ಗಂಗಾವತಿ: ಕಳೆದ ವರ್ಷ ನಗರದ ಬಸವಣ್ಣ ಸರ್ಕಲ್ ನ ಮನೆಯೊಂದರ ಅಲ್ಮೆರಾದಲ್ಲಿಟ್ಟಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಮಾಲಕರಿಗೆ ನಗರ ಪೊಲೀಸ್ ಠಾಣೆಯ ಪೊಲೀಸರು ಒಪ್ಪಿಸಿದ್ದಾರೆ .
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಗರದ ಬಸವಣ್ಣ ವೃತ್ತದಲ್ಲಿರುವ ಮಲ್ಲಮ್ಮ ಗಂಡ ಶಿವಪ್ಪ ಖೇಡೆದ್ ಎಂಬುವರು ಮನೆಯ ಅಲ್ಮೇರಾದಲ್ಲಿ ಇರಿಸಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಳ್ಳತನ ಮಾಡಿದ್ದರು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ವ್ಯಾಪಕ ಶೋಧ ನಡೆಸಿದ ನಂತರ ಕಳ್ಳತನ ಪ್ರಕರಣದಲ್ಲಿ ಕಳ್ಳರನ್ನು ಬಂಧಿಸಿ ವಿಚಾರಿಸಿದಾಗ ಬಸವಣ್ಣ ವೃತ್ತದಲ್ಲಿರುವ ಮನೆಯಲ್ಲಿಯೂ ತಾವೇ ಕಳ್ಳತನ ಮಾಡಿ ಚಿನ್ನದ ಅಂಗಡಿಯವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದರು. ಪೊಲೀಸರು ತನಿಖೆ ನಡೆಸಿ ಮಾಂಗಲ್ಯ ಸರವನ್ನು ವಶಕ್ಕೆ ಪಡೆದು ನ್ಯಾಯಾಲಯದ ಆದೇಶದ ಮೇರೆಗೆ ಮಾಂಗಲ್ಯ ಸರದ ಮಾಲೀಕರಿಗೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಟಿ. ವೆಂಕಟಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿ ವರ್ಗದವರಿದ್ದರು.
ಶ್ಲಾಘನೆ: ಇತ್ತೀಚೆಗೆ ಕಳ್ಳತನವಾಗುತ್ತಿರುವ ಚಿನ್ನಾಭರಣ ಸೇರಿದಂತೆ ವಾಹನಗಳ ಕಳ್ಳತನ ಪ್ರಕರಣವನ್ನು ಗಂಗಾವತಿ ನಗರ ಠಾಣೆ ಮತ್ತು ಗ್ರಾಮೀಣ ಠಾಣೆ ಪೊಲೀಸರು ವ್ಯಾಪಕವಾಗಿ ತನಿಖೆ ನಡೆಸಿ ಪತ್ತೆ ಹಚ್ಚಿ ಮಾಲೀಕರಿಗೆ ಒಪ್ಪಿಸುತ್ತಿರುವುದು ಅಭಿನಂದನಾರ್ಹ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ