Advertisement

ಬೀಜ ನಿಗಮದಿಂದಲೇ ಕಳಪೆ ಬೀಜ ಪೂರೈಕೆ?

06:00 AM Nov 01, 2018 | |

ಧಾರವಾಡ: ತಾಯಿಯ ಹಾಲೇ ವಿಷವಾದೊಡೆ, ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರಿಗೆ ಹೇಳುವುದು? ರೈತರಿಗೆ ಉತ್ತಮ ಫಸಲು ಬರುವಂತಹ ದೃಢೀಕರಿಸಿದ ಬೀಜ ಪೂರೈಸಬೇಕಾದ ಬೀಜ ನಿಗಮವೇ ಕಳಪೆ ಬೀಜ ಕೊಟ್ಟರೆ ನಾವು ಯಾರಿಗೆ ಹೇಳುವುದು? ಬಿಳಿ ಗೋವಿನಜೋಳ ಬೆಳೆದ ರೈತರು ಈ ಪ್ರಶ್ನೆಗಳನ್ನು ಹಾಕಿದ್ದು ಧಾರವಾಡದ ರಾಷ್ಟ್ರೀಯ ಬೀಜ ನಿಗಮಕ್ಕೆ. ಬರಗಾಲ, ಬೆಳೆ ಹಾನಿ, ಸೈನಿಕ ಹುಳದ ಕಾಟ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಂತಹ ಸಂಕಷ್ಟಗಳ ಮಧ್ಯೆ ಕೃಷಿ ಮಾಡುತ್ತಿರುವ ರೈತರಿಗೆ, ಕಳೆದ ನಾಲ್ಕೈದು ವರ್ಷಗಳಿಂದ ಕಳಪೆ ಬೀಜಗಳ ಪೂರೈಕೆಯ ಜಾಲ ಪೆಡಂಭೂತವಾಗಿ ಕಾಡುತ್ತಿದೆ. ಖಾಸಗಿ ಬೀಜ ಕಂಪನಿಗಳು ಕಳಪೆ ಬೀಜ ನೀಡಿದರೆ ಕ್ರಮ ಕೈಗೊಳ್ಳಬಹುದು. ಆದರೆ, ಸರ್ಕಾರದ ಅಧೀನ ಸಂಸ್ಥೆಗಳೇ ಕಳಪೆ ಬೀಜ ನೀಡಿದರೆ ರೈತರು ಎಲ್ಲಿಗೆ ಹೋಗಬೇಕು ಎನ್ನುವ ಪ್ರಶ್ನೆ ಅನ್ನದಾತರನ್ನು ಕಾಡುತ್ತಿದೆ.

Advertisement

ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಧಾರವಾಡ, ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಬಿಳಿ ಗೋವಿನಜೋಳ ಬೆಳೆದ ಸಾವಿರಕ್ಕೂ ಅಧಿಕ ರೈತರು ಬಿಳಿ ಗೋವಿನಜೋಳ ತೆನೆ ಬಿಡದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. “ಕನಕ’ ಕಳಪೆ ಹತ್ತಿ ಬೀಜದ ಹಾವಳಿಯಿಂದ ಹೊರ ಬಂದ ಈ ಭಾಗದ ರೈತರು ಕಳೆದ ನಾಲ್ಕೈದು ವರ್ಷಗಳಿಂದ ಸಾದಾ ಗೋವಿನಜೋಳ ಬಿತ್ತನೆ ಮಾಡಿ
ಬೆಳೆ ತೆಗೆಯುತ್ತಿದ್ದರು. ಆದರೆ, ರಾಷ್ಟ್ರೀಯ ಬೀಜ ನಿಗಮದ ಅಧಿಕಾರಿಗಳು ರೈತರಿಗೆ ಹೆಚ್ಚಿನ ಆಸೆ ತೋರಿಸಿ, ಸಾದಾ ಗೋವಿನಜೋಳದ ಬದಲು ಬಿಳಿ ಗೋವಿನಜೋಳಕ್ಕೆ ಹೆಚ್ಚಿನ ಬೆಲೆ ಮತ್ತು ಬೇಡಿಕೆ ಇದೆ. ಇದನ್ನು ಬೆಳೆಯುವಂತೆ ಸಲಹೆ ನೀಡಿ ಬೀಜ ಮಾರಾಟ ಮಾಡಿದ್ದಾರೆ. ಪರಿಣಾಮ ಇದೀಗ ಬಿಳಿ ಗೋವಿನಜೋಳ ತೆನೆಯನ್ನೆ ಕಟ್ಟದೇ ಹೊಲದಲ್ಲಿನ ಗೋವಿನಜೋಳದ ಬೆಳೆಗೆ ರೈತರು ಬೆಂಕಿ ಇಡುವ ಸ್ಥಿತಿಗೆ ಬಂದಿದ್ದಾರೆ.

ಎಲ್ಲೆಲ್ಲೆ ತೊಂದರೆ?: ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬಿಳಿ ಗೋವಿನಜೋಳ ಬೆಳೆಯಲಾಗುತ್ತಿದೆ. ಈ ಜೋಳಕ್ಕೆ ಸಾದಾ ಗೋವಿನ ಜೋಳಕ್ಕಿಂತಲೂ ದುಪ್ಪಟ್ಟು ಬೆಲೆ
ಇರುವುದು ಸತ್ಯ. ಇದು ಶುದಟಛಿ ಬಿಳಿ ಬಣ್ಣದ ಪಾಪ್‌ ಕಾರ್ನ್ (ಗೋವಿನಜೋಳದ ಅಳ್ಳು) ತಯಾರಿಕೆಗೆ ಬಳಕೆಯಾಗುತ್ತದೆ. ಅಲ್ಲದೇ ಉತ್ತಮ ಬೀಜಗಳನ್ನು ಮರಳಿ ಬಿತ್ತನೆಗೆ ನೀಡಲು ನಿಗಮವೇ ಕ್ವಿಂಟಲ್‌ಗೆ 3,200 ರೂ.ಗಳ ವರೆಗೂ ಖರೀದಿ ಮಾಡುತ್ತದೆ.
ಸದ್ಯಕ್ಕೆ ಧಾರವಾಡದ ಅಮ್ಮಿನಬಾವಿ, ಚಂದನಮಟ್ಟಿ, ಹೆಬ್ಬಳ್ಳಿ, ತಲವಾಯಿ, ಶಿಬಾರಗಟ್ಟಿ ಗ್ರಾಮಗಳಲ್ಲಿ ಬಿಳಿಗೋವಿನ ಜೋಳ ಹೇರಳವಾಗಿ ಬಿತ್ತನೆಯಾಗಿದೆ. ಆರಂಭದಲ್ಲಿ ಹುಲುಸಾಗಿ ಬೆಳೆದು ನಿಂತ ಜೋಳ, ಫಲ ಕೊಡುವ ಸಂದರ್ಭದಲ್ಲಿ ತೆನೆಯನ್ನೇ
ಹಿಡಿದಿಲ್ಲ. ಅಲ್ಲಲ್ಲಿ ಒಂದೊಂದು ತೆನೆ ನಿಂತರೂ ಅದು ದಷ್ಟಪುಷ್ಟವಾಗಿರದೆ ಬರೀ ಗೊಂಡಿ (ಲಂಡೂರಿ) ಮಾತ್ರ ಬೆಳೆದು ಕಾಳುಗಳೇ
ಇಲ್ಲವಾಗಿದೆ. 

ಪರಿಹಾರ ಅಸಾಧ್ಯ: ರೈತರು ಬಿಳಿಗೋವಿನ ಜೋಳ ಬೆಳೆಯುವಂತೆ ನಾವು ಹೇಳಿದ್ದು ನಿಜ. ಆದರೆ, ಈ ವರ್ಷದ ಹವಾಮಾನ ವೈಪರೀತ್ಯದಿಂದ ಬಿಳಿಗೋವಿನ ಜೋಳದ ತಳಿಗಳು ಸರಿಯಾಗಿ ಫಸಲು ನೀಡಿಲ್ಲ. ಗೋವಿನ ಜೋಳ ಫಲಕಟ್ಟುವ ವೇಳೆಯಲ್ಲಿ ಮಳೆಯಾಗಬಾರದು. ಮಳೆಯಾದರೆ ಅದು ತೆನೆ ಬಿಡುವುದೇ ಇಲ್ಲ. ಹೀಗಾಗಿ, ಸಾವಿರಾರು ರೈತರಿಗೆ ಈ ಬಾರಿ ತೊಂದರೆಯಾಗಿದ್ದು ನಿಜ. ಆದರೆ ಅದಕ್ಕೆ ಬೀಜ ನಿಗಮ ಹೊಣೆಯಲ್ಲ ಎನ್ನುತ್ತಿದ್ದಾರೆ ರಾಷ್ಟ್ರೀಯ ಬೀಜ ನಿಗಮದ ಅಧಿಕಾರಿಗಳು. ಒಂದು ವೇಳೆ ಬೆಳೆ ವಿಮೆ
ಮಾಡಿಸಿದ್ದರೆ ರೈತರು ಅಲ್ಲಿಂದ ಪರಿಹಾರ ಪಡೆಯಬೇಕು. ನಮ್ಮ ಸಂಸ್ಥೆಯಿಂದ ಯಾವುದೇ ಪರಿಹಾರದ ಭರವಸೆಯನ್ನು ರೈತರಿಗೆ ನೀಡಿಲ್ಲ ಎಂದು ಬೀಜ ನಿಗಮದ ಅಧಿಕಾರಿಗಳು ಹೇಳುತ್ತಿದ್ದಾರೆ.

ದನವೂ ತಿನ್ನುತ್ತಿಲ್ಲ
ಒಟ್ಟು 5 ಕೆ.ಜಿ. ತೂಕದ ಬಿಳಿ ಗೋವಿನಜೋಳದ ಒಂದು ಪ್ಯಾಕೆಟ್‌ಗೆ 500 ರೂ.ಬೆಲೆ ನಿಗದಿ ಪಡಿಸಲಾಗಿದೆ. ಒಂದು ಎಕರೆಯಲ್ಲಿ ಈ ಬೆಳೆ ಬೆಳೆಯಲು ರೈತರು ಬರೋಬ್ಬರಿ 12-15 ಸಾವಿರ ರೂ.ಗಳಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ಬಿಳಿ ಗೋವಿನಜೋಳ 
ಫಸಲು ಬಿಟ್ಟಿಲ್ಲ. ಒಣಗಿ ನಿಂತ ಮೇವನ್ನು ದನ ಕೂಡ ತಿನ್ನುತ್ತಿಲ್ಲ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ, ನಿಗಮ
ಕನಿಷ್ಟ ಪರಿಹಾರ ಕೊಡಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.

Advertisement

ಮಳೆ ಇಲ್ಲದೆ ಇದ್ದಾಗ ಬೆಳೆ ಒಣಗಿ ಹೋಗುತ್ತದೆ. ಅತಿ ಮಳೆಯಾದಾಗ ಕೆಲವು ಬೆಳೆಗಳು ಹಾಳಾಗುತ್ತವೆ. ಇದು ಸಾಮಾನ್ಯ. ಹಾಗಂತ ಬೀಜ ನಿಗಮವನ್ನು ಹೊಣೆ ಮಾಡುವುದು ಸರಿಯಲ್ಲ. ಬೀಜ ಕೊಡುವುದಷ್ಟೇ ನಮ್ಮ ಕೆಲಸ. ಬೆಳೆಯುವುದು ರೈತರ ಕೆಲಸ.
● ಚಂದನ, ಸಹಾಯಕ ಅಧಿಕಾರಿ, ಬೀಜ ನಿಗಮ ಧಾರವಾಡ

ಉತ್ತಮ ಫಸಲು ನಿರೀಕ್ಷೆ ಇಟ್ಟುಕೊಂಡು ಖರ್ಚು ಮಾಡಿ ಬೆಳೆ ಬೆಳೆದರೆ ಫಸಲೇ ಬರಲಿಲ್ಲ. ಇದಕ್ಕೆ ಬೀಜ ನಿಗಮ ಕಳಪೆ
ಬೀಜಗಳನ್ನು ಕೊಟ್ಟಿದ್ದೇ ಕಾರಣ. ಹೀಗಾದರೆ, ನಾವು ಒಕ್ಕಲುತನ ಮಾಡುವುದು ಹೇಗೆ? ನಮಗೆ ಪರಿಹಾರ ಕೊಡಲೇಬೇಕು.

● ಅಜ್ಜಪ್ಪ ಕುಸುಗಲ್‌, ಚಂದನಮಟ್ಟಿ ರೈತ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next