ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ಗಣೇಶ ಮೂರ್ತಿಗಳ ವಿಸರ್ಜನಾ ಸಂಭ್ರಮ. ನಗರದ ವಿವಿಧ ಬಡಾವಣೆಗಳಲ್ಲಿ ಹಾಗೂ ಸಾಮೂಹಿಕ ಗಣೇಶ ಮಹೊತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಥರಹೇವಾರಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ವಿಸರ್ಜನೆ ಮಾಡಿದ್ದು ಒಂದು ರೀತಿಯಲ್ಲಿ ಜಾತ್ರೆಯಂತಿತ್ತು.
ವಿಸರ್ಜನೆಗೆ ಬಂದಿದ್ದ ಗಣಪನ ಮೂರ್ತಿಗಳ ಪೈಕಿ ಕುದುರೆಯೇರಿ ಬರುತ್ತಿರುವ ಗಣಪ, ಕನ್ನಡಕ ಹಾಕಿ ಪುಸ್ತಕ ಓದುತ್ತಿರುವ ಗಣಪ, ಸಿಂಹಗಳ ನಡುವೆ ವಿರಾಜಮಾನವಾಗಿದ್ದ ಗಣಪ ಮೂರ್ತಿಗಳು ಆಕರ್ಷಕವಾಗಿದ್ದವು. ಗಣಪ ಮೂರ್ತಿಗಳ ವಿಸರ್ಜನೆಗೆ ಕರೆತಂದಿದ್ದ ಭಕ್ತ ಸಮೂಹ ಜೈಕಾರ ಹಾಕುತ್ತಾ ತಮ್ಮ ಗಣಪ ಮೂರ್ತಿ ಬಗ್ಗೆ ಹೆಮ್ಮೆ ಪ್ರದರ್ಶಿಸಿತು. ಗಣಪತಿ ಬಪ್ಪ ಮೋರಿಯಾ…ಎಂದು ಘೋಷಣೆ ಕೂಗಿದರು.
ಜತೆಗೆ ಗಣಪ ಮೂರ್ತಿಗಳು ವಿಸರ್ಜನೆಗೆ ಮೆರವಣಿಗೆ ಮೂಲಕ ಸಾಗುತ್ತಿದ್ದರೆ ಕುದುರೆಯೇರಿ ಬಂದ ಗಣಪ ಹಾಗೂ ಕೂಲಿಂಗ್ ಗ್ಲಾಸ್ ಹಾಕಿರುವ ಬೆನಕನ ಸ್ಟೈಲ್‌ಗೆ ಬೆರಗಾಗಿ ರಸ್ತೆ ಬದಿ ನಿಂತಿದ್ದ ಯುಕವರು ಸಿಳ್ಳೆ ಹಾಕಿದ ಸಂಭ್ರಮಿಸಿಸದರು. ನಗರದ ಪ್ರಮುಖ ಕೆರೆಗಳು ಹಾಗೂ ಪುಷ್ಕರಣಿಗಳ ಬಳಿ ವಿಸರ್ಜನೆಗಾಗಿ ಬಂದ ತರಹೇವಾರಿ ಗಣಪನ ಮೂರ್ತಿಗಳು ಗಮನ ಸೆಳೆದವು.
ಭಾನುವಾರ ಮಧ್ಯಾಹ್ನದಿಂದಲೇ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ಜನರನ್ನು ಆಕರ್ಷಿಸಿತು. ಆಯಾ ವಾರ್ಡ್‌ಗಳಲ್ಲಿಯೇ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮೊಬೈಲ್ ವಿಸರ್ಜನಾ ಟ್ಯಂಕರ್‌ಗಳನ್ನು ಅಳವಡಿಕೆ ಮಾಡಿದ್ದರಿಂದ ಬಡಾವಣೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಸಂಭ್ರಮದಲ್ಲಿ ಭಾಗಿಯಾಗಿದ್ದರು.
ವಾರ್ಡ್‌ಗಳಲ್ಲಿಯೇ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದ್ದರೂ ಕೆರೆ ಹಾಗೂ ಪುಷ್ಕರಣೆಗಳ ಬಳಿಗೆ ನಗರದ ವಿವಿಧ ಭಾಗಗಳಿಂದ ವಿಧ ವಿಧ ಮೂರ್ತಿಗಳು ಬರುವ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮಕ್ಕಳು ತಾವೇ ತಯಾರಿಸಿದ್ದ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಮುಂದಾಗಿದ್ದು ನೋಡುಗರ ಸೆಳೆಯಿತು.