Advertisement

ಯಾರ ದೇಹ ಸುಟ್ಟಿದ್ದಾರೆ ಎಂಬುದು ಗೊತ್ತಿಲ್ಲ: ಹತ್ರಾಸ್‌ ಸಂತ್ರಸ್ತೆಯ ಕುಟುಂಬಸ್ಥರ ಅಳಲು

10:37 PM Sep 30, 2020 | Karthik A |

ಉತ್ತರಪ್ರದೇಶ: ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯ ಅಂತ್ಯಸಂಸ್ಕಾರವನ್ನು ಪೊಲೀಸರು ಬಲವಂತವಾಗಿ ನೆರವೇರಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

Advertisement

ಕೊನೆಯ ಬಾರಿಗೆ ಮಗಳ ಮುಖ ನೋಡಲು ನಮಗೆ ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಪೊಲೀಸರು ಯಾರನ್ನು ಸುಟ್ಟುಹಾಕಿದ್ದಾರೆ ಎಂಬ ಕುರಿತು ನಮಗೆ ಇನ್ನೂ ಅನುಮಾನ ಇದೆ ಎಂದು ಕುಟುಂಬ ಹೇಳಿದೆ.

ಪೊಲೀಸರು ತಮ್ಮ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ ಗ್ರಾಮಕ್ಕೆ ಬಾರದಂತೆ ತಡೆದಿದ್ದಾರೆ. ಮಹಿಳಾ ಪೊಲೀಸರು ನಮ್ಮ ಮನೆಯಲ್ಲಿನ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂತ್ರಸ್ತೆಯ ಹಿರಿಯ ಸಹೋದರ ಆರೋಪಿಸಿದ್ದಾರೆ. ರಾತ್ರಿಯ ವೇಳೆಯೇ ಬಲವಂತವಾಗಿ ದಹನ ಮಾಡಲಾಗಿದೆ. ಕನಿಷ್ಠ ಬೆಳಗ್ಗಿನವರೆಗೆ ಕಾಯುವಂತೆ ನಾವು ಅವರನ್ನು ಕೇಳುತ್ತಲೇ ಇದ್ದೆವು. ಆದರೆ ನಮ್ಮ ಮಾತಿಗೆ ಬೆಲೆಯೇ ಇರಲಿಲ್ಲ. ಅಂತ್ಯಸಂಸ್ಕಾರದ ಸಂದರ್ಭ ನಮ್ಮ ಪದ್ಧತಿಗಳನ್ನೂ ಅನುಸರಿಸಲಿಲ್ಲ ಎಂದು ಕುಟುಂಬ ಹೇಳಿದೆ.

ಪೊಲೀಸರು ಈಗ ಹೇಗಾದರೂ ಮಾಡಿ ಪ್ರಕರಣವನ್ನು ಪ್ರಕರಣವನ್ನು ಇತ್ಯರ್ಥಪಡಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಕುಟುಂಬ ಪೊಲೀಸರು ಈಗ “ಸಂತ್ರಸ್ಥೆಯ ನಾಲಿಗೆ ಕತ್ತರಿಸಲಿಲ್ಲ, ಬೆನ್ನುಮೂಳೆ ಮುರಿಯಲಿಲ್ಲಲ ಎಂದು ಹೇಳುತ್ತಿದ್ದಾರೆ. ಅವರು ಹೇಗಾದರೂ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಬಯಸುತ್ತಿದ್ದಾರೆ ಎಂದು ಕುಟುಂಬ ಹೇಳಿದೆ.

ಸಾಮೂಹಿಕ ಅತ್ಯಾಚಾರವನ್ನು ಪೊಲೀಸರು ಖಚಿತಪಡಿಸಿಲ್ಲ. ಮಾಧ್ಯಮಗಳನ್ನೂ ಗ್ರಾಮಕ್ಕೆ ಬರಲು ಅವಕಾಶ ನೀಡಲಾಗಿಲ್ಲ. ಆದರೆ ದೂರವಾಣಿ ಮೂಲಕ ಕುಟಂಬ ಪತ್ರಕರ್ತರಿಗೆ ಮಾಹಿತಿ ನೀಡಿದೆ. ಘಟನೆ ಕುರಿತು ಸರಕಾರ ತನಿಖೆಗೆ ಆದೇಶ ನೀಡಿದೆ.

Advertisement

ಅಂತ್ಯಕ್ರಿಯೆಗೆ ಕುಟುಂಬಸ್ಥರು ಇರಲಿಲ್ಲ
ಅಂತ್ಯಕ್ರಿಯೆಯ ಸಮಯದಲ್ಲಿ ಸಂತ್ರಸ್ತೆಯ ಕುಟುಂಬದ ಒಬ್ಬ ಸದಸ್ಯರೂ ಹಾಜರಿರಲಿಲ್ಲ, ಆದರೆ ಪೊಲೀಸರು ಸ್ವತಃ ಶವವನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬಾಲಕಿಯ ವೈದ್ಯಕೀಯ ವರದಿಯ ಪ್ರತಿಯನ್ನೂ ಅವರಿಗೆ ನೀಡಿಲ್ಲ ಎಂದು ಕುಟುಂಬ ಹೇಳಿದೆ. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬುದು ವೈದ್ಯಕೀಯ ವರದಿಯಲ್ಲಿ ಸ್ಪಷ್ಟವಾಗಿಲ್ಲ ಎಂದು ಹತ್ರಾಸ್‌ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ವೀರ್‌ ಹೇಳಿದ್ದಾರೆ. ಇದು ಕುಟುಂಬವನ್ನು ಕೆರಳಿಸಿದ್ದು, ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಅಂತ್ಯಕ್ರಿಯೆ ಹೇಗೆ ನಡೆಯಿತು
ಹದಿನೈದು ದಿನಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ದೆಹಲಿಯ ಸಫ್ದರ್ಜಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾತ್ರಿಯಲ್ಲಿ ಯುಪಿ ಪೊಲೀಸರು ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ದಿದ್ದಾರೆ.

ನಿನ್ನೆ ಮಧ್ಯರಾತ್ರಿಯೇ ಬಾಲಕಿಯ ಅಂತ್ಯಸಂಸ್ಕಾರವನ್ನು ಪೊಲೀಸರು ನಡೆಸಿದ್ದಾರೆ. ಪತ್ರಕರ್ತರು ಮತ್ತು ಕುಟುಂಬವನ್ನು ದೂರವಿರಿಸಲು ಪೊಲೀಸರು ಮಾನವ ಸರಪಳಿಯನ್ನು ರಚಿಸಿದ್ದರು ಎಂಬ ಆರೋಪ ಇದೆ. ಅಂತ್ಯಕ್ರಿಯೆಯ ಸ್ಥಳದ ಬಳಿ ಹೋಗಲು ಯಾರಿಗೂ ಅವಕಾಶವಿರಲಿಲ್ಲ. ಸಂತ್ರಸ್ತೆಯ ಶವವನ್ನು ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗುತ್ತಿರುವಾಗ ಗ್ರಾಮಸ್ಥರು ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ವಾಹನವನ್ನು ಅಂತ್ಯಕ್ರಿಯೆಯ ಸ್ಥಳಕ್ಕೆ ಕರೆದೊಯ್ಯುವಲ್ಲಿ ಪೊಲಿಸರು ಯಶಸ್ವಿಯಾಗಿದ್ದರು.

ತನಿಖೆಗೆ ಆದೇಶ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು 7 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ 3 ಸದಸ್ಯರ ಎಸ್‌ಐಟಿ ರಚಿಸಿದ್ದಾರೆ. ಆರೋಪಿಗಳಿಗೆ ಕಠಿನ ಶಿಕ್ಷೆ ವಿಧಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಅವರು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಅತ್ಯಾಚಾರಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ. ಕುಟುಂಬದ ಒಪ್ಪಿಗೆಯಿಲ್ಲದೆ ರಾತ್ರಿಯಲ್ಲಿ ಮೃತ ದೇಹವನ್ನು ಸುಡುವುದು ತಪ್ಪು ಎಂದು ಹೇಳಿದ್ದಾರೆ. ಪ್ರಿಯಾಂಕ ಗಾಂಧಿ ಅರು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದೆ.

ಏನಿದು ಘಟನೆ?
ಸೆಪ್ಟೆಂಬರ್‌ 14ರಂದು ಹತ್ರಾಸ್‌ ಜಿಲ್ಲೆಯ ಥಾನಾ ಚಂದ್ಪಾ ಪ್ರದೇಶದ ಹಳ್ಳಿಯಲ್ಲಿ 19 ವರ್ಷದ ಹಿಂದುಳಿದ ಸಮುದಾಯದ ಬಾಲಕಿಯನ್ನು ನಾಲ್ಕು ಪುರುಷರು ಅತ್ಯಾಚಾರ ಮಾಡಿದ್ದಾರೆ. ಘಟನೆಯ ಅನಂತರ ಆರೋಪಿಯು ಬಾಲಕಿಯ ಬೆನ್ನುಮೂಳೆಯನ್ನು ಮುರಿದು ನಾಲಿಗೆ ಕತ್ತರಿಸಲಾಗಿದೆ. ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಸಾಮೂಹಿಕ ಅತ್ಯಾಚಾರ ಮತ್ತು ನಾಲಿಗೆ ತುಂಡು ಮಾಡಿದ ಆರೋಪ ಸುಳ್ಳು ಎಂಬುದು ಪೊಲೀಸರ ವಾದ.

Advertisement

Udayavani is now on Telegram. Click here to join our channel and stay updated with the latest news.

Next