗಮನ ಮಾರ್ಗವನ್ನೂ ಉನ್ನತ ದರ್ಜೆಗೆ ಏರಿಸಲಾಗುವುದು. ಈ ರಸ್ತೆ, ಸೀತೆಯ ಜನ್ಮಸ್ಥಳ ಎಂದು ನಂಬಲಾದ ನೇಪಾಳದ ಜನಕಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.
ಹೂಡಿಕೆದಾರರ ಸಮಾವೇಶ: ಯೋಗಿ ಆದಿತ್ಯನಾಥ್‌ರವರು ಕಳೆದ ಎರಡೂವರೆ ವರ್ಷಗಳಲ್ಲಿ 18ಕ್ಕೂ ಹೆಚ್ಚು ಬಾರಿ ಭೇಟಿ ನೀಡಿರುವುದು ಅಯೋಧ್ಯೆಯ ಅಭಿವೃದ್ಧಿಗೆ ಕಂಕಣಬದ್ಧರಾಗಿರುವುದರ ದ್ಯೋತಕವಾಗಿದೆ. ಇಷ್ಟಲ್ಲದೆ, ಆದಿತ್ಯನಾಥ ಸರ್ಕಾರ ಈವರೆಗೆ 2 ಅತಿದೊಡ್ಡ ಹೂಡಿಕೆದಾರರ ಸಮಾವೇಶವನ್ನೂ ನಡೆಸಿದೆ. ಸಾವಿರಕ್ಕೂ ಅಧಿಕ ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡಿದ್ದವು. ಸುಮಾರು 4.65 ಲಕ್ಷ ಕೋಟಿಯಷ್ಟು ಬಂಡವಾಳ ಹರಿದುಬಂದಿರುವುದು ಸಮಾವೇಶದ ಯಶಸ್ಸಿಗೆ ಸಾಕ್ಷಿ.
ಹತ್ತಿರದ ಏರ್‌ಪೋರ್ಟ್
ಫೈಝಾಬಾದ್-5 ಕಿ.ಮೀ.
ಲಕ್ನೋದ ಅಮೋಸಿ -134 ಕಿ.ಮೀ.
ಅಲಹಾಬಾದ್- 166 ಕಿ.ಮೀ.
ಹತ್ತಿರದ ರೈಲು ನಿಲ್ದಾಣ
ಅಯೋಧ್ಯೆಯಲ್ಲಿ “ಅಯೋಧ್ಯಾ ಜಂಕ್ಷನ್’ ಮತ್ತು “ಫೈಝಾಬಾದ್ ಜಂಕ್ಷನ್’ ಎಂಬ ಎರಡು ರೈಲು ನಿಲ್ದಾಣಗಳಿವೆ.