Advertisement

ಕವಿ ಹೃದಯ ಬದಲಾಗುವುದಿಲ್ಲ

06:18 AM Feb 18, 2019 | |

ಬೆಂಗಳೂರು: ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಮಹತ್ವದ ಬದಲಾವಣೆಗಳಾದರೂ ಕವಿಯ ಮನಸ್ಸು ಪ್ರಕೃತಿಯ ವಿರುದ್ಧ ಚಿಂತಿಸಲಾರದು ಎಂದು ಕವಿ ಜರಗನಹಳ್ಳಿ ಶಿವಶಂಕರ್‌ ಅಭಿಪ್ರಾಯಪಟ್ಟರು.

Advertisement

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಭಾನುವಾರ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೊಲೀಸ್‌ ಮುಖ್ಯ ಪೇದೆ ಕಾಕೋಳು ಎಂ.ಶೈಲೇಶ್‌ ರಚಿಸಿರುವ “ಅಗ್ರ ಸಾಲಿಗೆ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಚನ ಭ್ರಷ್ಟತೆ, ದುಡ್ಡಿನ ಮೋಹದ ಹಿಂದೆ ಸಾಗುತ್ತಿರುವ ಸಮಾಜವನ್ನು ಸಾಹಿತ್ಯದ ಮೂಲಕ ಶಾಂತಿ, ಪ್ರೀತಿ, ಪ್ರೇಮದೆಡೆಗೆ ತಿರುಗುವಂತೆ ಮಾಡಬೇಕು. ಆಧುನಿಕ ಯುಗದ ಮನುಷ್ಯನ ಮೆದುಳಿನಲ್ಲಿ ಶಾಂತಿ ಸಹನೆಗಳ ಬದಲಿಗೆ ದ್ವೇಷ, ಅಸೂಯೆ ತುಂಬಿಕೊಂಡಿವೆ.

ಹೀಗಾಗಿ ಆತ ವಿಜ್ಞಾನ ತಂತ್ರಜ್ಞಾನದ ಮೂಲಕ ಹೊಸ ಹೊಸ ಸಂಶೋಧನೆಗಳನ್ನು ನಡೆಸಿ ಪ್ರಕೃತಿಯ ವಿರುದ್ಧವಾಗಿ ಚಿಂತಿಸುತ್ತಿದ್ದಾನೆ. ಆದರೆ ಕವಿ ಮನಸ್ಸು ಮಾತ್ರ ಪ್ರಕೃತಿಯ ವಿರುದ್ಧವಾಗಿ ಎಂದಿಗೂ ಯೋಚಿಸುವುದಿಲ್ಲ. ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಿಸರ್ಗದ ನಿಯಮದಂತೆ ಕವಿಯ ಚಿಂತನೆಗಳಿರುತ್ತವೆ ಎಂದು ತಿಳಿಸಿದರು.

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದೇ ಕವಿತೆ. ಕವಿ ಹೃದಯ ಇರುವವರೆಲ್ಲರೂ ಕವಿತೆಗಳನ್ನು ಬರೆಯಬಹುದು. ಕವಿತೆ ಯರೋಬ್ಬರ ಸ್ವತ್ತಲ್ಲ. ಕವಿತೆಗಳಲ್ಲಿ ಅಂತಃಕರಣವಿದ್ದರೆ ಅದು ಎಲ್ಲರನ್ನು ಸೆರೆ ಹಿಡಿದಿಡಲಿದೆ.

Advertisement

ಪೊಲೀಸ್‌ ಇಲಾಖೆಯಲ್ಲಿನ ಹಲವು ಕವಿ ಹೃದಯಗಳು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿವೆ. ಪಿ.ಎಸ್‌.ರಾಮಾಂಜನೇಯ, ಬೀಚಿ ಸೇರಿದಂತೆ ಹಲವು ಕವಿಗಳು, ಸಾಹಿತಿಗಳು ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿಯ ಮೂಲಕ ಅಕ್ಷರ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದರು.

ಮನುಷ್ಯ ಗೊಂದಲಗಳ ನಡುವೆ ಕಳೆದು ಹೋಗುತ್ತಿದ್ದಾನೆ. ಟಿವಿ, ಫ್ರಿಜ್‌, ಮೊಬೈಲ್‌ ಎಲ್ಲಾ ತಾಂತ್ರಿಕ ವಸ್ತುಗಳು ಅವನನ್ನು ಆಕ್ರಮಿಸಿಕೊಂಡು ಮನಸ್ಸಿನ ಪ್ರಶಾಂತತೆ ಕಳೆದುಕೊಳ್ಳುವಂತೆ ಮಾಡಿವೆ. ಆಧುನಿಕ ಯುಗದಲ್ಲಿ ಸಾಮಾಜಿಕ, ವಿದ್ಯುನ್ಮಾನ ಮಾಧ್ಯಮಗಳ ಭರಾಟೆ ನಡುವೆ ಜನರ ಅಭಿರುಚಿ ಬದಲಾಗಿದೆ.

ಆಗಿನ ಕಾಲದಲ್ಲಿ ಬಹುತೇಕ ಮಂದಿಯ ಅಭಿರುಚಿ ಸಾಹಿತ್ಯವಾಗಿತ್ತು. ಸಾಹಿತ್ಯದಿಂದ ವಿಮುಖವಾಗಿ ಅನ್ಯ ವಿಷಯಗಳೆಡೆಗೆ ಸಾಗುತ್ತಿರುವ ಜನರ ಅಭಿರುಚಿಯನ್ನು ಪುನಃ ಅದರೆಡೆ ಸೆಳೆಯಲು ಕವಿಗಳು ಮತ್ತೆ ಮತ್ತೆ ಬರೆಯುತ್ತಿರಬೇಕು. ಕವಿ ಮನಸ್ಸುಗಳು ಜನರಿಗೆ ಸಾಹಿತ್ಯ ರುಚಿಯ ಸವಿ ನೀಡಿ ಅವರು ಬೇರೆಡೆ ವಿಚಲಿತರಾಗದಂತೆ ಮಾಡಬಹುದು ಎಂದು ಹೇಳಿದರು.

ಇದೇ ವೇಳೆ ವಿಶೇಷ ಪೊಲೀಸ್‌ ಕವಿಗೋಷ್ಠಿ ನಡೆಯಿತು. ಕನ್ನಡ ಆದರ್ಶ ದಂಪತಿ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಉಪ ಪೊಲೀಸ್‌ ಆಯುಕ್ತ ಸಿದ್ದರಾಜು ಮತ್ತು ಲೇಖಕ ಕೆ.ಎಂ.ಶೈಲೇಜ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next