ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಬಹುತೇಕ ಸಂಪರ್ಕರಹಿತ ಪ್ರಯಾಣ ವ್ಯವಸ್ಥೆಗೆ ಪರಿವರ್ತನೆಯಾಗಿದ್ದು, ಪ್ರಯಾಣಿಕರು ಇನ್ಮುಂದೆ ವಿಮಾನಯಾನ ಪೂರ್ವ ಪ್ರಕ್ರಿಯೆಗಳನ್ನು ತಮ್ಮ ಅಂಗೈಯಲ್ಲೇ ಪೂರ್ಣಗೊಳಿಸಬಹುದು! – ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಬಿಐಎಎಲ್ ಮಂಗಳವಾರ ನೇರ ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು. ಈ ನೂತನ ವ್ಯವಸ್ಥೆಯಲ್ಲಿ ಆರೋಗ್ಯ ಸೇತು, ಬೋರ್ಡಿಂಗ್ ಪಾಸು, ಬ್ಯಾಗೇಜ್ ಟ್ಯಾಗ್ ನಿಂದ ಹಿಡಿದು ಪ್ರತಿಯೊಂದು ಸಂಪರ್ಕರಹಿತ ಆಗಿರಲಿದ್ದು, ಈ ಎಲ್ಲ ಹಂತಗಳನ್ನು ಪೂರೈಸಲು ಪ್ರಯಾಣಿಕರು ಸಿಬ್ಬಂದಿಯನ್ನು ಅವಲಂಬಿಸಬೇಕಿಲ್ಲ.
ತಮ್ಮ ಮೊಬೈಲ್‌ನಿಂದಲೇ ಇದೆಲ್ಲವನ್ನೂ ಪಡೆಯಬಹುದಾದ ಹೈಟೆಕ್ ವ್ಯವಸ್ಥೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ರೂಪಿಸಿದೆ. ಇದರಿಂದ ಪ್ರಯಾಣಿಕರ ಸಮಯ ಕೂಡ ಉಳಿತಾಯ ಆಗಲಿದೆ. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಮೊಬೈಲ್ ನಲ್ಲಿ “ಆರೋಗ್ಯ ಸೇತು’ ಆ್ಯಪ್‌ನಲ್ಲಿ “ನೀವು ಸುರಕ್ಷಿತ’ ಎಂಬ ಸಂದೇಶ ಇರುವುದನ್ನು ತೋರಿಸಬೇಕು. ಆ್ಯಪ್ ಇಲ್ಲದಿದ್ದರೆ, ಸ್ಥಳದಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲಿಂದ ಪ್ರಯಾಣಿಕರಿಗೆ ಇ-ಪ್ರಿಂಟೆಡ್ ಬೋರ್ಡಿಂಗ್ ಪಾಸ್ ಕಲ್ಪಿಸಲಾಗಿದೆ. ಅಥವಾ ವಿಮಾನ ನಿಲ್ದಾಣದಲ್ಲೇ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಬೋರ್ಡಿಂಗ್ ಪಾಸ್ ಪಡೆಯಬಹುದು.
ಅಲ್ಲಿಯೇ ಬ್ಯಾಗ್‌ಗಳ ಮಾಹಿತಿಯನ್ನೂ ದಾಖಲಿಸಬೇಕು. ಈ ಮೊದಲು ಸ್ಕ್ರೀನ್‌ನಲ್ಲಿ ಟಚ್ ಟೈಪ್ ಮಾಡಿ ಪಡೆಯಬೇಕಾಗಿತ್ತು. ಈಗ “ಟಚ್ ಪಾಯಿಂಟ್’ ತೆರವುಗೊಳಿಸಲಾಗಿದೆ. ಅಲ್ಲಿಂದ ಪ್ರವೇಶ ದ್ವಾರದಲ್ಲಿ ವಿದ್ಯುನ್ಮಾನ ಉಪಕರಣ ಬಳಸಿ ಅಥವಾ ಮ್ಯಾಗ್ನಿಫೈಡ್ ಗ್ಲಾಸ್ ಸ್ಕ್ರೀನ್ ಮೂಲಕ ದಾಖಲೆಯನ್ನು ಪರಿಶೀಲಿಸಲಾಗುತ್ತದೆ. ನಂತರ ನೇರವಾಗಿ ಒಳಗೆ ಹೋಗಿ, ಸ್ವತಃ ಪ್ರಯಾಣಿಕರು ಬೋರ್ಡಿಂಗ್ ಪಾಸ್‌ನಲ್ಲಿದ್ದ ಬಾರ್ ಕೋಡ್ ಸ್ಕ್ಯಾನ್ ಮಾಡಿ, ಬ್ಯಾಗೇಜ್ ಟ್ಯಾಗ್ ಪಡೆಯಬಹುದು. ಅಥವಾ ಕೌಂಟರ್‌ನಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು, ಮೊಬೈಲ್‌ಗೆ ಸಂದೇಶ ಬರಲಿದೆ. ಆಗ ಟ್ಯಾಗ್ ಅಗತ್ಯ ಇರುವುದೇ ಇಲ್ಲ.
ಇನ್ನು ಸ್ವಯಂಚಾಲಿತ ಬ್ಯಾಗ್ ಡ್ರಾಪ್ ಸೌಲಭ್ಯ ಮೊದಲೇ ಇರುವುದರಿಂದ ಇದು ಆಯಾ ವಿಮಾನಯಾನ ಕಂಪನಿಗಳಿಗೆ ಅನ್ವಯ ಆಗಲಿದ್ದು, ಸಿಬ್ಬಂದಿ ಇದರ ನೆರವಿಗೆ ಬರಲಿದ್ದಾರೆ. ಅಲ್ಲಿಂದ ವಿಮಾನ ಹಾರಾಟ ಪೂರ್ವ ಭದ್ರತಾ ಪರೀಕ್ಷಾ ಸ್ಥಳದಲ್ಲಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅನ್ನು ಕಿಯೋಸ್ಕ್ನಲ್ಲಿ ಸ್ಕ್ಯಾನ್ ಮಾಡಬೇಕು. ತದನಂತರ ತಮ್ಮಲ್ಲಿರುವ ಎಲ್ಲ ವಸ್ತುಗಳನ್ನು ಟ್ರೇನಲ್ಲಿ ಹಾಕಿ, ಬಾಡಿ ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಂಡ ಮೇಲೆ ಪಡೆಯಬೇಕು. ಈ ಮೊದಲು ಬೋರ್ಡಿಂಗ್ ಪಾಸ್‌ಗೆ ಮುದ್ರೆ ಹಾಕಲಾಗುತ್ತಿತ್ತು. ನಾಗರಿಕ ವಿಮಾನಯಾನದ ಮಹಾನಿರ್ದೇಶಕರ ಸೂಚನೆ ಮೇರೆಗೆ ಆ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.
ಭದ್ರತಾ ಪರೀಕ್ಷೆಗೆ ಮುನ್ನ ಮತ್ತು ನಂತರ ಹ್ಯಾಂಡ್ ಸ್ಯಾನಿಟೈಸರ್ ಲಭ್ಯ ಇರಲಿದೆ. ವಿಮಾನ ಏರುವ ಮುನ್ನ ದ್ವಾರದಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಮುಖಗವಸು, ಫೇಸ್ ಶೀಲ್ಡ್, ಸ್ಯಾನಿಟೈಸರ್ ಇರುವ ಕಿಟ್ ನೀಡಲಿದ್ದಾರೆ. ಅದನ್ನು ಧರಿಸಿ, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು, ವಿಮಾನ ಏರಬಹುದು. ಈ ಇಡೀ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ಪೂರ್ಣ ಗೊಳ್ಳಲಿದ್ದು, ಹತ್ತಾರು ನಿಮಿಷ ಉಳಿತಾಯದ ಜತೆಗೆ ಸಾಧ್ಯವಾದಷ್ಟು ಸಂಪರ್ಕ ಪಾಯಿಂಟ್‌ಗಳು ಕಡಿಮೆ ಮಾಡಲಾಗಿದೆ. ಹಾಗಾಗಿ, ಸೋಂಕಿನ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವಿಮಾನ ಪ್ರಯಾಣ ಹೆಚ್ಚು ಸುರಕ್ಷಿತ: ಇತರೆ ಮಾದರಿ ಪ್ರಯಾಣಕ್ಕಿಂತ, ವಿಮಾನ ಪ್ರಯಾಣ ಹೆಚ್ಚು ಸುರಕ್ಷಿತವೆಂದು ಶೇ. 90ರಷ್ಟು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಬಿಐಎಎಲ್ ನಡೆಸಿದ “ವಾಯ್ಸ ಆಫ್ ಪ್ಯಾಕ್ಸ್’ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ರೈಲು ಮತ್ತು ಬಸ್ ನಿಲ್ದಾಣಗಳಿಗೆ ಹೋಲಿಸಿದರೆ, ವಿಮಾನ ನಿಲ್ದಾಣಗಳು ಹಾಗೂ ವಿಮಾನ ಪ್ರಯಾಣ ಹೆಚ್ಚು ಸುರಕ್ಷಿತ. ಇಲ್ಲಿನ ಸಂಪರ್ಕರಹಿತ ಪ್ರಕ್ರಿಯೆಗಳು, ನೈರ್ಮಲ್ಯಕ್ಕೆ ನೀಡಲಾದ ಒತ್ತು ಇದೆಲ್ಲದರಿಂದ ಸೋಂಕಿನ ಸಾಧ್ಯತೆ ಇಲ್ಲಿ ಕಡಿಮೆ ಎಂದು ಬಹುತೇಕ ಪ್ರಯಾಣಿಕರು ತಿಳಿಸಿದ್ದಾರೆ. ಅಂದಹಾಗೆ 3,500ಕ್ಕೂ ಅಧಿಕ ಪ್ರಯಾಣಿಕರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ವೋಲ್ವೊ ಬಸ್ ಸೇವೆ: ಸುಮಾರು ಎರಡು ತಿಂಗಳ ನಂತರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿಯ ವೋಲ್ವೊ ಬಸ್‌ಗಳು ಮುಖಮಾಡುತ್ತಿದ್ದು, ಬುಧವಾರದಿಂದ ನಗರದ ವಿವಿಧೆಡೆಯಿಂದ ಈ ಬಸ್ ಸೇವೆಗಳು ಪ್ರಯಾಣಿಕರಿಗೆ ಲಭ್ಯ ಇರಲಿವೆ. ಮೊದಲ ಹಂತದಲ್ಲಿ ನಗರದ ಮೈಸೂರು ಸ್ಯಾಟ್‌ಲೆçಟ್ ಬಸ್ ನಿಲ್ದಾಣ, ಬನಶಂಕರಿ, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್ ಸೇರಿದಂತೆ ಐದು ಕಡೆಗಳಿಂದ 23 “ವಾಯು ವಜ್ರ’ ಬಸ್‌ಗಳು ಪ್ರಯಾಣಿಕರ ಕಾರ್ಯಾಚರಣೆ ನಡೆಸಲಿವೆ. ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇವುಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.