Advertisement

ಕೋವಿಡ್ ಕಾಲದಲ್ಲಿ ಆನ್‌ಲೈನ್‌ ಶಿಕ್ಷಣ ಸಾಧ್ಯವೇ ?

03:29 AM Jun 06, 2020 | Hari Prasad |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳು ಸದ್ಬಳಕೆಯಾಗದೇ
ಧೂಳು ತಿನ್ನುತ್ತಿವೆ.
ಸಮರ್ಪಕ ವಿದ್ಯುತ್‌ ವ್ಯವಸ್ಥೆಯಿಲ್ಲದ ಎಷ್ಟೋ ಶಾಲೆಗಳಿವೆ, ಇಂಟರ್ನೆಟ್‌ ಅಂತೂ ಕೇಳುವಂತಿಲ್ಲ.
ಹೀಗಿರುವಾಗ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಪ್ರಸ್ತಾವಿಸಿರುವ ಆನ್‌ ಲೈನ್‌ ಶಿಕ್ಷಣ ಸರಕಾರಿ ಶಾಲೆಯಲ್ಲಿ ಅನುಷ್ಠಾನ ಸಾಧ್ಯವೇ? ಇದು ಪಾಲಕರ ಪ್ರಶ್ನೆ.

Advertisement

ಸಚಿವ ಸುರೇಶ್‌ ಕುಮಾರ್‌ ಅವರು ಶಿಕ್ಷಣದ ವಿಚಾರದಲ್ಲಿ ಕೈಗೊಳ್ಳುತ್ತಿರುವ ಗೊಂದಲಗಳ ನಿರ್ಧಾರಗಳಲ್ಲಿ ಆನ್‌ಲೈನ್‌ ತರಗತಿ ಪ್ರಾರಂಭವೂ ಒಂದಾಗಿದೆ.

ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ಕನಿಷ್ಠ ವ್ಯವಸ್ಥೆಯು ರಾಜ್ಯದ ಶೇ.90ರಷ್ಟು ಸರಕಾರಿ ಶಾಲೆಯಲ್ಲಿಲ್ಲ. ಕೆಲವೇ ಕೆಲವು ಪ್ರೌಢಶಾಲೆಯಲ್ಲಿ ಆನ್‌ಲೈನ್‌ ಕಲಿಕೆಗೆ ಪೂರಕವಾದ ಕೆಲವು ಸೌಲಭ್ಯ ಸಿಗಬಹುದು. ಅದರೆ, ಖಾಸಗಿ ಶಾಲೆಗಳ ಕಂಪ್ಯೂಟರ್‌ ಲ್ಯಾಬ್‌ ಸುಸಜ್ಜಿತವಾಗಿದೆ, ಸ್ಮಾರ್ಟ್‌ ಬೋರ್ಡ್‌ ಪರಿಕಲ್ಪನೆಯನ್ನು ಈಗಾಗಲೇ ಅಳವಡಿಸಿಕೊಂಡಿವೆ. ಟಿವಿ ವ್ಯವಸ್ಥೆಯಿದೆ.

ಆದರೆ, ಸರಕಾರಿ ಶಾಲೆಯಲ್ಲಿ ಸೂಕ್ತ ಕೊಠಡಿಯೇ ಇಲ್ಲ, ಇನ್ನು ಆನ್‌ಲೈನ್‌ ಕ್ಲಾಸ್‌ ನಡೆಸಲು ಬೇಕಾದ ಸೌಲಭ್ಯ ಎಲ್ಲಿರಲು ಸಾಧ್ಯ. ಸಚಿವ ಸುರೇಶ್‌ ಕುಮಾರ್‌ ಅವರ ಆನ್‌ಲೈನ್‌ ತರಗತಿಯ ಪ್ರಸ್ತಾವವು ಖಾಸಗಿ ಲಾಬಿಗೆ ಮಣಿದ ಪರಿ ಎಂಬ ಮಾತುಗಳು ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ಇಲ್ಲ. ಶಿಕ್ಷಕ ಕೊಠಡಿಯಲ್ಲಿ ಒಂದು ಕಂಪ್ಯೂಟರ್‌ ಇದ್ದು, ಅದನ್ನು ಮುಖ್ಯಶಿಕ್ಷಕರು ಆಡಳಿ ತಾತ್ಮಕ ಕಾರ್ಯಕ್ಕೆ ಬಳಸುತ್ತಿದ್ದಾರೆ. ಪ್ರೌಢ ಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಕಲಿಕಾ ಕಾರ್ಯಕ್ರಮಕ್ಕಾಗಿ (ಟಿಎಎಲ್‌ ಪಿ) 1197 ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಸುಮಾರು 5 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.

Advertisement

4404 ಪ್ರೌಢಶಾಲೆಯ 12ಸಾವಿರ ಶಿಕ್ಷಕರಿಗೆ ಇಂಡಕ್ಷನ್‌ ತರಬೇತಿ ನೀಡಲಾಗಿದೆ. ಕೇವಲ 2500 ಪ್ರೌಢಶಾಲೆಗೆ ಲ್ಯಾಪ್‌ಟಾಪ್‌ ಹಾಗೂ ಪ್ರಾಜೆಕ್ಟರ್‌ ನೀಡಲಾಗಿದೆ. ಉಳಿದ ಶಾಲೆಗೆ ಕಂಪ್ಯೂಟರ್‌ ಇಲ್ಲ, ಲ್ಯಾಬ್‌ ಕೇಳುವಂತಿಲ್ಲ.
ಹೀಗಾಗಿ ಮೂಲಭೂತ ವ್ಯವಸ್ಥೆಯೇ ಇಲ್ಲದೇ ಆನ್‌ಲೈನ್‌ ಶಿಕ್ಷಣ ಹೇಗೆ ನೀಡಲಾಗುವುದು ಎಂಬುದಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹಾಗೂ ಶಿಕ್ಷಣ ಇಲಾಖೆಯೇ ಉತ್ತರ ನೀಡಬೇಕು.

ಮಕ್ಕಳ ಕಲಿಕೆಗೆ ಅಗತ್ಯವಿರುವ ಪುಸ್ತಕವನ್ನೂ ಶಾಲಾರಂಭದಲ್ಲಿ ನೀಡಲು ಸಾಧ್ಯವಾಗದ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಸರಕಾರಿ ಶಾಲೆಯ ಲಕ್ಷಾಂತರ ಮಕ್ಕಳಿಗೆ ಆನ್‌ಲೈನ್‌ ಕಲಿಕೆಗೆ ಬೇಕಾದ ಪರಿಕರ ಒದಗಿಸಲು ಸಾಧ್ಯವೇ ಎಂಬ ಪ್ರಶ್ನೆ ಪಾಲಕರಿಂದ ಕೇಳಿಬರುತ್ತಿದೆ.

ಮೊಬೈಲ್‌ ಸರಕಾರ ನೀಡುವುದೇ?
ಶಾಲೆಯಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆಯಿಲ್ಲ, ಆನ್‌ಲೈನ್‌ ಕಲಿಕೆಗೆ ಮೊಬೈಲ್‌ ಬೇಕು.
ಒಂದು ಮನೆಯಲ್ಲಿ ಬೇರೆ ಬೇರೆ ತರಗತಿಯ ಎರಡು ಅಥವಾ ಮೂರು ಮಕ್ಕಳಿದ್ದರೆ, ಪಾಲಕರ ಒಂದೇ ಮೊಬೈಲ್‌ನಲ್ಲಿ ಮೂವರ ಕಲಿಕೆ ಹೇಗೆ? ಶಿಕ್ಷಣ ಇಲಾಖೆ ಅಥವಾ ಸರಕಾರ ಮಕ್ಕಳಿಗೆ ಮೊಬೈಲ್‌ ನೀಡುವುದೇ? ಅಥವಾ ಮೊಬೈಲ್‌ ಗೆ ಬೇಕಾದ ಇಂಟರ್ನೆಟ್‌ ಡಾಟಾ ಸೌಲಭ್ಯ ಸರಕಾರ ಉಚಿತವಾಗಿ ನೀಡುವುದೇ ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next