ಬೆಂಗಳೂರು: ಪ್ರವಾಸ ಕಥನದ ಕಾವ್ಯ ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಲೇಖಕಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ ತಾಂಜಾನಿಯಾ ಪ್ರವಾಸದ ಅನುಭವ ಕಥನ “ಕಗ್ಗತ್ತಲ ಖಂಡದೊಳಗೊಂದು ಬೆಳಕಿನ ಇಣುಕು’ ಅದ್ಭುತ ರಸಾನುಭವ ನೀಡುತ್ತದೆ ಎಂದು ಬರಹಗಾರ ಡಾ.ಕೆ.ಸತ್ಯನಾರಾಯಣ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ವಿಕಾಸ ಪ್ರಕಾಶ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಅವರ “ಕಗ್ಗತಲ ಖಂಡದೊಳಗೊಂದು ಬೆಳಕಿನ ಇಣುಕು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಗೈಯಲ್ಲಿ ಎಲ್ಲಾ ಮಾಹಿತಿ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಹಲವು ಪ್ರದೇಶಗಳು ಬೆಳಕಿಗೆ ಬಾರದೇ ಇನ್ನೂ ಕಗ್ಗತ್ತಲಲ್ಲೇ ಇವೆ ಎಂದು ಹೇಳಿದರು.
ಕನ್ನಡದಲ್ಲಿ ಆಫ್ರಿಕಾ ಖಂಡದ ಕುರಿತಾದ ಪ್ರವಾಸ ಕೃತಿಗಳ ಸಂಖ್ಯೆ ಕಡಿಮೆ. ಅದರಲ್ಲೂ ತಾಂಜಾನಿಯಾ, ಸೋಮಾಲಿಯಾ ಸೇರಿದಂತೆ ಆಫ್ರಿಕಾ ಖಂಡದ ದೇಶಗಳ ಇನ್ನಿತರ ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ ಚಿತ್ರಣವನ್ನು ಕಟ್ಟಿಕೊಡುವ ಕೃತಿಗಳ ಸಂಖ್ಯೆ ವಿರಳ. ಲೇಖಕಿ ಮಂಗಳಾ ಪ್ರಿಯದರ್ಶಿನಿ ಅವರು ಆಫ್ರಿಕಾದ ಗುಲಾಮರ ವ್ಯಾಪಾರ ಸೇರಿದಂತೆ ಅನೇಕ ರೀತಿಯ ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ ಎಂದರು.
ಬೇರೆ-ಬೇರೆ ದೇಶಗಳಿಗೆ ಪ್ರವಾಸಕ್ಕೆ ತೆರಳಿದಾಗ ತಾಯ್ನೆಲದ ಆಚಾರ ವಿಚಾರಗಳು ನೆನಪಾಗುತ್ತವೆ. ಇಲ್ಲಿ ಕೂಡ ಲೇಖಕರು ತಾಯ್ನೆಲದ ಬಗ್ಗೆ ನೆನಪಿಸಿದ್ದಾರೆ. ತಾಂಜಾನಿಯಾದಲ್ಲೂ ಹಿಂದೂ ದೇವಾಲಯಗಳಿದ್ದು ಅಲ್ಲಿನ ಮುಸ್ಲಿಂ ಸಮುದಾಯದವರು ದೇವಾಲಯಗಳ ಮುಂದೆ ಹೂ ಕಟ್ಟಿ ಮಾರಾಟ ಮಾಡುವುದನ್ನು ದಾಖಲಿಸಿದ್ದಾರೆ ಎಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಲೇಖಕಿ ಪ್ರೊ.ಎಂ.ಆರ್. ಕಮಲಾ, ಈ ಪುಸ್ತಕ ಆಫ್ರಿಕನ್ ಸಂಸ್ಕೃತಿಯ ಅಧ್ಯಯನದಂತಿದು, ತಾಂಜಾನಿಯಾ ಆತ್ಮವನ್ನು ಹಿಡಿದಿಡುವ ಪ್ರಾಮಾಣಿಕ ಪ್ರಯತ್ನವನ್ನು ಲೇಖಕಿ ಮಂಗಳಾ ಪ್ರಿಯದರ್ಶಿನಿ ಮಾಡಿದ್ದಾರೆ ಎಂದು ಹೇಳಿದರು. ವಿಕಾಸ ಪ್ರಕಾಶನದ ಮುಖ್ಯಸ್ಥೆ ಹಾಗೂ ಹಿರಿಯ ಪತ್ರಕರ್ತೆ ಆರ್. ಪೂರ್ಣಿಮಾ, ಡಾ. ಮಂಗಳ ಪ್ರಿಯದರ್ಶಿನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.