ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಬಿಡುವು ನೀಡಿದ್ದ ಪೂರ್ವ ಮುಂಗಾರು ಮಳೆ ಸೋಮವಾರ ಸಂಜೆ ಮತ್ತೆ ತಂಪೆರೆಯಿತು. ಆದರೆ, ಗಾಳಿ ಮತ್ತು ಗುಡುಗು ಸಹಿತ ಸುರಿದ ಮಳೆಗೆ ನಗರದ ಹಲವಾರು ಕಡೆಗಳಲ್ಲಿ 25 ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಹಲವಾರು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು.
ಮಳೆಗಿಂತ ಗುಡುಗಿನ ಅಬ್ಬರ ಹೆಚ್ಚಿತ್ತು. ಹಾಗಾಗಿ, ಕೇವಲ ಗರಿಷ್ಠ 25 ಮಿ.ಮೀ. ಮಳೆ ಬಿದ್ದರೂ, ಗುಡುಗಿನ ಸದ್ದಿಗೆ ನಗರದ ಜನ ನಡುಗಿದರು. ನಗರದಲ್ಲಿ ಇನ್ನೂ ಎರಡು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸಂಜೆ 7ರ ಸುಮಾರಿಗೆ ಶುರುವಾದ ಗುಡುಗು ಸಹಿತ ಮಳೆ ಸುಮಾರು ಅರ್ಧ ತಾಸು ಸುರಿಯಿತು.
ಮಳೆ ನೀರು ಪ್ರಮುಖ ಜಂಕ್ಷನ್‌ಗಳಲ್ಲಿ ನಿಂತಿದ್ದರಿಂದ ವಾಹನ ಸಂಚಾರ ಮಂದಗತಿಯಲ್ಲಿತ್ತು. ಇದರಿಂದ ಸಂಚಾರದಟ್ಟಣೆ ಉಂಟಾಗಿ ಜನ ಪರದಾಡಿದರು. ಕೆಲಹೊತ್ತಿನಲ್ಲೇ ಮಳೆ ಅಬ್ಬರ ತಗ್ಗಿದ್ದರಿಂದ ಸಂಚಾರ ಸುಗಮವಾಯಿತು. ಮಳೆಯಿಂದ ಮೆಜೆಸ್ಟಿಕ್, ಓಕಳೀಪುರ, ಮಲ್ಲೇಶ್ವರ, ರಾಜರಾಜೇಶ್ವರಿ ನಗರ ಸುತ್ತಮುತ್ತ ವಾಹನದಟ್ಟಣೆ ಎಂದಿಗಿಂತ ಹೆಚ್ಚಿತ್ತು. ಮಹಾಗಣಪತಿನಗರ, ಬಸವೇಶ್ವರನಗರ, ಮಲ್ಲೇಶ್ವರ ಸೇರಿದಂತೆ ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿತ್ತು.
ಧರೆಗುರುಳಿದ ಮರಗಳು: ಶಿವಾಜಿನಗರ, ದೊಮ್ಮಲೂರು, ಯಲಹಂಕ ನ್ಯೂಟೌನ್, ವಿದ್ಯಾರಣ್ಯಪುರ, ರೇವಾ ಕಾಲೇಜು ಬಳಿ, ನಂದಿನಿ ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ಕೆಂಚೇನಹಳ್ಳಿ, ನಿಮಷಾಂಭ ದೇವಾಲಯದ ಹತ್ತಿರ, ಜೆ.ಸಿ.ನಗರ, ಜೆ.ಪಿ.ಪಾರ್ಕ್, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಆರ್‌ಎಂಸಿ ಯಾರ್ಡ್, ನವರಂಗ್, ಜಾಲಹಳ್ಳಿ, ಕಮ್ಮನಹಳ್ಳಿ, ಬೆನ್ಸನ್‌ಟೌನ್, ಜಯಮಹಲ್, ಗೊರಗುಂಟೆಪಾಳ್ಯ, ಜಲಗೇರಮ್ಮ ದೇವಸ್ಥಾನ, ಮಲ್ಲೇಶ್ವರ 16 ಹಾಗೂ 17ನೇ ಅಡ್ಡರಸ್ತೆ ಸೇರಿದಂತೆ ನಗರದ ವಿವಿಧೆಡೆ 25 ಕ್ಕೂ ಹೆಚ್ಚು ಮರಗಳು ಉರುಳಿವೆ.
ಅಲ್ಲದೆ, ಹೆಬ್ಟಾಳ, ಸ್ಯಾಂಕಿ ರಸ್ತೆ, ಕೋಡೆ ಜಂಕ್ಷನ್, ಕೆ.ಆರ್.ವೃತ್ತ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಗಾಯತ್ರಿನಗರದಲ್ಲಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಸಂಜೆ ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು 24.5 ಮಿ.ಮೀ. ಮಳೆಯಾಗಿದೆ. ಉಳಿದಂತೆ ದಾಸರಹಳ್ಳಿ ಅಗ್ರಹಾರದಲ್ಲಿ 22 ಮಿ.ಮೀ., ನಾಗರಬಾವಿ 10.5, ಬಸವನಗುಡಿ 9, ಉತ್ತರಹಳ್ಳಿ 5, ಬೇಗೂರು 8.5, ಕೊಡಿಗೇಹಳ್ಳಿ 4, ಸೋಲದೇವನಹಳ್ಳಿ 6, ಕೋರಮಂಗಲದಲ್ಲಿ 0.5 ಮಿ.ಮೀ. ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.