Advertisement

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

01:20 AM Jun 02, 2020 | Sriram |

ಹೊಸದಿಲ್ಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸತ್‌ ಅಧಿವೇಶನವು “ಇ-ಅಧಿವೇಶನ’ವಾಗಿ ಮಾರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ. ಸಂಸದರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸುವ ದಿನಗಳು ಸನ್ನಿಹಿತವಾಗಿವೆ.

Advertisement

ಆದರೆ ಇ-ಅಧಿವೇಶನ ನಡೆಸುವುದು ಸುಲಭವಲ್ಲ. ಆದರೂ ಅಂಥದೊಂದು ಸಾಧ್ಯತೆಯ ಕುರಿತು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆ ಸಭಾಪತಿ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚರ್ಚೆ ನಡೆಸಿದ್ದಾರೆ. ದೇಶದೆಲ್ಲೆಡೆ ಕೋವಿಡ್-19 ಸೋಂಕು ಹರಡಿರುವ ಕಾರಣ ಎಂದಿನಂತೆ ಸಂಸತ್‌ ಅಧಿವೇಶನ ನಡೆಸುವಂತಿಲ್ಲ. ಇಷ್ಟು ದಿನ ಸಾರ್ವಜನಿಕರಿಗೆ ಸಾಮಾಜಿಕ ಅಂತರದ ಪಾಠ ಹೇಳಿರುವ ಜನಪ್ರತಿನಿಧಿಗಳು ಈಗ ತಾವೂ ಅದನ್ನು ಪಾಲಿಸಲೇಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಿದೆ.

ಸೆಂಟ್ರಲ್‌ ಹಾಲ್‌ನಲ್ಲಿ ಕಲಾಪ
ಲೋಕಸಭೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಹಾಲ್‌ನಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಸಾಮಾಜಿಕ ಅಂತರ ಅಡ್ಡಿಯಾಗುತ್ತದೆ. ಹೀಗಾಗಿ ಲೋಕಸಭೆಯನ್ನು ಸೆಂಟ್ರಲ್‌ ಹಾಲ್‌ಗೆ ಸ್ಥಳಾಂತರಿಸುವ ಕುರಿತೂ ಚರ್ಚೆಯಾಗಿದೆ. ಹಾಗೆಯೇ ರಾಜ್ಯಸಭೆ ಕಲಾಪವನ್ನು ಲೋಕಸಭೆ ಸಭಾಂಗಣಕ್ಕೆ ಸ್ಥಳಾಂತರಿಸಲಾಗುತ್ತದೆ. ರಾಜ್ಯಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಇರುವುದರಿಂದ ಲೋಕಸಭೆಗೆ ಸ್ಥಳಾಂತರ ಮಾಡಬಹುದು. ಇದೇ ವೇಳೆ ಉಭಯ ಸದನಗಳ ಕಲಾಪವನ್ನು ಪರ್ಯಾಯ ದಿನಗಳಂದು ನಡೆಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಇ-ಪಾರ್ಲಿಮೆಂಟ್‌
ಅಧಿವೇಶನವು ದೂರದರ್ಶನದಲ್ಲಿ ನೇರ ಪ್ರಸಾರವಾಗುವುದರಿಂದ ಗೌಪ್ಯತೆ ಕಾಯ್ದುಕೊಳ್ಳುವ ಪ್ರಶ್ನೆ ಬರುವುದಿಲ್ಲ. ಹೀಗಾಗಿ ಇ-ಅಧಿವೇಶನ ನಡೆಸುವುದರಿಂದ ಯಾವುದೇ ಸಮಸ್ಯೆ ಎದುರಾಗದು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎರಡೂ ಸದನಗಳ ಮುಖ್ಯ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಇತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಇಬ್ಬರು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಯಾಕೆ ಈ ಚರ್ಚೆ?
ಸದ್ಯ ದೇಶದ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿದ್ದಾರೆ. ಒಂದು ವೇಳೆ ಜುಲೈ-ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನ ನಡೆದರೆ ಇವರು ತಮ್ಮ ತಮ್ಮ ಸ್ಥಳಗಳಿಂದ ಬರುವುದು ಕಷ್ಟಸಾಧ್ಯ. ಈ ಬಗ್ಗೆ ಹಲವಾರು ಸಂಸದರು ಸ್ಪೀಕರ್‌ ಮತ್ತು ರಾಜ್ಯಸಭೆ ಸಭಾಪತಿಗಳ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೆ ಸದ್ಯ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ 37 ಸದಸ್ಯರಿಗೆ ಇನ್ನೂ ಪ್ರಮಾಣ ವಚನ ಬೋಧನೆ ಆಗಿಲ್ಲ.

Advertisement

ತತ್‌ಕ್ಷಣಕ್ಕೆ ಕಷ್ಟಸಾಧ್ಯ
ಕೋವಿಡ್-19 ಸೋಂಕಿನ ಸಂದಿಗ್ಧ ಪರಿಸ್ಥಿತಿ ಎದುರಾದ ದಿನದಿಂದಲೂ ಇ-ಅಧಿವೇಶನ ನಡೆಸುವ ವಿಚಾರವಾಗಿ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಈಗ ಮುಂಗಾರು ಅಧಿವೇಶನವನ್ನು ಆನ್‌ಲೈನ್‌ ಮೂಲಕ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ ಇದು ತತ್‌ಕ್ಷಣಕ್ಕೆ ಸಾಧ್ಯವಿಲ್ಲ. ಏಕೆಂದರೆ ಇ-ಅಧಿವೇಶನ ನಡೆಸಲು ಸಾಕಷ್ಟು ಪೂರ್ವಸಿದ್ಧತೆ ಬೇಕಾಗುತ್ತದೆ. ಈಗಾಗಲೇ ಬ್ರಿಟನ್‌ ಮತ್ತು ಮಾಲ್ಡೀವ್ಸ್‌ ಅಧಿವೇಶನಗಳು ಆನ್‌ಲೈನ್‌ ಮೂಲಕ ಯಶಸ್ವಿಯಾಗಿ ನಡೆದ ಉದಾಹರಣೆಗಳು ಇರುವ ಕಾರಣ ಅಸಾಧ್ಯವೇನಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next