ನಾಟಕ ಪ್ರದರ್ಶನಕ್ಕೆ ಆ ಪುಸ್ತಕ ಬೇಕೇ ಬೇಕಿತ್ತು. ಯಾಕೆಂದರೆ, ಒಂದಿಬ್ಬರು ಮಕ್ಕಳು ನಡುನಡುವೆ ತಮ್ಮ ಡೈಲಾಗ್ ಮರೆಯುತ್ತಿದ್ದರು. ಆಗ ನಾನು ವೇದಿಕೆಯ ಹಿಂಭಾಗದಲ್ಲಿ ನಿಂತು ಅವರಿಗೆ ಡೈಲಾಗ್ ನೆನಪಿಸಬೇಕಿತ್ತು. ನನ್ನದೇ ನಿರ್ದೇಶನವಾದ್ದರಿಂದ ಮತ್ತು ಬಹುದಿನಗಳಿಂದ ಪ್ರ್ಯಾಕ್ಟೀಸ್ ಮಾಡಿಸಿದ್ದರಿಂದ ಆ ನಾಟಕ ಬಾಯಿಪಾಠದಂತಾಗಿತ್ತು.
ನಾನು ಆಗ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೆ. ಪ್ರತಿ ವರ್ಷವೂ ಶಾಲಾ ವಾರ್ಷಿಕೋತ್ಸವವನ್ನು ನಡೆಸುವುದು ವಾಡಿಕೆ. ಆ ವರ್ಷದ ವಾರ್ಷಿಕೋತ್ಸವದಲ್ಲಿ ನೃತ್ಯ ಹಾಗೂ ಇತರ ಕಾರ್ಯಕ್ರಮಗಳ ಕೊನೆಗೆ ಮಕ್ಕಳ ನಾಟಕವೊಂದನ್ನು ಇಟ್ಟುಕೊಂಡಿದ್ದೆವು. ಅದಾದ ಬಳಿಕ ಹಳೆ ವಿದ್ಯಾರ್ಥಿಗಳು ಹಾಗೂ ಊರವರಿಂದ ಮತ್ತೂಂದು ನಾಟಕ, ಲಘು ಮನರಂಜನೆ ಇತ್ಯಾದಿ ಕಾರ್ಯಕ್ರಮಗಳು ರಾತ್ರಿಯಿಡೀ ನಡೆಯುವುದಿತ್ತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಬಹುಪಾಲು ಜವಾಬ್ದಾರಿ ನನ್ನದಾಗಿತ್ತು. ಮಕ್ಕಳ ನಾಟಕದ ನಿರ್ದೇಶನವೂ ನನ್ನದೇ. ನಾಟಕ ಪ್ರಾರಂಭವಾಗುವ ಸ್ವಲ್ಪ ಮೊದಲು ನಾನು ಶಿಕ್ಷಕರ ಕೊಠಡಿಗೆ ಹೋದೆ. ಅಲ್ಲಿ ಮುಖ್ಯಶಿಕ್ಷಕಿ ನಮಗೆಲ್ಲಾ ಚಹಾ ವ್ಯವಸ್ಥೆ ಮಾಡಿದ್ದರು. ಚಹಾ ಕುಡಿದ ನಂತರ ಲಗುಬಗೆಯಿಂದ ಸ್ಟೇಜ್ ಬಳಿ ಬಂದೆ. ಅದುವರೆಗೂ ನಾಟಕದ ಡೈಲಾಗ್‌ಗಳನ್ನು ಬರೆದಿದ್ದ ಪುಸ್ತಕ ನನ್ನ ಬಳಿಯೇ ಇತ್ತು. ಇನ್ನೇನು ನಾಟಕ ಪ್ರಾರಂಭವಾಗಬೇಕು ಎನ್ನುವಾಗ ಕೈಯಲ್ಲಿ ಪುಸ್ತಕ ಇಲ್ಲ ಎಂಬುದು ತಿಳಿಯಿತು. ಶಿಕ್ಷಕರ ಕೊಠಡಿಗೆ ಬಂದು ಅಲ್ಲೆಲ್ಲಾ ಹುಡುಕಾಡಿದರೂ ಪುಸ್ತಕ ಸಿಗಲೇ ಇಲ್ಲ. ಎಲ್ಲಿಟ್ಟಿದ್ದೇನೆಂದು ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ, ಗಾಬರಿಯಲ್ಲಿ ಅದು ನೆನಪಾಗಲೇ ಇಲ್ಲ.
ನಾಟಕ ಪ್ರದರ್ಶನಕ್ಕೆ ಆ ಪುಸ್ತಕ ಬೇಕೇ ಬೇಕಿತ್ತು. ಯಾಕೆಂದರೆ, ಒಂದಿಬ್ಬರು ಮಕ್ಕಳು ನಡುನಡುವೆ ತಮ್ಮ ಡೈಲಾಗ್ ಮರೆಯುತ್ತಿದ್ದರು. ಆಗ ನಾನು ವೇದಿಕೆಯ ಹಿಂಭಾಗದಲ್ಲಿ ನಿಂತು ಅವರಿಗೆ ಡೈಲಾಗ್ ನೆನಪಿಸಬೇಕಿತ್ತು. ನನ್ನದೇ ನಿರ್ದೇಶನವಾದ್ದರಿಂದ ಮತ್ತು ಬಹುದಿನಗಳಿಂದ ಪ್ರ್ಯಾಕ್ಟೀಸ್ ಮಾಡಿಸಿದ್ದರಿಂದ ಆ ನಾಟಕ ಬಾಯಿಪಾಠದಂತಾಗಿತ್ತು. ಆದರೂ ಪುಸ್ತಕ ಇಲ್ಲದೇ ನನಗೂ ಡೈಲಾಗ್ ನೆನಪಿಗೆ ಬಾರದಿದ್ದರೆ, ನಿಭಾಯಿಸುವುದು ಹೇಗೆಂದು ತಿಳಿಯದೆ ಭಯವಾಗತೊಡಗಿತ್ತು.
ಅಂದಹಾಗೆ, ಆವತ್ತು ಮಕ್ಕಳು ಪ್ರದರ್ಶಿಸಬೇಕಿದ್ದುದು “ಮರೆವೋ ಮರೆವು’ ಎಂಬ ಹಾಸ್ಯ ನಾಟಕವನ್ನು. ನಾಟಕ ಪ್ರಾರಂಭವಾಯ್ತು. ಮೊದಲ ಭಾಗದ ಡೈಲಾಗುಗಳೆÇÉಾ ಸರಾಗವಾಗಿ ಬಂದವು. ನಂತರ ಒಬ್ಬ ಅಲ್ಲಲ್ಲಿ ತಡವರಿಸಿದ. ನಾಟಕದ ಕತೆ ಗೊತ್ತಿದ್ದ ಕಾರಣ ನಾನು ಹಿಂದಿನಿಂದ ಡೈಲಾಗ್ ಹೇಳಿಕೊಟ್ಟು ಪ್ರದರ್ಶನ ಸುಸೂತ್ರವಾಗಿ ನಡೆಯುವಂತೆ ಮಾಡಿದೆ. ಡೈಲಾಗುಗಳ ಮೂಲಸ್ವರೂಪದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಾದರೂ, ನಾಟಕ ಚೆನ್ನಾಗಿ ನಡೆಯಿತು. ನಾನು ನೆಮ್ಮದಿಯ ನಿಟ್ಟುಸಿರಿಟ್ಟೆ.
ರಾತ್ರಿಯಿಡೀ ವಾರ್ಷಿಕೋತ್ಸವ ನಡೆದಿದ್ದರಿಂದ ಮರುದಿನ ಶಾಲೆಗೆ ರಜೆ ನೀಡಲಾಗಿತ್ತು. ನಂತರದ ದಿನ ಶಾಲೆಗೆ ಬರುವವರೆಗೂ ನನ್ನನ್ನು ಕೊರೆಯುತ್ತಿದ್ದ ಪ್ರಶ್ನೆಯೊಂದೇ, ಆ ನಾಟಕ ಪುಸ್ತಕ ಎಲ್ಲಿ ಹೋಯ್ತು? ಎಂಬುದು. ನನ್ನ ಕೈಯಲ್ಲೇ ಪುಸ್ತಕವಿದ್ದುದು ಖಚಿತವಾಗಿ ನೆನಪಿತ್ತು. ಆದರೂ, ಎಲ್ಲರನ್ನೂ ಒಮ್ಮೆ ಕೇಳಿದೆ. ಯಾರಿಗೂ ಅದರ ಬಗ್ಗೆ ಮಾಹಿತಿ ಇರಲಿಲ್ಲ. ಎಲ್ಲರೂ ಸೇರಿ ಮತ್ತೂಮ್ಮೆ ಹುಡುಕಾಡಿದೆವು. ಪುಸ್ತಕ ಸಿಗಲಿಲ್ಲ. ಹೋಗಲಿ ಬಿಡು, ಹೇಗೂ ಪ್ರದರ್ಶನ ಮುಗಿಯಿತಲ್ಲ, ಇನ್ಯಾಕೆ ಆ ಪುಸ್ತಕ ಅಂತ ನಾನೂ ಸುಮ್ಮನಾದೆ. ಸ್ವಲ್ಪ ಹೊತ್ತಿನ ಬಳಿಕ ನಮ್ಮ ಮುಖ್ಯೋಪಾಧ್ಯಾಯಿನಿ, ಕಪಾಟಿನಿಂದ ಯಾವುದೋ ದಾಖಲೆ ಪುಸ್ತಕ ಹೊರತೆಗೆದರು. ಅದರೊಂದಿಗೆ ಹೊರಬಂತು ನಮ್ಮ ನಾಟಕ ಪುಸ್ತಕ!
ಏನಾಗಿತ್ತೆಂದರೆ, ಆ ದಿನ ರಾತ್ರಿ ಚಹಾ ಕುಡಿದು ಬಾಗಿಲು ಹಾಕಿ ಹೊರಬರುವ ಮೊದಲು, ಅವರು ಮೇಜಿನ ಮೇಲಿದ್ದ ಒಂದಷ್ಟು ಪುಸ್ತಕಗಳನ್ನು ಭದ್ರವಾಗಿ ಕಪಾಟಿನಲ್ಲಿಟ್ಟು ಬೀಗ ಜಡಿದಿದ್ದರು. ಚಹಾ ಕುಡಿಯಲು ಹೋದಾಗ, ನಾನು ಕೈಯಲ್ಲಿದ್ದ ಪುಸ್ತಕವನ್ನು ಅವರ ಟೇಬಲ… ಮೇಲೆ ಇಟ್ಟದ್ದು ಅವರಿಗೂ ಗೊತ್ತಿರಲಿಲ್ಲ. ಗಡಿಬಿಡಿಯಲ್ಲಿ ಇದ್ದುದರಿಂದ ಪುಸ್ತಕವನ್ನು ಆ ಟೇಬಲ್ ಮೇಲೆ ಇಟ್ಟದ್ದು ನನಗೂ ನೆನಪಾಗಲಿಲ್ಲ. ಅಂತೂ, “ಮರೆವೋ ಮರೆವು’ ನಾಟಕ, ನೈಜ ಮರೆವಿನಿಂದ ನನ್ನನ್ನು ಬೇಸ್ತು ಬೀಳಿಸಿತ್ತು.
-ಜೆಸ್ಸಿ ಪಿ.ವಿ. ಪುತ್ತೂರು