Advertisement

ಕೋಮಾದಲ್ಲಿದ್ದ ಯುವಕನ ಆರೈಕೆ ಮಾಡಿದ ಪೊಲೀಸರು

11:33 AM Sep 29, 2020 | Suhan S |

ಬೆಂಗಳೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿ ತಲುಪಿದ್ದ ಯುವಕನಿಗೆ ಒಂದು ತಿಂಗಳು ಚಿಕಿತ್ಸೆ ಕೊಡಿಸಿ ಆತನನ್ನು ಕುಟುಂಬದಂತೆ ಪೊಲೀಸರೇ ಆರೈಕೆ ಮಾಡಿದ ಮಾನವೀಯ ಘಟನೆಯೊಂದು ನಡೆದಿದೆ. ಹಳೇ ವಿಮಾನ ನಿಲ್ದಾಣ ಠಾಣೆಯ ಸಂಚಾರ ಪೊಲೀಸರ ಮಾನವೀಯ ಕಾಳಜಿಯಿಂದ ಕೋಮಾದಲ್ಲಿದ್ದ ಯುವಕ ಗುಣಮುಖನಾಗಿ ಮನೆ ಸೇರಿದ್ದಾನೆ. ಪೊಲೀಸರ ಕಾರ್ಯಕ್ಕೂ ಹಿರಿಯ ಅಧಿಕಾರಿಗಳು,ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಆ.16ರಂದು ಮಧ್ಯಾಹ್ನ ಮಾರತ್‌ಹಳ್ಳಿಯಬ್ರಿಡ್ಜ್ ಸಮೀಪ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್‌ ಸವಾರ ಸ್ಥಳದಲ್ಲಿಯೇಬಿದ್ದು ನರಳಾಡುತ್ತಿದ್ದ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ್ದ

Advertisement

ಏರ್‌ಪೋರ್ಟ್‌ ಠಾಣೆಯ ಸಂಚಾರ ಪೊಲೀಸರು ಯುವಕನನ್ನು ತಕ್ಷಣ ಖಾಸಗಿ ಆಸ ³ತ್ರೆಗೆ ದಾಖಲಿಸಿದ್ದರು. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಆತ ಕೋಮಾ ಸ್ಥಿತಿ ತಲುಪಿದ್ದ. ಬಳಿಕ ಯುವಕನ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಮಹಾರಾಷ್ಟ್ರ ಮೂಲದ ಸಂಜಯ್‌ ( 32) ಎಂಬುದು ಗೊತ್ತಾಗಿದೆ. ಜತೆಗೆ, ಆತ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು ಸ್ನೇಹಿತ‌ರು ಆತನನ್ನು ಆಸ್ಪತ್ರೆಗೆ ನೋಡಲು ಬಂದಿರಲಿಲ್ಲ. ಹೀಗಾಗಿ, ಇನ್ಸ್  ಪೆಕ್ಟರ್‌ ಚನ್ನೇಶ್‌ ಅವರ ಸಲಹೆ ಮೇರೆಗೆ ಸಿಬ್ಬಂದಿ ಗಾಯಾಳು ಯುವಕ ಸಂಜಯ್‌ನನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಸಂಜಯ್‌ಗೆ ಚಿಕಿತ್ಸೆ ಅಲ್ಲಿ ಮುಂದುವರಿದಿದೆ. ಇತ್ತ ಕಾನ್ಸ್‌ಟೇಬಲ್‌ಗ‌ಳಾದ ಶ್ರೀಕಾಂತ್‌ ಸೇರಿ ಮತ್ತಿತರರು ದಿನಕ್ಕೊಬ್ಬರಂತೆ ಪ್ರತಿನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಸಂಜಯ್‌ನನ್ನು ಉಪಚರಿಸಿದ್ದಾರೆ.

ಇತ್ತೀಚೆಗೆ ಗಾಯಾಳು ಸಂಜಯ್‌ ಗುಣಮುಖನಾಗಿ ಚೇತರಿಸಿಕೊಂಡಾಗ ಪೊಲೀಸ್‌ ಸಿಬ್ಬಂದಿ ಸಂಭ್ರಮಿಸಿದ್ದಾರೆ. ಜತೆಗೆ, ಆತ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ದಿನ ಪೊಲೀಸರು, ಆತನಿಗೆ ಹೊಸ ಬಟ್ಟೆ, ಸ್ಯಾನಿಟೈಸರ್‌ ಜತೆಗೆ ಊರಿಗೆ ತೆರಳಲು ಹಣ ನೀಡಿ ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next