ಶಹಾಬಾದ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಸರಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳನ್ನು ಜನರಿಗೆ ತಿಳಿಸಲು ಪಕ್ಷದ ಕಾರ್ಯಕರ್ತರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ತೊಗರಿ ಮಂಡಳಿ ಅಧ್ಯಕ್ಷರಾದ ಭಾಗಣ್ಣಗೌಡ ಸಂಕನೂರ ಕರೆ ನೀಡಿದರು.
ನಗರದ ಶಮ್ಸ್ ಸಭಾಂಗಣದಲ್ಲಿ ಬುಧವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಗುರುವಾರ ರಾಜ್ಯ ಗೃಹ ಸಚಿವ ಡಾ| ಜಿ.ಪರಮೇಶ್ವರ, ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ಮುಖಂಡರು ಆಗಮಿಸುವದರಿಂದ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನ್ನಭಾಗ್ಯ, ಶಾದಿ ಭಾಗ್ಯ, ಮಕ್ಕಳಿಗೆ ಬಿಸಿಯೂಟ, ಹಾಲು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಲವಾರು ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾರಿಗೆ ತಂದಿದ್ದು, ಅದನ್ನು ಕಾರ್ಯಕರ್ತರು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ಜಿ.ರಾಮಕೃಷ್ಣ ಮಾತನಾಡಿ ಕಲಬರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುಮಾರ 13 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇಬ್ರಾಹಿಂ ನಾಗೂರೆ ಖಾನ್, ಸುರೇಶ ನಾಯಕ ಕೀಶನ್ ನಾಯಕ, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ ಮುಟ್ಟತ್ತಿ, ಶೇರ್ ಅಲಿ, ನಗರ ಸಭೆ ಅಧ್ಯಕ್ಷೆ ಗೀತಾ ಬೊಗುಂಡಿ, ಸುಭಾಷ ಪಂಚಾಳ, ವಾಡಿ ಶಹಾಬಾದ್ ನಗರ ಪ್ರಾಧಿಕಾರದ ಅಧ್ಯಕ್ಷ ಹಾಶಮ್ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ನಿಂಗಣ್ಣ ದೇವಕರ, ಶರಣಗೌಡ ಪೊಲೀಸ್ ಪಾಟೀಲ, ವಿಜಯಕುಮಾರ ಜಿ.ರಾಮಕೃಷ್ಣ ಹಾಗೂ ನಗರಸಭೆ ಸದಸ್ಯರು ಪಾಲ್ಗೊಂಡಿದ್ದರು.
ಡಾ| ಎಂ. ರಶೀದ ಪ್ರಾಸ್ತಾವಿಕ ಮಾತನಾಡಿದರು, ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ ಹಿರೇಮಠ ನಿರೂಪಿಸಿದರು. ನಗರ ಸಾರ್ವಜನಿಕ ಸಭೆ ನಡೆಯುವ ಸ್ಥಳವನ್ನು ಭಾಗಣ್ಣಗೌಡ ಸಂಕನೂರ ಪರಿಶೀಲನೆ ನಡೆಸಿದರು.