Advertisement
ಆದರೆ, ರಾಜ್ಯಮಟ್ಟದ ನಾಯಕರ ತೀರ್ಮಾನದಂತೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್, ಜಿಪಂನಲ್ಲೂ ಜೆಡಿಎಸ್ ಜೊತೆಗೆ ಮೈತ್ರಿಗೆ ಮುಂದಾಗಿದೆ. ಪಕ್ಷದ ನಾಯಕರ ಸೂಚನೆ ಮೇರೆಗೆ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Related Articles
Advertisement
ಸಭೆ ನಡೆಸಲು 36 ಸದಸ್ಯರ ಹಾಜರಿ ಅವಶ್ಯ. ಆದರೆ, ಸಭೆ ಆರಂಭವಾದಾಗ ಹಾಜರಿದ್ದವರು 23 ಸದಸ್ಯರು ಮಾತ್ರ, ಶಾಸಕ, ಸಂಸದರು ಈ ಸಭೆಯತ್ತ ಬರಲೇ ಇಲ್ಲ. ಹೀಗಾಗಿ ಅಧ್ಯಕ್ಷೆ ನಯಿಮಾ ಸುಲ್ತಾನ ಏಕಾಏಕಿ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಸ್ವಪಕ್ಷ ಜೆಡಿಎಸ್ ಸದಸ್ಯರನ್ನೇ ಕೆರಳಿಸಿತು.
ಸಾಮಾನ್ಯ ಸ್ಥಾಯಿ ಸಮಿತಿ-6, ಹಣಕಾಸು ಸ್ಥಾಯಿ ಸಮಿತಿ-6, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ-7, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ-7, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ-7 ಸದಸ್ಯರ ಆಯ್ಕೆಗೆ ಬೆಳಗ್ಗೆ 11ಗಂಟೆಗೆ ಸಭೆ ಕರೆಯಲಾಗಿದ್ದರೂ ಸಂಸದ ಆರ್.ಧ್ರುವನಾರಾಯಣ
ನೇತೃತ್ವದಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿ ಜಿಪಂ ಕಾಂಗ್ರೆಸ್ ಸದಸ್ಯರ ಸಭೆ ನಡೆದ ಕಾರಣ, 10 ನಿಮಿಷ ತಡವಾಗಿ ಬಂದರು. 11.22ಕ್ಕೆ ಸಭಾಂಗಣಕ್ಕೆ ಆಗಮಿಸಿದ ಅಧ್ಯಕ್ಷೆ ನಯಿಮಾ ಸುಲ್ತಾನ ಕೋರಂ ಅಭಾವವಿರುವುದರಿಂದ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು.
ಅಧ್ಯಕ್ಷರ ರೂಲಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ, ಸ್ಥಾಯಿ ಸಮಿತಿ ಸದಸ್ಯರ ಅವಧಿ ಮುಗಿದು ಮೂರು ತಿಂಗಳಾಗಿದೆ. ಏಪ್ರಿಲ್ 29ಕ್ಕೆ ಸ್ಥಾಯಿ ಸಮಿತಿ ಚುನಾವಣೆ ನಿಗಧಿಯಾಗಿತ್ತು. ನೀತಿಸಂಹಿತೆ ಜಾರಿಯಾದ ಕಾರಣದಿಂದ ನಡೆದಿಲ್ಲ. ಹೀಗಾಗಿ ಇಂದೇ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ದಿನಾಂಕ ನಿಗದಿ ಮಾಡಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಯಿಮಾ ಸುಲ್ತಾನ, ಪಕ್ಷದ ವರಿಷ್ಠರ ಜೊತೆಗೆ ಮಾತನಾಡಿ, ಒಂದೆರಡು ದಿನಗಳಲ್ಲಿ ದಿನಾಂಕ ತಿಳಿಸುವುದಾಗಿ ಹೇಳಿದರು. ಜೆಡಿಎಸ್‌ನ ಎಂ.ಪಿ.ನಾಗರಾಜು ಮಾತನಾಡಿ, ಅಧ್ಯಕ್ಷರು ಆಡಳಿತ ನಡೆಸುವಲ್ಲಿ ವಿಫಲರಾಗಿದ್ದೀರಿ, ಮೊದಲೇ ವರಿಷ್ಠರ ಜೊತೆ ಚರ್ಚೆ ನಡೆಸಿ ತೀರ್ಮಾನಿಸಿಕೊಂಡು ಸಭೆಗೆ ಬರಬೇಕೆಂದರು. ಜಿಪಂ ವ್ಯವಸ್ಥೆಯಲ್ಲೇ ಈ ರೀತಿ ಎಂದೂ ಸಭೆ ನಡೆದಿಲ್ಲ. ಕೋರಂ ಕೊರತೆ ಇದ್ದರೆ ಅರ್ಧ ಗಂಟೆ ಮುಂದೂಡಬೇಕು, ಏಕಾಏಕಿ ಅನಿರ್ದಿಷ್ಟಾವಧಿ ಮುಂದೂಡುವುದಲ್ಲ ಎಂದು ಬೀರಿಹುಂಡಿ ಬಸವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷರು ಮೌನ ವಹಿಸಿದಾಗ ಜಿಪಂ ಸಿಇಒ ಅನುಪಸ್ಥಿತಿಯಲ್ಲಿ ಸಭೆಯಲ್ಲಿದ್ದ ಉಪ ಕಾರ್ಯದರ್ಶಿ ಕೆ.ಶಿವರಾಮೇಗೌಡ, ಸಭೆ ಮುಂದೂಡಿರುವುದನ್ನು ಪ್ರಕಟಿಸಿ ಹೊರ ನಡೆದರು. ಆಗಲೂ ಜೆಡಿಎಸ್ ಸದಸ್ಯರು ಅಧ್ಯಕ್ಷರ ಮೇಲೆ ವಾಗ್ಧಾಳಿ ನಡೆಸಿದ್ದರಿಂದ ಕಾಂಗ್ರೆಸ್‌ನ ಡಿ.ರವಿಶಂಕರ್, ಸಭೆ ಮುಂದೂಡಿ ರೂಲಿಂಗ್ ಕೊಟ್ಟ ಮೇಲೆ ಏಕೆ ಮಾತಾಡ್ತೀರಾ ಎಂದು ಜೆಡಿಎಸ್ ಸದಸ್ಯರೊಂದಿಗೆಗೆ ವಾಗ್ವಾದ ನಡೆಸಿದರು. ಬಳಿಕ ಮತ್ತೆ ಅಧ್ಯಕ್ಷರನ್ನು ಸಭಾಂಗಣಕ್ಕೆ ಕರೆಸಿ ಅರ್ಧಗಂಟೆ ಸಭೆ ಮುಂದೂಡಿಸಲಾಯಿತು. ಬಳಿಕ ಕೋರಂ ಸೇರದ್ದರಿಂದ 8-10 ದಿನಗಳಲ್ಲಿ ಸಭೆ ಕರೆಯುವುದಾಗಿ ಅಧ್ಯಕ್ಷೆ ನಯಿಮಾ ಸುಲ್ತಾನ ತಿಳಿಸಿದರು.