Advertisement

ಕಾಂಗ್ರೆಸ್‌ನ ಶಕ್ತಿಗೆ ನೀರಸ ಪ್ರತಿಕ್ರಿಯೆ

03:26 PM Dec 11, 2018 | Team Udayavani |

ದಾವಣಗೆರೆ: ಕಾಂಗ್ರೆಸ್‌ನ ಮಹತ್ವಕಾಂಕ್ಷಿ ಶಕ್ತಿ ನೋಂದಣಿ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 4,702, ದಾವಣಗೆರೆ ದಕ್ಷಿಣದಲ್ಲಿ 400 ಜನರು ಮಾತ್ರ ನೋಂದಣಿ ಆಗಿದ್ದು, ಪಕ್ಷದ ಕಾರ್ಯಕರ್ತರಿಂದ ನೋಂದಣಿ ಮಾಡಿಸುವಲ್ಲಿ ಅತ್ಯಂತ ನೀರಸ ಪ್ರತಿಕ್ರಿಯೆ ಉಂಟಾಗಿದೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಕೀಶ್‌ ಬಾನು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸೋಮವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಪ್ರಾಜೆಕ್ಟ್ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಕನಸಿನ ಕೂಸು ಶಕ್ತಿ ಪ್ರಾಜೆಕ್ಟ್. ಮುಂಬರುವ ಚುನಾವಣೆಗೆ ದಿಕ್ಸೂಚಿ ಆಗಿದೆ. ಅಂತಹ ಪ್ರಾಜೆಕ್ಟ್ ನಡಿ ನೋಂದಣಿ ಕಾರ್ಯ ಚುರುಕಾಗಿ ನಡೆಯಬೇಕಿತ್ತು. ಆದರೆ, ಪಕ್ಷದ ಕಾರ್ಯಕರ್ತರು ನೋಂದಣಿ ಕಾರ್ಯ ಮಾಡಿಸುವಲ್ಲಿ ವಿಳಂಬ ಆಗಿರುವುದರಿಂದ
ಜಿಲ್ಲೆಯಲ್ಲಿ ಶಕ್ತಿ ಪ್ರಾಜೆಕ್ಟ್ ಅಷ್ಟೊಂದು ಯಶಸ್ವಿ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೂಂದು ಇತಿಹಾಸ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲಿರುಳು ಪಕ್ಷದ ಸಂಘಟನೆಗಾಗಿ ಶ್ರಮಿಸಬೇಕಾಗಿದೆ. ಇಡೀ ಸಮಾಜ, ದೇಶಕ್ಕೆ ಕೇಂದ್ರ ಸರ್ಕಾರದಿಂದ ಉಂಟಾಗುತ್ತಿರುವ ಗಂಡಾಂತರಗಳ ಬಗ್ಗೆ ಮನವರಿಕೆ ಮಾಡಿಸಿ ಜಾಗೃತಗೊಳಿಸಬೇಕಾದ ಅನಿವಾರ್ಯತೆ ಇದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಎಲ್ಲಾ ವಾರ್ಡ್‌ಗಳಲ್ಲಿ, ಜಿಲ್ಲೆಯ ಪ್ರತಿ ತಾಲೂಕು,
ಗ್ರಾಮಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ಶಕ್ತಿ ಪ್ರಾಜೆಕ್ಟ್ ನೋಂದಾವಣೆ ಕಾರ್ಯದ ಯಶಸ್ಸಿಗೆ ಶ್ರಮಿಸಬೇಕು ಎಂದು ತಿಳಿಸಿದರು. 

ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ ಮಾತನಾಡಿ, 2013ರಲ್ಲಿ ಸರ್ಕಾರ ರಚನೆ ಮಾಡುವಾಗ ದಾವಣಗೆರೆಯಿಂದ ಉತ್ತಮ ಕೊಡುಗೆ ದೊರೆತಿತ್ತು. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವುದರೊಂದಿಗೆ ಅಧಿಕಾರಕ್ಕೆ ಬರಲೆಂಬ ಆಶಾದಾಯಕ ಉದ್ದೇಶವಿದೆ. ಅದಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಲೆಂದೇ ರಾಹುಲ್‌ ಗಾಂಧಿ ಅವರು ಶಕ್ತಿ ಪ್ರಾಜೆಕ್ಟ್ ಯೋಜನೆ ತಂದಿದ್ದಾರೆ. ಆದರಿಲ್ಲಿ ಇಷ್ಟೊಂದು ನೀರಸ ಪ್ರತಿಕ್ರಿಯೆ ದೊರೆತಿರುವುದು ಸರಿಯಲ್ಲ ಎಂದು ಹೇಳಿದರು.

ದೇಶದಲ್ಲಿ ಆಡಳಿತ ಪಕ್ಷದಿಂದ ಭಯದ ವಾತಾವರಣ, ಸುಳ್ಳಿನ ರಾಜಕಾರಣ ನಡೆಯುತ್ತಿದೆ. ಪಕ್ಷದ ಬಲವರ್ಧನೆ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಕಾರ್ಯಕರ್ತರು, ಮುಖಂಡರು ಸದಾ ಜಾಗೃತರಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಸೋನಿಯಾ ಗಾಂಧಿ ಅವರು ಪಕ್ಷಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಜನ್ಮದಿನವನ್ನು ಇಂದು ಆಚರಣೆ ಮಾಡಿರುವುದು ತುಂಬಾ ಸಂತಸ ಉಂಟುಮಾಡಿದೆ ಎಂದರು.

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಶಕ್ತಿ ಪ್ರಾಜೆಕ್ಟ್‌ನಡಿ ಜಿಲ್ಲೆಯಲ್ಲಿ ನೋಂದಣಿ ಮಾಡಿಸಲು ನ.30 ರವರೆಗೆ ಸಮಯವನ್ನು ಕೆಪಿಸಿಸಿ ಅಧ್ಯಕ್ಷರು ನೀಡಿದ್ದರು. ಆದರೆ, ನಿರೀಕ್ಷೆ ಮಟ್ಟದಲ್ಲಿ ಈ ಕೆಲಸ ಆಗದ ಕಾರಣ ಡಿ.15 ರವರೆಗೆ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.  ಬಿಜೆಪಿಯವರು ರಾಮಮಂದಿರ ‌ಕಟ್ಟಲು 1992 ರಲ್ಲಿ ಯಾತ್ರೆ ಹಮ್ಮಿಕೊಂಡು ಇಟ್ಟಿಗೆ, ಹಣ ಸಂಗ್ರಹ ಮಾಡಿದರು. ಆ ಹಣ ಎಲ್ಲಿ ಹೋಯ್ತು. ನಿಜಕ್ಕೂ ಕೂಡ ಬಿಜೆಪಿಯವರಿಗೆ ರಾಮಮಂದಿರ ಕಟ್ಟುವ ಉದ್ದೇಶವಿಲ್ಲ. ಆದರೆ ಈಗ ಯಾತ್ರೆ ಹೆಸರಿನಲ್ಲಿ ರಾಮಮಂದಿರ ಕಟ್ಟುವ ಮಾತುಗಳನ್ನಾಡುತ್ತಾ, ಗದ್ದಲ, ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ಬುಡಸಮೇತ ಉರುಳಿಸಬೇಕಿದೆ ಎಂದರು. 

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌ ಮಾತನಾಡಿ, ರಾಷ್ಟ್ರದಲ್ಲಿ 10 ಲಕ್ಷ, ರಾಜ್ಯದಲ್ಲಿ 54,261 ಮತಗಟ್ಟೆಗಳಿದ್ದು, ಈ ಎಲ್ಲಾ ಮತಗಟ್ಟೆಗಳಲ್ಲಿ ಪ್ರತಿಯೊಂದು ಬೂತ್‌ನಿಂದ 20 ರಿಂದ 100 ಜನರನ್ನ ರಾಹುಲ್‌ಗಾಂಧಿ ಅವರ ಕನಸಿನ ಕೂಸಾದ ಶಕ್ತಿ ಪ್ರಾಜೆಕ್ಟ್ಗೆ ನೋಂದಣಿ ಮಾಡಿಸುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಮೇಯರ್‌ ಶೋಭಾ ಪಲ್ಲಾಗಟ್ಟಿ, ಉಪ ಮೇಯರ್‌ ಕೆ. ಚಮನ್‌ಸಾಬ್‌, ಮಾಜಿ ಮೇಯರ್‌ ಅನಿತಾಬಾಯಿ, ನಗರಸಭಾ ಮಾಜಿ ಉಪಾಧ್ಯಕ್ಷ ಎ. ನಾಗರಾಜ್‌, ರಾಜ್ಯ ಮಹಿಳಾ ಕಾಂಗ್ರೆಸ್‌ನ ಪುಷ್ಪಾ, ರಾಜ್ಯ ಉಸ್ತುವಾರಿ ಭವ್ಯ ನರಸಿಂಹಮೂರ್ತಿ, ದಾವಣಗೆರೆ ದಕ್ಷಿಣ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸೈಯದ್‌ ಖಾಲಿದ್‌, ಬಿ.ಎಚ್‌. ವೀರಭದ್ರಪ್ಪ, ನಂಜಾನಾಯ್ಕ, ಗೀತಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

800 ನೋಂದಣಿ ಗುರಿ 18 ರಿಂದ 35 ವರ್ಷದೊಳಗಿನ ಯುವತಿಯರಿಗಾಗಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಪ್ರಿಯದರ್ಶಿನಿ ಯೋಜನೆ ಹುಟ್ಟುಹಾಕಿದ್ದು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಉದ್ಯೋಗ ಈ ನಾಲ್ಕು ಸೂತ್ರಗಳನ್ನು ಒಳಗೊಂಡಿದೆ. ಈ ಬಾರಿ ಜಿಲ್ಲೆಯಲ್ಲಿ 800 ಮಹಿಳೆಯರನ್ನು ಈ ಯೋಜನೆಯಡಿ ಸದಸ್ಯತ್ವ ಮಾಡಿಸಬೇಕಾದ ಗುರಿ ಇದೆ ಎಂದು ಪ್ರಿಯದರ್ಶಿನಿ ಯೋಜನೆ ರಾಜ್ಯ ಸಂಚಾಲಕಿ ಭವ್ಯ ನರಸಿಂಹಮೂರ್ತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next