ಹುಬ್ಬಳ್ಳಿ: ಕೇಂದ್ರ ಸರಕಾರ ಸಾರ್ವಜನಿಕ ಸೇವಾ ವಲಯಗಳ ಖಾಸಗೀಕರಣಕ್ಕೆ ಮುಂದಾಗಿದ್ದು, ಇವುಗಳ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಹೇಳಿದರು.
ಜವಳಿ ವರ್ತಕರ ಸಭಾಭವನದಲ್ಲಿ ಆಶಾ ಕಾರ್ಯಕರ್ತೆಯರ ಸಂಘದಿಂದ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನವಿರೋಧಿ ನೀತಿಗಳಿಂದ ದೇಶದಲ್ಲಿ ಜನ ಸಾಮಾನ್ಯರ ಬದುಕು ದುಸ್ಥರವಾಗುತ್ತಿದೆ. ರೈಲ್ವೆ, ಬಿಎಸ್ಸೆನ್ನೆಲ್ನಂತಹ ಸೇವಾ ವಲಯಗಳನ್ನು ಖಾಸಗೀಕರಣ ಮಾಡುವ ಹುನ್ನಾರ ಕೇಂದ್ರ ಸರಕಾರದಿಂದ ನಡೆಯುತ್ತಿದೆ. ಅಧಿಕಾರ, ಹಣ, ಕೀಳು ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವ ಮಣ್ಣುಪಾಲು ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹೋರಾಟ ಕೊನೆಯ ಅಸ್ತ್ರ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರ ದುಡಿಮೆಗೆ ತಕ್ಕ ವೇತನ ನೀಡುವಂತೆ ಒಂದು ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. 12,000 ರೂ. ಕನಿಷ್ಠ ಮಾಸಿಕ ಪ್ರೋತ್ಸಾಹಧನ ನಿಗದಿ ಮಾಡಬೇಕು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಆಶಾ ಕುಂದುಕೊರತೆ ನಿವಾರಣಾ ಸಭೆ ನಡೆಸಬೇಕು ಎನ್ನುವ ಬೇಡಿಕೆಗೆ ಯಾವುದೇ ಸ್ಪಂದನೆ ಇಲ್ಲದಂತಾಗಿದೆ. ಈ ಎಲ್ಲ ವೈಫಲ್ಯ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಬೀದಿಗಿಳಿಯಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಯ ಗಂಗಾಧರ ಬಡಿಗೇರ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕೆಲಸ ನಡೆಯುತ್ತಿದೆ. ಕಾರ್ಮಿಕ ಹಕ್ಕುಗಳ ರಕ್ಷೆಗಾಗಿ 10 ಕೇಂದ್ರ ಕಾರ್ಮಿಕ ಸಂಘಗಳು ನೀಡಿದ ಕರೆಯಂತೆ ಆ. 2ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಆಶಾ ಸಂಘದ ಭುವನಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳು ಇದ್ದರು.