Advertisement

ಇಂದು ವ್ಯಾಪಾರಿಗಳ ಸ್ಥಳಾಂತರ ಸಾಧ್ಯತೆ

12:18 AM Jul 15, 2019 | Team Udayavani |

ಮಹಾನಗರ: ಕದ್ರಿಯ ಶಿಥಿಲಾವಸ್ಥೆಯಲ್ಲಿದ್ದ ಹಳೆ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡುವ ಉದ್ದೇಶದಿಂದ ವ್ಯಾಪಾರಿಗಳಿಗೆ ತಾತ್ಕಾಲಿಕ ಮಳಿಗೆ ನಿರ್ಮಾಣ ಕಾಮಗಾರಿ ಹಳೆ ಮಾರುಕಟ್ಟೆ ಮುಂಭಾಗದಲ್ಲಿ ಮುಕ್ತಾಯಗೊಂಡಿದ್ದು, ಸೋಮವಾರ ವ್ಯಾಪಾರಿಗಳು ಸ್ಥಳಾಂತರಗೊಳ್ಳಲಿದ್ದಾರೆ.

Advertisement

ಪಾಲಿಕೆ ಅಧೀನದಲ್ಲಿರುವ ಕದ್ರಿ ಮಾರುಕಟ್ಟೆಯಲ್ಲಿ ಒಟ್ಟು 45 ಮಳಿಗೆ ಗಳು ವ್ಯಾಪಾರ ನಡೆಸುತ್ತಿದ್ದು, ಈಗ ಕಾರ್ಯಾಚರಿಸುತ್ತಿರುವ ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ. ಕಾಮಗಾರಿ ಆರಂಭಗೊಂಡು ಮುಗಿಯು ವವರೆಗೆ ವ್ಯಾಪಾರಿಗಳಿಗೆ ವ್ಯವಹಾರ ನಡೆ ಸಲು ಅನುಕೂಲ ವಾಗುವಂತೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.

34 ವ್ಯಾಪಾರಿಗಳು ಶಿಫ್ಟ್‌!
ತಾತ್ಕಾಲಿಕ ವ್ಯವಸ್ಥೆಯಲ್ಲಿ 34 ಮಳಿಗೆ ಗಳಿಗೆ ಅವಕಾಶವಿದ್ದು, ಶೌಚಾಲಯ ಸಹಿತ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. 12 ತಿಂಗಳೊಳಗೆ ಈ ಕಾಮಗಾರಿ ಮುಗಿಸಬೇಕಾಗಿರುವುದರಿಂದ, ಕಾಮಗಾರಿ ಆರಂಭವಾದ ದಿನದಿಂದ 1 ವರ್ಷದವರೆಗೆ ತಾತ್ಕಾಲಿಕವಾಗಿ ಈಗಿನ ಮಾರುಕಟ್ಟೆಯ ಮುಂಭಾಗಕ್ಕೆ ವ್ಯಾಪಾರಿಗಳನ್ನು ಸ್ಥಳಾಂತರಗೊಳಿಸಲು ಯೋಚಿಸಲಾಗಿದೆ. ಸೋಮವಾರ 34 ವ್ಯಾಪಾರಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ನೂತನ ಮಳಿಗೆಗೆ ನಾಮಫಲಕ ಅಳವಡಿಸಿ ಪೂಜೆ ಮಾಡಲಾಗಿದೆ.

ಹೊಸ ಮಾರುಕಟ್ಟೆಯೊಳಗೆ
ಹೊಸದಾಗಿ ನಿರ್ಮಾಣವಾಗಲಿರುವ ಮಾರುಕಟ್ಟೆ ಒಟ್ಟು 6,920 ಚದರ ಮೀಟರ್‌ ವಿಸ್ತೀರ್ಣದಲ್ಲಿ ಮೂರು ಅಂತಸ್ತುಗಳಲ್ಲಿ ತಲೆ ಎತ್ತಲಿದೆ. ಕೆಳಮಟ್ಟದ ತಳ ಅಂತಸ್ತು 1,090 ಚ.ಮೀ. ಹಾಗೂ ಮೇಲ್ಮಟ್ಟದ ತಳ ಅಂತಸ್ತು 924.29 ಚ.ಮೀ. ವಿಸ್ತೀರ್ಣವಿರಲಿದ್ದು, ಇದರಲ್ಲಿ ವಾಹನ ನಿಲುಗಡೆ, ಸರ್ವಿಸ್‌ಗೆಅವಕಾಶವಿದೆ. ಉಳಿದಂತೆ 957.17 ಚ.ಮೀ. ವಿಸ್ತೀರ್ಣದ ಕೆಳ ಮಟ್ಟದ ನೆಲ ಅಂತಸ್ತುವಿನಲ್ಲಿ ನಾನ್‌ವೆಜ್‌ ಮಳಿಗೆಗಳು/ಶಾಪ್‌ಗ್ಳು, 989.54 ಚ.ಮೀ. ಮೇಲ್ಮಟ್ಟದ ನೆಲ ಅಂತಸ್ತಿನಲ್ಲಿ ವೆಜಿಟೆಬಲ್ ಮಳಿಗೆಗಳು/ಶಾಪ್‌ಗ್ಳಿಗೆ ಅವಕಾಶವಿದೆ. 985.97 ಚ.ಮೀ. ವಿಸ್ತೀರ್ಣದ ಮೊದಲನೇ ಅಂತಸ್ತು, 986 ಚ.ಮೀ.ನ ಎರಡನೇ ಅಂತಸ್ತು ಹಾಗೂ 987.23 ಚ.ಮೀ.ನ ಮೂರನೇ ಅಂತಸ್ತಿನಲ್ಲಿ ಆಫೀಸ್‌ ಕಚೇರಿಗಳು ಇರಲಿವೆ.

ಸ್ಥಳಾಂತರಗೊಂಡ ಬಳಿಕ ಹಳೆ ಮಾರುಕಟ್ಟೆ ನೆಲಸಮ

ಕಳೆದ ವಾರವೇ ವ್ಯಾಪರಿಗಳನ್ನು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ತಿಳಿಸಿದ್ದೆವು. ಸೋಮವಾರ ವರೆಗೆ ಅವಕಾಶ ನೀಡಲಾಗಿದೆ. ವ್ಯಾಪಾರಿಗಳು ಸೋಮವಾರ ಸ್ಥಳಾಂತರಗೊಳ್ಳುವ ಬಗ್ಗೆ ತಿಳಿಸಿದ್ದಾರೆ. ವ್ಯಾಪಾರಿಗಳ ಸ್ಥಳಾಂತರ ಬಳಿಕ ಹಳೆ ಮಾರುಕಟ್ಟೆ ನೆಲಸಮ ಮಾಡಿ ನೂತನ ಮಾರುಕಟ್ಟೆಯ ಕಾಮಗಾರಿ ನಡೆಯಲಿದೆ.
– ಲಿಂಗೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್‌
Advertisement

Udayavani is now on Telegram. Click here to join our channel and stay updated with the latest news.

Next