Advertisement

ವಿದ್ಯುತ್‌ ಮರುಸಂಪರ್ಕ ಸಮಸ್ಯೆ ಇನ್ನೂ ಕಗ್ಗಂಟು

09:10 PM Nov 24, 2019 | Team Udayavani |

ಕಾಂತಾವರ: ಕಾಂತಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಕ್ಕೆಲ್‌, ಮದಕ, ಮಜಲೋಡಿ, ಅದಮಾರ್‌ ಭಾಗದಲ್ಲಿ ಸುಮಾರು 50ಕ್ಕೂ ಅಧಿಕ ಮನೆಗಳಿದ್ದು ಸ್ಥಳೀಯರಿಗೆ ವಿದ್ಯುತ್‌ ಸಂಪರ್ಕ ಸಮಸ್ಯೆ ಮಾತ್ರ ಇನ್ನೂ ಕಗ್ಗಂಟಾಗಿದೆ. ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಈ ಭಾಗಕ್ಕೆ ಮೂಡಬಿದಿರೆ ವ್ಯಾಪ್ತಿಯಿಂದ ವಿದ್ಯುತ್‌ ಸಂಪರ್ಕವಾಗುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

Advertisement

ವಿದ್ಯುತ್‌ ಪರಿವರ್ತಕ
ಈ ಭಾಗದಲ್ಲಿ ಎರಡು ವಿದ್ಯುತ್‌ ಪರಿವರ್ತಕಗಳಿದ್ದು , ಅದರಲ್ಲಿ ಅದಮಾರ್‌ ಬೆಟ್ಟ ಎಂಬಲ್ಲಿರುವ ವಿದ್ಯುತ್‌ ಪರಿವರ್ತಕಮಾತ್ರ ಖಾಸಗಿ ಜಾಗದಲ್ಲಿ ಅಳವಡಿಸ ಲಾಗಿದೆ. ಅಲ್ಲಿಗೆ ಸಂಪರ್ಕಿಸಲು ಯಾವುದೇ ರಸ್ತೆ ಇಲ್ಲದೆ ವಿದ್ಯುತ್‌ ಪರಿವರ್ತಕ ಕೆಟ್ಟುಹೋದಲ್ಲಿ ತಿಂಗಳುಗಟ್ಟಲೆ ಮೆಸ್ಕಾಂ ಅಧಿಕಾರಿಗಳನ್ನು ಕಾಯಬೇಕಾಗುತ್ತದೆ.

ಮೂಡುಬಿದಿರೆ ವ್ಯಾಪ್ತಿಈ ಭಾಗಕ್ಕೆ ವಿದ್ಯುತ್‌ ವಿತರಣೆ
ಮೂಡುಬಿದ್ರಿ ವ್ಯಾಪ್ತಿಯಿಂದ ಒದಗಿಸಲಾಗುತ್ತಿದ್ದು ಗ್ರಾಮಸ್ಥರ ಯಾವುದೇ ಸಮಸ್ಯೆ, ಬಿಲ್‌ ಪಾವತಿ ಮತ್ತು ಇನ್ನಿತರ ಕಡತಗಳಿಗೆ ಬೆಳುವಾಯಿ ಮಾರ್ಗವಾಗಿ,ಅಲ್ಲದೆ ಕಡಂದಳೆ -ಕೆಪ್ಲಾಜೆ ಮಾರ್ಗವಾಗಿ ಸುತ್ತು ಬಳಸಿ ಮೂಡುಬಿದಿರೆ ತಲುಪ ಬೇಕು. ಕಾಂತಾವರ ಗ್ರಾಮ ಕಾರ್ಕಳ ತಾಲೂಕನ್ನು ಒಳಗೊಂಡಿದ್ದು, ಕೇವಲ 50 ಮನೆಯವರು ತಮ್ಮ ಯಾವುದೇ ಸಮಸ್ಯೆಗೆ ಮೂಡಬಿದ್ರಿ ಮೆಸ್ಕಾಂ ಇಲಾಖೆಗೆ ಅಲೆಯುವಂತಾಗಿದೆ. ಆದ್ದರಿಂದ ಈ ಭಾಗದ ವಿದ್ಯುತ್‌ ಸಂಪರ್ಕವನ್ನು ಕಾರ್ಕಳ ವ್ಯಾಪ್ತಿಗೆ ವರ್ಗಾಯಿಸು ವಂತೆ ಹಲವು ಬಾರಿ ಮನವಿ ಸಲ್ಲಿಸಿದರೂಇದುವರೆಗೆ ಯಾವುದೇ ಪ್ರಯೋಜನ ವಾಗಿಲ್ಲ ಎಂಬುದು ಇಲ್ಲಿಯವರ ಅಳಲು.

ತುರ್ತು ಸಂದರ್ಭ ವಿಳಂಬ
ಮಳೆಗಾಲ ಹಾಗೂ ಇನ್ನಿತರ ತುರ್ತು ಸಂದರ್ಭ ಯಾವುದೇ ವಿದ್ಯುತ್‌ ಸಮಸ್ಯೆ ಹಾಗೂ ವಿದ್ಯುತ್‌ ತಂತಿಗಳ ಮೇಲೆ ಮರದ ಕೊಂಬೆಗಳು ಉರುಳಿ ಸಂಪರ್ಕ ಕಡಿತಗೊಂಡಲ್ಲಿ ಮೂಡುಬಿದಿರೆಯಿಂದ ಸಿಬಂದಿ ಆಗಮಿಸಬೇಕಾಗುತ್ತದೆ. ಅವರು ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ. ಈ ಬಗ್ಗೆ ಕಾಂತಾವರ ಸಿಬಂದಿಯನ್ನು ಸಂಪರ್ಕಿಸಿದರೆ ಇದು ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎನ್ನುತ್ತಾರೆ. ಇದರಿಂದ ಇಲ್ಲಿಯವರು 3-4 ದಿನ ವಿದ್ಯುತ್‌ ಸಂಪರ್ಕ ಇಲ್ಲದೆ ಕತ್ತಲಲ್ಲೇ ದಿನ ಕಳೆಯಬೇಕಾಗುತ್ತದೆ. ಸಂಪರ್ಕಕಡಿತಗೊಂಡಲ್ಲಿ ಯಾವ ಭಾಗದ ಇಲಾಖೆ ಸಿಬಂದಿಯನ್ನು ಸಂಪರ್ಕಿಸಬೇಕೆಂದು ತಿಳಿಯದ ಪರಿಸ್ಥಿತಿ ಇಲ್ಲಿಯವರದ್ದಾಗಿದೆ.

ಜೋತು ಬಿದ್ದ ವಿದ್ಯುತ್‌ ತಂತಿ
ಈ ಭಾಗದಲ್ಲಿ ಮದಕ ಕೆರೆಯ ಮೇಲೆಯೆ ವಿದ್ಯುತ್‌ ತಂತಿ ಹಾದು ಹೋಗಿದ್ದು, ಇದು ಅತಿ ಹಳೆಯದಾಗಿರುವುದರಿಂದ ತುಂಡಾಗಿ ಕೆರೆಗೆ ಬಿದ್ದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ಕುರಿತು ಇಲ್ಲಿಯ ಸದಸ್ಯರು ತಮ್ಮ ಆರ್‌ಆರ್‌ ನಂಬರ್‌ ಲಗತ್ತಿಸಿ ಕಾರ್ಕಳ ಹಾಗೂ ಮೂಡುಬಿದಿರೆ ಇಲಾಖೆಗೆ ಮನವಿ ನೀಡಿದ್ದರು. 2015ರಲ್ಲಿ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಜಯ ಎಸ್‌. ಕೋಟ್ಯಾನ್‌ ಸ್ಥಳೀಯಾಡಳಿತದ ಮೂಲಕ ಕಾರ್ಕಳ, ಮೂಡಬಿದಿರೆ ಮೆಸ್ಕಾಂಗೆ ಪತ್ರ ಬರೆದು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಕುರಿತು ವಿವರಿಸಿದ್ದರು. ಈ ಸಂದರ್ಭ ಸಮಸ್ಯೆ ಪರಿಹರಿಸುವ ಭರವಸೆಯನ್ನೂ ಅವರು ನೀಡಿದ್ದರು.

Advertisement

ಚರ್ಚಿಸಿ ಸೂಕ್ತ ಕ್ರಮ
ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಂಡು ಈ ಭಾಗದ ಜನರ ಸಮಸ್ಯೆ ಪರಿಹರಿಸುವಲ್ಲಿ ಕ್ರಮ ಕೈಗೊಳ್ಳುತ್ತೇವೆ
-ನಾರಾಯಣ ನಾಯ್ಕ,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಕಾರ್ಕಳ

ಸಮಸ್ಯೆ ಶೀಘ್ರ ಪರಿಹರಿಸಿ
ಹಲವು ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದರೂ ಇನ್ನೂ ಪರಿಹಾರ ಕಂಡಿಲ್ಲ. ಇನ್ನಾದರೂ ಎಚ್ಚೆತ್ತು ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸಿ.
-ಸುಧಾಕರ ಪೂಜಾರಿ, ಮದಕ

-ಸಂದೇಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next