Advertisement

ಪಿಒಎಸ್‌ ಯಂತ್ರವನ್ನು ಸರಕಾರವೇ ಒದಗಿಸಲಿ

11:14 AM May 10, 2017 | Team Udayavani |

ಮಂಗಳೂರು: ಪಡಿತರ ವಿತರಣೆಗೆ ಸರಕಾರ ಜಾರಿಗೆ ತಂದಿದ್ದ ಕೂಪನ್‌ ವ್ಯವಸ್ಥೆ ಅವೈಜ್ಞಾನಿಕ ಎಂಬ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಪಿಒಎಸ್‌ ಯಂತ್ರ ಅಳವಡಿಕೆ ಪಡಿತರ ವಿತರಕರಿಗೆ ಹೊರೆಯಾಗಿದೆ. ಅದನ್ನು ಸರಕಾರವೇ ಒದಗಿಸಬೇಕು ಎಂದು ಪಡಿತರ ವಿತರಕರ ಮತ್ತು ನೌಕರರ ಸಂಘದ ಮಂಗಳೂರು ವಿಭಾಗ ಆಗ್ರಹಿಸಿದೆ.

Advertisement

ಸಂಘದ ಅಧ್ಯಕ್ಷ ಕೇಶವ ಮೂರ್ತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕೂಪನ್‌ ವ್ಯವಸ್ಥೆಯಿಂದ ಪಡಿತರ ವಿತರಕರು ಹಾಗೂ ಗ್ರಾಹಕರು ಅನೇಕ ತೊಂದರೆ ಅನುಭವಿಸಿದ್ದಾರೆ. ಈಗ ಮತ್ತೆ ಪಿಒಎಸ್‌ ಯಂತ್ರ ಅಳವಡಿಕೆಗೆ ಸರಕಾರ ಆಗ್ರಹಿಸುವ ಮೂಲಕ ವಿತರಕರ ಜೇಬಿಗೆ ಕತ್ತರಿ ಹಾಕುವ ಕಾರ್ಯ ನಡೆಸುತ್ತಿದೆ ಎಂದು ಆಪಾದಿಸಿದರು.

ಸಾಧಕ-ಬಾಧಕ ನೋಡಿ
ಸರಕಾರ ಈ ಯೋಜನೆಯನ್ನು ಪೈಲಟ್‌ ರೀತಿಯಲ್ಲಿ ಆರಂಭಿಸಿ ಅದರ ಸಾಧಕ-ಬಾಧಕಗಳನ್ನು ಅರಿತ ಬಳಿಕವಷ್ಟೇ ಸಂಪೂರ್ಣ ಅನುಷ್ಠಾನಕ್ಕೆ ಮುಂದಾಗಬೇಕು. ಸರಕಾರವೇ ಈ ವ್ಯವಸ್ಥೆ ಒದಗಿಸಬೇಕು ಎಂದರು. ಪಿಒಎಸ್‌ ಯಂತ್ರ ಕಾರ್ಯಾಚರಿಸಲು ನ್ಯಾಯ ಬೆಲೆ ಅಂಗಡಿಯ ಮಾಲಕರ ಬೆರಳಚ್ಚು ಅಗತ್ಯ. ಇದರಿಂದ ಅಂಗಡಿ ಮಾಲಕರು ಅಂಗಡಿ ಬಿಟ್ಟು ಹೋಗುವಂತಿಲ್ಲ. ಮಾಲಕರು ಸೂಚಿಸುವ ಇನ್ನೊಬ್ಬ ವ್ಯಕ್ತಿಗೂ ಇದು ಅನ್ವಯವಾಗುವಂತೆ ಮಾಡಧಿಬೇಕು ಎಂದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಪಡಿತರ ವಿತರಣೆಗೆ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಲು ಸೂಚಿಸಲಾಗಿದೆ. ಅದಕ್ಕೆ ಸುಮಾರು 10,000 ರೂ. ವೆಚ್ಚವಾಗಲಿದೆ. ಅದನ್ನು ಖರೀದಿ ಮಾಡುವಷ್ಟು ಲಾಭಾಂಶ ವಿತರಕರಿಗೆ ಇಲ್ಲ ಎಂದು ಸಂಘದ ಮಂಗಳೂರು ಗ್ರಾಮಾಂತರ ಪ್ರದೇಶದ ಅಧ್ಯಕ್ಷ ಶಿವರಾಮ ಮಲ್ಲಿ ತಿಳಿಸಿದರು. ಭಾಸ್ಕರ್‌ ಸಾಲಿಯಾನ್‌, ಶೇಖರ್‌ ಅಮೀನ್‌, ಫೈರೋಝ್ ಡಿ.ಎಲ್‌. ಉಪಸ್ಥಿತರಿದ್ದರು.

ರಗಳೆಯೇ ಬೇಡ !
ಕೂಪನ್‌ ವ್ಯವಸ್ಥೆ, ಪಿಒಎಸ್‌ ಯಂತ್ರ ಅಳವಡಿಕೆ ಗೊಂದಲದಿಂದ ಈಗಾಗಲೇ ಮಂಗಳೂರು ನಗರದ 70 ಮಂದಿ ಪಡಿತರ ವಿತರಕರಲ್ಲಿ 10 ಮಂದಿ ಈ ಕಾರ್ಯವನ್ನೇ ಬಿಟ್ಟಿದ್ದಾರೆ. ಮತ್ತೆ 8 ಮಂದಿ ಬಿಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಶವ ಮೂರ್ತಿ ಮತ್ತು ಶಿವರಾಮ ಮಲ್ಲಿ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next