Advertisement
ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ. ಅಕ್ರಮ ಆಸ್ತಿ ಸಂಪಾದಿಸಿರುವ ಅಧಿಕಾರಿಗಳ ಮಾಹಿತಿ ಕಲೆ ಹಾಕುವ ಕೆಲಸಗಳು ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ ನಡೆಯುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚಿನ ಅಧಿಕಾರಿಗಳ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಲೋಕಾಯುಕ್ತ ಪೊಲೀಸರ ಕೈ ಸೇರಿದ್ದು, ಸದ್ಯದಲ್ಲೇ ದೊಡ್ಡ ಮಟ್ಟದ ದಾಳಿಗೆ ಪೊಲೀಸರು ಸಜ್ಜಾಗಿದ್ದಾರೆ. ಆದರೆ ದಾಳಿ ನಡೆಸುವ ಮುನ್ನ ಭ್ರಷ್ಟಾಚಾರ ಎಸಗಿರುವುದಕ್ಕೆ ಸಂಬಂಧಿಸಿ ಮೂಲ ಸಾಕ್ಷ್ಯಗಳನ್ನು ಕಲೆ ಹಾಕುವುದೇ ಸವಾಲಾಗಿದೆ ಎಂದು ಲೋಕಾಯುಕ್ತ ಉನ್ನತ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಒಂದು ವಾರದೊಳಗೆ ಬೆಂಗಳೂರು ನಗರ ವ್ಯಾಪ್ತಿಗೆ ಸಂಬಂಧಿಸಿದ 370 ಪ್ರಕರಣಗಳೂ ಎಸಿಬಿಯಿಂದ ಲೋಕಾಯುಕ್ತ ಅಂಗಳಕ್ಕೆ ವರ್ಗಾವಣೆ ಆಗಲಿವೆ. ಈ ಪೈಕಿ 120 ಪ್ರಕರಣ ನ್ಯಾಯಾಲಯದಲ್ಲಿ ವಿವಿಧ ವಿಚಾರಣೆ ಹಂತದಲ್ಲಿ ಹಾಗೂ 150 ಕೇಸ್‌ಗಳು ತನಿಖಾ ಹಂತದಲ್ಲಿವೆ. ಪ್ರಕರಣಗಳು ವರ್ಗಾವಣೆಯಾಗುತ್ತಿರುವ ಜತೆ ಜತೆಗೆ ಎಸಿಬಿಯಲ್ಲಿರುವ ಅಧಿಕಾರಿಗಳೂ ಲೋಕಾಯುಕ್ತಕ್ಕೆ ವರ್ಗಾವಣೆ ಆಗುತ್ತಿದ್ದಾರೆ. ಹೀಗಾಗಿ ಎಸಿಬಿಯಲ್ಲಿ ಕೆಲ ಪ್ರಕರಣಗಳ ತನಿಖೆ ನಡೆಸಿರುವ ತನಿಖಾಧಿಕಾರಿಗಳೇ ಲೋಕಾಯುಕ್ತದಲ್ಲಿ ತನಿಖೆ ಮುಂದುವರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಲೋಕಾಯುಕ್ತ ನಗರ ಪೊಲೀಸ್ ವಿಭಾಗದಲ್ಲಿ ಈವರೆಗೆ ಸಣ್ಣಪುಟ್ಟ ಟ್ರ್ಯಾಪ್ ಕೇಸ್‌ಗಳಿಗೆ ಸಂಬಂಧಿಸಿ 5 ಎಫ್ಐಆರ್‌ಗಳು ದಾಖಲಾಗಿವೆ.