Advertisement

ಮಹಾವೀರರ ಜೀವನ ಸಂದೇಶ ಪಾಲಿಸಿ

12:48 PM Apr 10, 2017 | |

ದಾವಣಗೆರೆ: ಭಗವಾನ್‌ ಮಹಾವೀರರ ತತ್ವ, ಆದರ್ಶ, ಸಂದೇಶ ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳಿಸದೆ ದೈನಂದಿನ ಚಟುವಟಿಕೆಯಲ್ಲಿ ಪಾಲಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಆಶಿಸಿದರು. ಭಾನುವಾರ ವಿರಕ್ತಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಭಗವಾನ್‌ ಶ್ರೀ ಮಹಾವೀರರ ಜಯಂತಿಯಲ್ಲಿ ಮಾತನಾಡಿದರು.

Advertisement

ವರ್ಧಮಾನ ಮಹಾವೀರರು ಪ್ರತಿಯೊಬ್ಬರು ಸತ್ಯವನ್ನೇ ನುಡಿಯಬೇಕು ಎಂಬ ಮಹತ್ತರ ಸಂದೇಶ ನೀಡಿದ್ದಾರೆ. ಸತ್ಯವನ್ನು ನುಡಿಯುವುದರಿಂದ ಅಹಿಂಸಾ ಹಾದಿಯಲ್ಲಿ ನಡೆದಂತಾಗುತ್ತದೆ. ಇಂದಿನ ಎಲ್ಲವನ್ನೂ ಪಾಲನೆ ಮಾಡುವುದು ಕಷ್ಟ. ಆದರೂ, ಒಂದಿಷ್ಟನ್ನಾದರೂ ಪಾಲಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು. 

ವರ್ಧಮಾನ ಮಹಾವೀರರು 2,600 ವರ್ಷಗಳ ಹಿಂದೆ ನೀಡಿರುವ ಸಂದೇಶಗಳನ್ನು ಗಮನಿಸಿದರೆ ಈ ಕ್ಷಣಕ್ಕೂ ಆಗಿನ ಮತ್ತು ಈಗಿನ ವಾತಾವರಣಕ್ಕೆ ಅಂತಹ ಯಾವುದೇ ವ್ಯತ್ಯಾಸ ಕಂಡು  ಬರುವುದಿಲ್ಲ. ಈಗಲೂ ಆಗಿನ ಸ್ಥಿತಿ, ವಾತಾವರಣ ಇದೆ. ಸ್ವತಃ ರಾಜನಾಗಿ 30 ವರ್ಷಕ್ಕೂ ಹೆಚ್ಚು ಕಾಲ ರಾಜ್ಯಭಾರ ನಡೆಸಿದಂತಹ ಮಹಾವೀರರು ಈಗಲೂ ಪ್ರಸ್ತುತವಾಗುವಂತಹ ಮೌಲ್ಯಯುತ ಸಂದೇಶ ನೀಡಿದ್ದಾರೆ ಎಂದರೆ ಅವರಲ್ಲಿ ಎಂತಹ ಆಲೋಚನಾ ಶಕ್ತಿ ಇತ್ತು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು. 

ಭಗವಾನ್‌ ಮಹಾವೀರರು ನೀಡಿರುವ ಸತ್ಯ, ಅಹಿಂಸೆ, ಅಚೋರಿಯಾ, ಬ್ರಹ್ಮಚರ್ಯ, ಅಭಯನಿಗ್ರಹ ಎಂಬ ಮೈಲಿಗಲ್ಲುಗಳನ್ನು ದಾಟುವ ಮೂಲಕ ಮೋಕ್ಷವನ್ನ ಸಾಧಿಸಬಹುದು. ಸಂದೇಶ ಪಾಲಿಸುವ ಮೂಲಕ ನಿಜವಾದ ಮಾನವರಾಗಬೇಕು. ನಾವಲ್ಲದೆ ನಮ್ಮ ಸುತ್ತಮುತ್ತಲಿನವರನ್ನು ಒಳ್ಳೆಯ ಹಾದಿಯಲ್ಲಿ ಕೊಂಡೊಯ್ಯುವಂತಾಗಬೇಕು ಎಂದು ತಿಳಿಸಿದರು. 

ಜಯಂತಿ ಉದ್ಘಾಟಿಸಿದ ಮೇಯರ್‌ ರೇಖಾ ನಾಗರಾಜ್‌ ಮಾತನಾಡಿ, ಜೈನ ಸಮಾಜ ಎಂದೆಂದೂ ಹಿಂಸೆಯನ್ನು ವಿರೊಧೀಧಿ ಸಿದ ಅಹಿಂಸೆಯ ಆಚಾರ ವಿಚಾರಗಳನ್ನು ಶ್ರೇಷ್ಠತೆಯನ್ನು ಮೈಗೂಡಿಸಿಕೊಂಡಿರುವ ಸಮಾಜ ಎಂದು ಹರ್ಷ ವ್ಯಕ್ತಪಡಿಸಿದರು.  ವಿಶೇಷ ಉಪನ್ಯಾಸ ನೀಡಿದ ಬಿಎಸ್ಸೆನ್ನೆಲ್‌ ಉಪಮಂಡಲ ಅಭಿಯಂತರ ಸಂಜಯ ಹಜಾರೆ, ಭಗವಾನ್‌ ಮಹಾವೀರರ ಜೀವನ ಸಂದೇಶ, ಉಪದೇಶ ಸಾರ್ವಕಾಲಿಕ ಸತ್ಯ.

Advertisement

ಪ್ರತಿಯೊಬ್ಬರ ಜೀವನವನ್ನು ಮುಕ್ತಿಯೆಡೆಗೆ ಕೊಂಡೊಯುವಂಥವು. ಪ್ರತಿ ಆತ್ಮಕ್ಕೆ ಪರಮಾತ್ಮನಾಗುವ ಶಕ್ತಿ ಇದೆ ಎಂದು ಮಹಾವೀರರು ಸದಾ ಪ್ರಸ್ತಾಪಿಸುತ್ತಿದ್ದರು ಎಂದು ತಿಳಿಸಿದರು. 2600 ವರ್ಷಗಳ ಹಿಂದೆ ಬಿಹಾರದಲ್ಲಿ ಜನಿಸಿದ ಭಗವಾನ್‌ ಮಹಾವೀರರು ಸಮಾಜದ ನೈತಿಕ ಮೌಲ್ಯಗಳ ಉನ್ನತಿಗೆ ಶ್ರಮಿಸಿದರು. ಜೀವಿಸಿ… ಜೀವಿಸಲು ಬಿಡಿ… ಎಂಬ ಉದಾತ್ತ ಸಂದೇಶ ನೀಡಿದವರು.

ಮಹಾವೀರರ ಸಂದೇಶಗಳು ಈ ಕ್ಷಣಕ್ಕೂ ಹೆಚ್ಚು ಪ್ರಸ್ತುತವಾಗಿವೆ. ಅರ್ಥ, ಕಾಮ, ಮೋಕ್ಷ, ಲೋಭ, ಮದ, ಮತ್ಸರದಂತಹ ಅರಿಷಡ್‌ವರ್ಗಗಳ ವಿರುದ್ಧ ಅಹಿರ್ನಿಶಿ ಹೋರಾಟ ನಡೆಸುತ್ತಾ ಸಮಾನತೆಗೆ ಶ್ರಮಿಸಿದವರು. 2 ಸಾವಿರ ವರ್ಷಗಳ ಹಿಂದೆಯೇ ಸ್ತ್ರೀ ಸಮಾನತೆಗೆ ಶ್ರಮಿಸಿದ ಮಹಾವೀರರ ಬದುಕು ಅನುಕರಣೀಯ ಎಂದು ತಿಳಿಸಿದರು. 

ಸ್ವಾರ್ಥಕ್ಕಾಗಿ ಜೀವಿಸುವುದು ಯಾಂತ್ರಿಕ ಜೀವನ… ಅಹಿಂಸೆಯ ಪರವಾಗಿ ಜೀವಿಸುವುದು ಸಾರ್ಥಕ ಜೀವನ… ಎನ್ನುವ ಸಂದೇಶ ನೀಡಿರುವ ಮಹಾವೀರರು ನುಡಿದಂತೆ ನಡೆದವರು. ಹಿಂಸಾ ಪರಮೋಧರ್ಮ ಎನ್ನುವಂತೆ ಕೊನೆಯವರೆಗೆ ಅಹಿಂಸಾ ಮಂತ್ರ ಪಾಲಿಸಿದರು. ತಮ್ಮ ಮಹತ್ತರ ಉಪದೇಶಗಳ ಮೂಲಕ  ಕ್ರಾಂತಿಕಾರಕ ಬದಲಾವಣೆ ತಂದ ಮಹಾವೀರರು ಚೀನಾದ ಲಾವೋತ್ಸೆ, ಫೈಥಾಗೊರಸ್‌, ಸಾಕ್ರೆಟಿಸ್‌ ಅವರಂತಹ ಶ್ರೇಷ್ಠ ದಾರ್ಶನಿಕರ ಸಮಕಾಲೀನರು.

ಆದರ್ಶಮಯ ಜೀವನ ದರ್ಶನ ಮಾಡಿಸಿದ ಮಹಾಪುರುಷ ಎಂದು ಬಣ್ಣಿಸಿದರು.  ಮನುಷ್ಯನ ಮನಸ್ಸಿನ ವಿಕೃತಿಗಳನ್ನು ತೊಳೆದು ಪರಿಶುದ್ದವಾಗಿಸುವವನೇ ತೀರ್ಥಂಕರ. ಅಂತಹ ತೀರ್ಥಂಕರ ಶ್ರೇಷ್ಠರಲ್ಲಿ ಪ್ರಮುಖರಾದವರು ಮಹಾವೀರರು. ಸ್ವತಃ ಇಂದ್ರನೇ  ತೀಥಂಕರನ ಪೂಜೆ¿ ಮಾಡುತ್ತಿದ್ದ ಎಂಬುದು ಪ್ರತೀತಿ ಇದೆ ಎಂದು ತಿಳಿಸಿದರು. 

ಧರ್ಮೋ ರಕ್ಷತಿ ರಕ್ಷತಃ… ಎನ್ನುವಂತೆ ಧರ್ಮವನ್ನು ರಕ್ಷಿಸು, ಧರ್ಮ ನಿನ್ನನ್ನು ರಕ್ಷಿಸುತ್ತದೆ ಎನ್ನುವ ಸಂದೇಶ ನೀಡಿರುವ ಮಹಾವೀರರು ಧರ್ಮ ಸಕಲ ಜೀವಿಗಳು ಒಟ್ಟುಗೂಡಿ ಸುಖ ಜೀವನ ನಡೆಸುವುದೇ ನಿಜವಾದ ಧರ್ಮ ಎಂದು ಸಾರಿದವರು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ರಮಣ್‌ ಲಾಲ್‌ ವಿ. ಸಂಘವಿ, ಅಜಿತ್‌ಕುಮಾರ್‌ ಇತರರು ಇದ್ದರು. ಪ್ರಸನ್ನ ಚಂದ್ರಪ್ರಭ ಮತ್ತು ಸಂಗಡಿಗರು ಜಿನಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಗಂಗಾಧರ್‌ ಬಿ.ಎಲ್‌. ನಿಟ್ಟೂರು ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next