ಮೈಸೂರು: ಯುವ ಜನಾಂಗ ದೇಶದ ಮಹಾಪುರುಷರ ಕುರಿತು ಅಧ್ಯಯನ ನಡೆಸಿ, ಹೋರಾಟ ನಡೆಸಿದಾಗ ಮಾತ್ರ ಭಾರತ ಉಳಿಯಲು ಸಾಧ್ಯ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ನಗರದ ಮಾನಸ ಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣೆ ಕೇಂದ್ರದ ಆವರಣದಲ್ಲಿ ಗ್ರಂಥಾಲಯ, ವಸ್ತು ಸಂಗ್ರಹಾಲಯ ಮತ್ತು ದಲಿತ ದಾಖಲೀಕರಣ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಅಂಬೇಡ್ಕರ್, ಗಾಂಧಿಯನ್ನು ಬಿಟ್ಟು ಭಾರತವನ್ನು ಕಟ್ಟುವ ಸಂಚು ನಡೆದಿದೆ. ಇವರಿಬ್ಬರು ಇಲ್ಲದ ಭಾರತವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗೆ ರಾಜಕಾರಣಿಗಳು ಚರಿತ್ರೆಯನ್ನೇ ಅರಿಯದೆ ಮಾತನಾಡುತ್ತಿದ್ದಾರೆ. ಸಂವಿಧಾನ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ತಿಳಿಯದೆ ಸಮೃದ್ಧ ಭಾರತ ಕಟ್ಟುತ್ತೇವೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಕಟ್ಟುವುದಕ್ಕಿಂತ ಒಡೆಯುವ ಕೆಲಸಗಳು ಹೆಚ್ಚು ನಡೆಯುತ್ತಿವೆ. ಸಂವಿಧಾನ ಮೇಲೆ ಸವಾರಿ ನಡೆಯುತ್ತಿದ್ದು, ಪ್ರಜಾಪ್ರಭುತ್ವ ಮಂಕಾಗಿದೆ. ಈ ನಿಟ್ಟಿನಲ್ಲಿ ಯುವಜನತೆ ಮಹಾಪುರುಷರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಇಂದಿಗೂ ಶೋಷಿತ ಸಮಾಜಗಳಿಗೆ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾಜಿಕ ನ್ಯಾಯವನ್ನೇ ಸಂಪೂರ್ಣವಾಗಿ ನಿರಾಕರಿಸಲಾಗುತ್ತಿದೆ. ಭೂಮಿ ಒಡೆಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಇವರಿಂದ ಯಾವುದೇ ಪ್ರಗತಿ ನಿರೀಕ್ಷಿಸಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲವಾದರೆ ನಾವ್ಯಾರು ಉಳಿಯುವುದಿಲ್ಲ ಎಂದರು.
ಮಾಧ್ಯಮಗಳು ಕಾರ್ಪೊರೆಟ್‌ಗಳ ಕೈಗೊಂಬೆಯಾಗಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಸುದ್ದಿ ಪ್ರಕಟಿಸುತ್ತಿವೆ. ಕೃಷಿ ಕ್ಷೇತ್ರ ನಾಶವಾಗುತ್ತಿದೆ. ದೇಶದಲ್ಲಿ ಉದ್ಯೋಗ ಕಡಿತ ಹೆಚ್ಚುತ್ತಿದೆ. ನ್ಯಾಯಾಂಗ ಪಕ್ಷ ಪಾತವಾಗಿದೆ. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಯುವಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ನಳಂದ ಬುದ್ಧವಿಹಾರದ ಭಂತೇ ಬೋಧಿದತ್ತ, ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಎನ್.ಮುನಿರಾಜು, ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣೆ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ನರೇಂದ್ರ ಕುಮಾರ್, ಪ್ರೊ. ಮಹೇಶಚಂದ್ರ ಗುರು ಇತರರಿದ್ದರು.
ವಿವಿ ಸಿಂಡಿಕೇಟ್‌ನಲ್ಲಿ ಆದ್ಯತೆ ನೀಡಿ: ಮೈಸೂರು ವಿವಿ ನೂತನ ಸಿಂಡಿಕೇಟ್ ಸದಸ್ಯರಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ಇಲ್ಲ. ಇಂತಹ ಬೆಳವಣಿಗೆ ವಿವಿಯಲ್ಲಿ ಆಗಬಾರದು. ಕೂಡಲೇ ಕುಲಪತಿಗಳು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು. ವಿವಿಗಳು ಕತ್ತಲನ್ನು ತೊಡೆದು ಬೆಳಕನ್ನು ಪಸರಿಸುವ ಕೇಂದ್ರಗಳು, ಇವು ಯಾರ ಕೈಗೊಂಬೆಯಾಗಬಾರದು. ವಿದ್ಯಾರ್ಥಿಗಳು ವಿವಿಯಲ್ಲಿ ಜ್ಞಾನವನ್ನು ವೃದ್ಧಿಸಿಕೊಂಡು ದೇಶದ ಅಭಿವೃದ್ಧಿಗೆ ಹೋರಾಡುವ ಚೈತನ್ಯ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಡಾ| ಎಚ್.ಸಿ. ಮಹದೇವಪ್ಪ ಸಲಹೆ ನೀಡಿದರು.