ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಪ್ರಧಾನಿಯಾಗಿ, ಅಧ್ಯಕ್ಷನಾಗಿ ಕ್ಯೂಬಾ ದೇಶವನ್ನು ಆಳಿದಾತ. ಆತ ಎಷ್ಟು ವರ್ಣರಂಜಿತ ವ್ಯಕ್ತಿತ್ವವನ್ನು ಹೊಂದಿದ್ದನೋ ಅಷ್ಟೇ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದನು. ಅದು 60ರ ದಶಕ. ಅಮೆರಿಕಕ್ಕೆ ಅವನನ್ನು ಕಂಡರೆ ಆಗುತ್ತಿರಲಿಲ್ಲ. ಸದಾ ಆತನ ವಿರುದ್ಧ ಕತ್ತಿ ಮಸೆಯುತ್ತಿತ್ತು. ಆತನನ್ನು ಮಟ್ಟ ಹಾಕಲು ನಾನಾ ರಣತಂತ್ರಗಳನ್ನು ಹೂಡುತ್ತಿತ್ತು. ಫಿಡೆಲ್ ಕ್ಯಾಸ್ಟ್ರೋಗೆ ಮಿಲ್ಕ್ ಶೇಕ್ ಎಂದರೆ ಪಂಚಪ್ರಾಣ. ಅದರಲ್ಲೂ ಹವಾನಾದ ಲಿಬರ್ ಹೋಟೆಲ್‌ನ ಮಿಲ್ಕ್ ಶೇಕ್ ಎಂದರೆ ಬಾಯಿ ಚಪ್ಪರಿಸಿ ತಿನ್ನುತ್ತಿದ್ದರು. ಆ ಸಮಯದಲ್ಲಿ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿ.ಐ.ಎ ಫಿಡೆಲ್ ಕ್ಯಾಸ್ಟ್ರೊನನ್ನು ಹತ್ಯೆ ಮಾಡಲು ಹೊಂಚು ಹಾಕುತ್ತಿತ್ತು. ಯಾವುದೇ ಶತ್ರುವನ್ನು ಸೋಲಿಸಲು ಮೊದಲು ಅವರ ಬಲಹೀನತೆ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಅದರಂತೆ ಸಿ.ಐ.ಎ, ಕ್ಯಾಸ್ಟ್ರೊನನ್ನು ಹತ್ಯೆಗೈಯ್ಯಲು ಬಳಸಿದ್ದು ಮಿಲ್ಕ್ ಶೇಕನ್ನು! ಲಿಬರ್ ಹೋಟೆಲ್‌ನ ಮಾಣಿ ವಿಷಪೂರಿತ ಗುಳಿಗೆ(ಕ್ಯಾಪ್ಸೂಲ್)ಯನ್ನು ಆತನ ಮಿಲ್ಕ್ ಶೇಕ್‌ನಲ್ಲಿ ಸೇರಿಸುವಂತೆ ಮಾಡುವುದು ಅವರ ಉಪಾಯವಾಗಿತ್ತು. ಆದರೆ ಅಲ್ಲಾಗಿದ್ದೇ ಬೇರೆ. ವಿಷದ ಗುಳಿಗೆಯನ್ನು ಮಾಣಿ ಫ್ರಿಜ್‌ನ ಒಳಗಿಟ್ಟಿದ್ದ. ಅದು ಮಂಜುಗಡ್ಡೆಯಂತಾಗಿ ಅಂಟಿಕೊಂಡುಬಿಟ್ಟಿತು. ಅದನ್ನು ಬಲಪ್ರಯೋಗಿಸಿ ಎಲೆದಾಗ ಗುಳಿಗೆ ಒಡೆದು ಒಳಗಿದ್ದ ವಿಷವೆಲ್ಲ ಚೆಲ್ಲಿಹೋಯಿತು. ಹೀಗಾಗಿ ಮಿಲ್ಕ್ ಶೇಕ್ ಒಳಗೆ ವಿಷ ಸೇರಲಿಲ್ಲ. ಫಿಡೆಲ್ ಕ್ಯಾಸ್ಟ್ರೋಗೆ ಸಿ.ಐ.ಎ ಸಂಚು ಕೂಡಾ ತಿಳಿಯಲಿಲ್ಲ. ಇವಿಷ್ಟು ಮಾಹಿತಿ ನಂತರ ಆತನಿಗೆ ಗೊತ್ತಾಯಿತು.