ಮಂಡ್ಯ: ಅ.30ರಂದು ನಗರದ ಗುತ್ತಲು ರಸ್ತೆಯ ಬಸವನಗುಡಿ 4ನೇ ಕ್ರಾಸ್‌ನಲ್ಲಿ ರೌಡಿಶೀಟರ್ ಸುಮಂತ್ ಆಲಿಯಾಸ್ ಕುಳ್ಳಿ ಎಂಬಾತನ ಕೊಲೆ ಪ್ರಕರಣ ಬೇಧಿಸಿರುವ ಮಂಡ್ಯ ಪೊಲೀಸರು ಮೂವರು ಬಾಲಕರು ಸೇರಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಸ್ವರ್ಣಸಂದ್ರದ ಮಂಜುನಾಥ.ಜಿ ಆಲಿಯಾಸ್ ಮಿಷಿನ್ ಮಂಜ(23), ಪವನ್.ಕೆ.ಎಸ್ ಆಲಿಯಾಸ್ ಪಾನಿ(20), ಬಸವನಗುಡಿ 1ನೇ ಕ್ರಾಸ್‌ನ ಅಫ್ನಾನ್‌ಖಾನ್(19), ಅರಕೇಶ್ವರನಗರ ಗುತ್ತಲು ಕಾಲೋನಿಯ ದರ್ಶನ್ ಆಲಿಯಾಸ್ ದಚ್ಚು(22), ಚಂದನ ಆಲಿಯಾಸ್ ಚಂದು(28) ಹಾಗೂ ಹತ್ಯೆ ಮಾಡಿದ್ದ ಮೂವರು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧಿಸಿದ್ದಾರೆ. ಮೂವರು ಸಂಘರ್ಷಕ್ಕೊಳಗಾದ ಆರೋಪಿಗಳನ್ನು ಬಾಲ ನ್ಯಾಯಮಂಡಳಿ ಮುಂದೆ ಹಾಜರುಪಡಿಸಿ ಮೈಸೂರಿನ ಬಾಲ ವೀಕ್ಷಣಾಲಯಕ್ಕೆ ಬಿಡಲಾಗಿದೆ.
ಬಂಧಿತರಿoದ ಮೂರು ಕಬ್ಬಿಣದ ಲಾಂಗ್‌ಗಳು, ಒಂದು ಡ್ರಾಗರ್, ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಬೈಕ್ ಹಾಗೂ ಕೊಲೆ ಮಾಡಿ ಪರಾರಿಯಾಗಲು ನೀತಿ ಎಂಬ ಯುವತಿಯಿಂದ ಬೈಕ್ ಕಿತ್ತುಕೊಂಡು ಹೋಗಿದ್ದ ಡಿಯೋ ಸ್ಕೂಟರ್‌ನನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನಿಂದಲೇ ಸುಪಾರಿ: ಆರೋಪಿ ಚಂದನ ಈಗಾಗಲೇ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದು, ಹಳೇ ದ್ವೇಷದ ಹಿನ್ನೆಲೆಯಲ್ಲಿ ಮೃತ ಸುಮಂತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಆರೋಪಿ ಮಂಜುನಾಥನಿಗೆ ಕೊಲೆ ಮಾಡಲು ತಿಳಿಸಿದ್ದನು.
ಬಾಲಕರಿಂದಲೇ ಹತ್ಯೆಯಾದ ರೌಡಿಶೀಟರ್: ಆರೋಪಿಗಳಾದ ಮಂಜುನಾಥ ಹಾಗೂ ಚಂದನ ಇಬ್ಬರು ಸುಮಂತ್‌ನನ್ನು ಕೊಲೆ ಮಾಡಲು ಆರೋಪಿಗಳಾಗಿರುವ ಮೂವರು ಸಂಘರ್ಷಕ್ಕೊಳಗಾದವರನ್ನು ಬಳಸಿಕೊಂಡಿದ್ದಾರೆ. ಅದರಂತೆ ಅ.30ರಂದು ಸಂಜೆ 5.45ರಲ್ಲಿ ರೌಡಿಶೀಟರ್ ಸುಮಂತ್ ಹಾಲು ಹಾಕಿ ಬಸವನಗುಡಿ 4ನೇ ಕ್ರಾಸ್‌ನಲ್ಲಿ ಬರುತ್ತಿದ್ದಾಗ, ಒಬ್ಬ ಬಾಲ ಆರೋಪಿ ಸುಮಂತನ ಕಡೆಗೆ ಕಾರದಪುಡಿ ಎರಚಿದ್ದಾನೆ. ಇನ್ನೊಬ್ಬ ಬಾಲಕ ಡ್ರಾಗರ್‌ನಿಂದ ಸುಮಂತ್ ಹೊಟ್ಟೆಗೆ ಇರಿದಿದ್ದಾನೆ. ನಂತರ ಆರೋಪಿ ಮಂಜುನಾಥ ಲಾಂಗ್‌ನಿoದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.