Advertisement

ಲಾಕರ್‌ನಲ್ಲಿದ್ದ ಸಂಪತ್ತಿಗೆ ರಾಜಕಾರಣಿ ನಂಟು

06:05 AM Jul 24, 2018 | |

ಬೆಂಗಳೂರು: ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಕ್ಲಬ್‌ ಲಾಕರ್‌ನಲ್ಲಿ ಪತ್ತೆಯಾಗಿರುವ ನೂರಾರು ಕೋಟಿ ರಹಸ್ಯ ಸಂಪತ್ತಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಐಟಿ ದಾಳಿಗೊಳಗಾಗುವ ಭಯದಿಂದ ಅವಿನಾಶ್‌ ಅಗರ್‌ವಾಲ್‌ ಕುಕ್ರೇಜಾ  ಕ್ಲಬ್‌ನ ಲಾಕರ್‌ನಲ್ಲಿ ವಜ್ರಾಭರಣ ಹಾಗೂ ಆಸ್ತಿ ದಾಖಲೆಗಳನ್ನು ಬಚ್ಚಿಟ್ಟಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.

Advertisement

ಕೆಲ  ವರ್ಷಗಳ ಹಿಂದೆ ಅವಿನಾಶ್‌ ಸ್ನೇಹಿತ ರಾಜ್ಯದ ಪ್ರಭಾವಿ ಬಿಲ್ಡರ್‌ ಮತ್ತು ವಿವಿಧ ಸಂಸ್ಥೆಗಳ ಮಾಲೀಕರೊಬ್ಬರ ವ್ಯವಹಾರಗಳ ಮೇಲೆ ಐಟಿ ದಾಳಿ ನಡೆದಿದ್ದು, ಆತನ ಜತೆ ಈತ ನಿಕಟ ಸಂಪರ್ಕ ಇಟ್ಟುಕೊಂಡಿದ್ದರಿಂದ ಹಲವು ಬಾರಿ ವಿಚಾರಣೆಗೆ ಕರೆಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಅವಿನಾಶ್‌, ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಕ್ಲಬ್‌ನ ಲಾಕರ್‌ನಲ್ಲಿ ಸಂಪತ್ತು ಬಚ್ಚಿಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ನಗರದ ಪ್ರಮುಖ ರಿಯಲ್‌ ಎಸ್ಟೇಟ್‌  ಉದ್ಯಮಿ ಹಾಗೂ ಫೈನಾನ್ಸ್‌ ಆಗಿರುವ ಅವಿನಾಶ್‌ ಅಗರ್‌ವಾಲ್‌ ಕುಕ್ರೇಜಾಗೆ ಸೇರಿದ್ದ ಲಾಕರ್‌ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರು. ಲಾಕರ್‌ನಲ್ಲಿದ್ದ ಸಂಪತ್ತಿಗೂ ರಾಜಕಾರಣಿಗಳಿಗೂ ನಂಟಿದೆ ಎಂಬ ಅಂಶ ಬಯಲಾಗುತ್ತಿದೆ. ಅಲ್ಲದೆ, ಈ ಹಿಂದೆ ಐಟಿ ಇಲಾಖೆ ನಡೆಸಿದ್ದ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಆಸ್ತಿ ಪತ್ರಗಳು ಲಾಕರ್‌ನಲ್ಲಿದ್ದವು ಎಂದು ಐಟಿ ಮೂಲಗಳು ತಿಳಿಸಿದ್ದು, ಪ್ರಕರಣ ಕುತೂಹಲ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಆದರೆ, ಯಾವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಲಾಕರ್‌ನಲ್ಲಿದ್ದವು ರಾಜಕಾರಣಿಗಳಿಗೂ ಹಾಗೂ ಲಾಕರ್‌ ಸಂಪತ್ತಿಗೂ ನಂಟಿದೆಯೇ ಎಂಬುದರ  ಬಗ್ಗೆ  ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಗಣ್ಯರಿಗೆ ಫೈನಾನ್ಸರ್‌
ಪಾಕಿಸ್ತಾನದ ಸಿಂದ್‌ ಪ್ರಾಂತ್ಯದ ಪ್ರಭಾವಿ ಕುಟುಂಬದವರಾದ ಉದ್ಯಮಿ ಅವಿನಾಶ್‌ ಪೂರ್ವಿಕರು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆತನ ತಂದೆ ಸೇಟ್‌ ಅಸ್ಸಾರ್‌ದಾಸ್‌ ಅಮರ್‌ಲಾಲ್‌, ರಿಯಲ್‌ ಎಸ್ಟೇಟ್‌, ಆಟೋ ಮೊಬೈಲ್‌, ಫೈನಾನ್ಸ್‌ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಫೈನಾನ್ಸ್‌ ವ್ಯವಹಾರ ಹೆಚ್ಚಾಗಿ ನಡೆಸುತ್ತಿದ್ದು ರಾಜಕಾರಣಿಗಳು, ಬಿಲ್ಡರ್‌ ಮತ್ತು ಸಿನಿಮಾ ಮಂದಿಗೆ ಹಣಕಾಸಿನ ನೆರವು ನೀಡುತ್ತಿದ್ದರು. ಇದೇ ವ್ಯವಹಾರವನ್ನು ಅವಿನಾಶ್‌ ಮುಂದುವರಿಸಿದ್ದ ಎಂದು ತಿಳಿದು ಬಂದಿದೆ. ಜತೆಗೆ, ಆತನ ಕುಟುಂಸ್ಥರು ಟೈರ್‌ ಶೋರೂಂಗಳ ಜತೆಗೆ ಪದ್ಮಾಂಭ ರೈಸ್‌ ಮಿಲ್‌ ಪ್ರೈ.ಲಿ, ಪ್ರತಿಷ್ಠಿತ ಬಿಲ್ಡರ್‌ ಕಂಪನಿಗಳಲ್ಲಿ ಷೇರು, ವೈಷ್ಣವಿ ಅನುಷ್ಕಾ ಕನ್ಸ್‌ಟ್ರಕ್ಷನ್ಸ್‌ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಹೊಸ ಫ್ಲ್ಯಾಟ್‌ಗೆ ಶಿಫ್ಟ್ ಆಗುವ ಮುನ್ನವೇ ಬಲೆಗೆ ಬಿದ್ದ
ನಂಜಪ್ಪ ಸರ್ಕಲ್‌ ಸಮೀಪದ ಮನೆಯಲ್ಲಿ ಕುಟುಂಬದ ಜತೆ ವಾಸವಿರುವ ಅವಿನಾಶ್‌, ಇತ್ತೀಚೆಗೆ  ಯುಬಿ ಸಿಟಿಯಲ್ಲಿ ಐಶಾರಾಮಿ ಫ್ಲ್ಯಾಟ್‌ವೊಂದನ್ನು ಖರೀದಿ ಮಾಡಿದ್ದು ಮುಂದಿನ ತಿಂಗಳು ಶಿಫ್ಟ್ ಆಗಲು ಸಿದ್ಧತೆ  ನಡೆಸಿದ್ದರು. ಈ ಮಧ್ಯೆಯೇ ಐಟಿ ಬಲೆಗೆ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ.

Advertisement

ಶಿಸ್ತು ಕ್ರಮ  ಜರುಗಿಸಲು ಸಿದ್ಧತೆ
ಮತ್ತೂಂದೆಡೆ ಕಾನೂನುಬಾಹಿರವಾಗಿ ಲಾಕರ್‌ನಲ್ಲಿ  ಹಣ ಹಾಗೂ ವಜ್ರಾಭರಣ ಬಚ್ಚಿಟ್ಟು ಕ್ಲಬ್‌ನ ಘನತೆಗೆ ಧಕ್ಕೆ ತಂದ ಕಾರಣಕ್ಕೆ ಅವಿನಾಶ್‌ ಅಗರ್‌ವಾಲ್‌ ಕುಕ್ರೇಜಾ ವಿರುದ್ಧ  ಶಿಸ್ತು ಕ್ರಮ ಜರುಗಿಸಲು ಬೌರಿಂಗ್‌ ಕ್ಲಬ್‌ ಆಡಳಿತ ಮಂಡಳಿ ನಿರ್ಧರಿಸಿದೆ.ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಈ ಕ್ರಮಕ್ಕೆ ತೆಗೆದುಕೊಂಡಿದ್ದು, ನಿಯಮ ಉಲ್ಲಂ ಸಿ, ಕ್ಲಬ್‌ನ ಪ್ರತಿಷ್ಠೆಗೆ  ಧಕ್ಕೆ ತಂದ ಹಿನ್ನೆಲೆಯಲ್ಲಿ ಅವಿನಾಶ್‌ರನ್ನು ಸದಸ್ಯತ್ವದಿಂದ ಉಚ್ಛಾಟಿಸಲು ತೀರ್ಮಾನಿಸಲಾಗಿದೆ . ಈ  ಸಂಬಂಧ ಶಿಸ್ತು ಸಮಿತಿ ಮುಂದೆ ಜುಲೈ 31ರಂದು ವಿಚಾರಣೆಗೆ ಹಾಜರಾಗಿ  ಸ್ಪಷ್ಟೀಕರಣ ನೀಡುವಂತೆ ನೋಟಿಸ್‌ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಆತ ವಿಚಾರಣೆಗೆ ಬಂದ ಬಳಿಕ ಶಿಸ್ತುಸಮಿತಿ ಕ್ರಮ ಜರುಗಿಸುತ್ತದೆ ಎಂದು ಕ್ಲಬ್‌ನ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next