ವಿಜಯಪುರ: ಕೋವಿಡ್ ಎರಡನೇ ಅಲೆಯ ಕೊಂಡಿ ಕಳಚುವ ಉದ್ದೇಶಿಂದ ರಾಜ್ಯ ಸರ್ಕಾರ ಕರ್ಫ್ಯೂ ಹೇರಿದ್ದು ಜಿಲ್ಲೆಯಲ್ಲಿ ಪೊಲೀಸ್ ಕಟ್ಟುನಿಟ್ಟಿನ ಕ್ರಮ ಬಿಗಿಯಾಗಿದೆ. ಅನಗತ್ಯ ಬೀದಿಗೆ ಬಂದವರು ಲಾಠಿ ಏಟು, ದಂಡಕ್ಕೆ ಸುಸ್ತು ಹೊಡೆದಿದ್ದಾರೆ.
ಮತ್ತೂಂದೆಡೆ ಮಹಾರಾಷ್ಟ್ರ ರಾಜ್ಯದಿಂದ ಕೋವಿಡ್ ಸೊಂಕು ರಹಿತ ವೈದ್ಯಕೀಯ ಪ್ರಮಾಣಪತ್ರವಿಲ್ಲದೇ ಜಿಲ್ಲೆಗೆ ಪ್ರವೇಶಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದಾರೆ. ಕರ್ಫ್ಯೂ ಜಾರಿಗೆ ತಂದಿದ್ದರೂ ಮುಖ್ಯ ದ್ವಾರಗಳ ಹೊರತಾಗಿ ಬಡಾವಣೆ, ಗಲ್ಲಿಗಳಲ್ಲಿ ಓಡಾಟ ಕಂಡು ಬರುತ್ತಿದೆ. ಇದರಿಂದಾಗಿ ಪೊಲೀಸರು ಇದೀಗ ನಗರದ ಪ್ರಮುಖ ರಸ್ತೆಗಳಿಗೆ ಆಯಕಟ್ಟು ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೆ, ಮತ್ತೂಂದೆ ಮುಖ್ಯ ರಸ್ತೆ ಸಂಪರ್ಕಿಸುವ ಬಡಾವಣೆ, ಗಲ್ಲಿ ರಸ್ತೆಗಳಿಗೂ ಬ್ಯಾರಿಕೇಡ್, ಮುಳ್ಳು ಕಂಟಿಗಳನ್ನು ಹಾಕಿ ಜನರ ಓಡಾಡವನ್ನು ಸಂಪೂರ್ಣ ನಿರ್ಬಂಧಿಸಿದ್ದಾರೆ.
ಇನ್ನು ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಿಕೋಟಾ ತಾಲೂಕು ಕೇಂದ್ರದಲ್ಲಿ ಪಪಂ ಮುಖ್ಯಾಧಿಕಾರಿ ರುದ್ರಗೌಡ ಸೋಲಾಪುರ, ಪಿಎಸೈ ಬಸವರಾಜ ಬಿಸನಕೊಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಾದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಹಾಜಿಮಸ್ತಾನ್ ಪ್ರವೇಶ ದ್ವಾರ, ಬಸವೇಶ್ವರ ವೃತ್ತ ಹಾಗೂ ಜತ್ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಹಾಗೂ ಜನರ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಯಿತು.
ಇದಲ್ಲದೇ ಜನರಲ್ಲಿ ಕರ್ಫ್ಯೂ ಜಾರಿಯ ಕುರಿತು ತಿಳಿವಳಿಕೆ ನೀಡಲು ಪಟ್ಟಣದ ಪ್ರಮುಖ ರಸ್ತೆಗಳು, ವಾರ್ಡ್‌ಗಳಲ್ಲಿ ಟಂಟಂಗೆ ಧ್ವನಿವರ್ಧಕದ ಜಾಗೃತಿ ಮೂಡಿಸಲಾಯಿತು. ಕೋವಿಡ್ ವಿರುದ್ಧ ಹೋರಾಟದಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು. ಮನೆಗಳಿಂದ ಅನಗತ್ಯ ಹೊರಗೆ ಬರಬಾರದು. ಮನೆಗಳಲ್ಲಿದ್ದರೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ, ನಿಯಮಿತವಾಗಿ ಸ್ಯಾನಿಟೈಸ್ ಬಳಸಿ ಕೈಗಳನ್ನು ತೊಳೆಯಿರಿ. ಸರ್ಕಾರ ರೂಪಿಸಿರುವ ಕೋವಿಡ್ ನಿಯಗಳನ್ನು ಜಾರಿಗೆ ತನ್ನಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿತ್ತು.
ಇದರ ಹೊರತಾಗಿಯೂ ಮನೆಗಳಿಂದ ಹೊರಗೆ ಬಂದವರಿಗೆ, ಬೈಕ್ ಮೇಲೆ ಸುತ್ತಾಡುವವರಿಗೆ, ಕೆಲಸ ನಿಮಿತ್ತ ಹೊರಗೆ ಬಂದರೂ ಮಾಸ್ಕ್ ಇಲ್ಲದವರಿಗೆ, ಅದರಲ್ಲೂ ಕರ್ಫ್ಯೂ ಸಡಿಲಿಕೆ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳಿಗೆ, ಅನಗತ್ಯವಾಗಿ ಬೈಕ್‌ಗಳ ಮೇಲೆ ಬೀದಿ ಸುತ್ತುವವರಿಗೆ ಪಪಂ ಸಿಬ್ಬಂದಿ ದಂಡ ವಿಧಿಸಿದರು. ಈ ಮಧ್ಯೆ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಅಕ್ರಮವಾಗಿ ಜಿಲ್ಲೆಗೆ ಪಡೆಯುವುದನ್ನು ತಡೆಗಟ್ಟಲು ತೆರೆದಿರುವ ಚೆಕ್‌ಪೋಸ್ಟ್ ಅಧಿಕಾರಿಗಳು ನಿಗಾ ಇರಿಸಿದ್ದರು. ಕೋವಿಡ್ ನಿಯಂತ್ರಣ ಸೆಕ್ಟರ್ ಅಧಿ ಕಾರಿ ರುದ್ರಗೌಡ ಸೋಲಾಪುರ ಕನಮಡಿ, ತೆಲಸಂಗ್ ಕ್ರಾಸ್, ಅಳಗಿನಾಳ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ ಕರ್ತವ್ಯ ನಿರತ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.