ಚಿಕ್ಕೋಡಿ: ಪಾರ್ಶ್ವವಾಯು ಚಿಕಿತ್ಸೆಗೆ ಕರೆತಂದಿದ್ದ ವೃದ್ಧನನ್ನು ಜೊತೆಗಿದ್ದವರು ಲಾಡ್ಜ್ ನಲ್ಲಿ ಬಿಟ್ಟು ಪರಾರಿಯಾದ ಹಿನ್ನೆಲೆ ಪೊಲೀಸರೇ ವೃದ್ಧನಿಗೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದು, ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಾರಾಷ್ಟ್ರದ ಪುಣೆ ಮೂಲದ 72 ವರ್ಷದ ಮೂಲಚಂದ್ರ ಶರ್ಮಾ ಎಂಬುವರೇ ಪಾರ್ಶ್ವವಾಯು ರೋಗದಿಂದ ಬಳಲಿ ಮೃತಪಟ್ಟ ವೃದ್ಧರು.
ಸುಮಾರು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್ ನಲ್ಲಿ ಯಾರೋ ಚಿಕಿತ್ಸೆಗೆಂದು ಕರೆತಂದ ವೃದ್ಧನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಚಿಕ್ಕೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ನಂತರ ಪೊಲೀಸರೇ ಆ ವೃದ್ಧನನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು,ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಶನಿವಾರ ಆ ವೃದ್ಧ ಮೃತಪಟ್ಟಿದ್ದಾರೆ.
ವೃದ್ಧನನ್ನು ವ್ಯಕ್ತಿಯೊಬ್ಬರು ಗುತ್ತಿಗೆ ಆಧಾರದ ಮೇಲೆ ಉಪಚಾರ ಮಾಡುತ್ತಿದ್ದರು ಎನ್ನಲಾಗಿದ್ದು, ಗುತ್ತಿಗೆ ಅವಧಿ ಮುಗಿದ ನಂತರ ಕೆಲಸಗಾರ ಅವರನ್ನು ಲಾಡ್ಜ್ ನಲ್ಲಿ ಬಿಟ್ಟುಹೋಗಿದ್ದಾನೆ ಎಂದು ಲಾಡ್ಜ್ ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಮಗಳು ಕೆನಡಾದಲ್ಲಿ ಹಾಗೂ ಮಗ ದಕ್ಷಿಣ ಆಫ್ರಿಕಾದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಎಂದು ವೃದ್ಧ ಶರ್ಮಾ ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ಮಕ್ಕಳನ್ನು ಸಂಪರ್ಕಿಸಿದಾಗ ಅವರು ತಂದೆಯ ಅಂತಿಮ ಸಂಸ್ಕಾರ ಮಾಡಲೂ ನಿರಾಕರಿಸಿದ್ದಾರೆ. ಕೊನೆಗೆ ಮೃತದೇಹವನ್ನು ನಾಗರಮುನ್ನೊಳಿ ಗ್ರಾಮಕ್ಕೆ ತಂದು ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರ ಸಹಾಯದಿಂದ ಅಂತಿಮ ಸಂಸ್ಕಾರ ನೆರವೇರಿಸಿದ್ದೇವೆ ಎಂದು ಪಿಎಸ್‌ಐ ಬಸಗೌಡ ನೇರ್ಲಿ ತಿಳಿಸಿದರು.