ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಿಗೆ ಬರವಿಲ್ಲ. ಅದರಲ್ಲೂ ಗುಣಮಟ್ಟದ ಸಿನಿಮಾಗಳ ಮೂಲಕ ಪರಭಾಷೆಯ ಚಿತ್ರರಂಗವೂ ಕೂಡ ಕನ್ನಡ ಸಿನಿಮಾರಂಗದತ್ತ ಮುಖ ಮಾಡುವಂತಹ ಸಿನಿಮಾಗಳು ಬರುತ್ತಿವೆ. ಹಳಬರ ಜೊತೆಯಲ್ಲಿ ಹೊಸಬರು ಸಹ ಇಲ್ಲಿ ಜೋರು ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ವಾರ ಬಂದರೆ ಸಾಕು ಸಾಲು ಸಾಲು ಚಿತ್ರಗಳು ಬಿಡುಗಡೆ ಆಗುವ ಮೂಲಕ ಯಾವುದನ್ನು ನೋಡಬೇಕು, ಬಿಡಬೇಕು ಎಂಬ ಪ್ರಶ್ನೆ ಪ್ರೇಕ್ಷಕರ ಗೊಂದಲಕ್ಕೂ ಕಾರಣವಾಗುತ್ತಿದೆ.
ಅದರ ನಡುವೆ ಚಿತ್ರಮಂದಿರಗಳಿಗೆ ಪ್ರೇಕ್ಷಕ ಬರುತ್ತಿಲ್ಲ ಎಂಬ ಅಳಲು ಕೇಳುತ್ತಿರುವ ಬೆನ್ನಲ್ಲೇ, ಪೈರಸಿ ಎಂಬ ಪೆಡಂಭೂತ ಆವರಿಸಿಕೊಂಡ ಭಯ ಬೇರೆ. ಹೌದು, ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರಕ್ಕೂ ಪೈರಸಿ ಕಾಟವಿತ್ತು. ಅದಾದ ಬೆನ್ನಲ್ಲೇ ಧನಂಜಯ ನಟಿಸಿರುವ “ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೂ ಪೈರಸಿಯ ಬಿಸಿ ತಟ್ಟಿದೆ ಎಂಬ ಕೂಗು ಕೇಳಿಬಂತು. ಈಗ ಪುನೀತ್‌ರಾಜಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗಿರುವ “ಮಾಯಾಬಜಾರ್’ ಚಿತ್ರಕ್ಕೂ ಪೈರಸಿ ಕಾಟವಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಮಾಯಾ ಬಜಾರ್’ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರತಂಡ ಕೂಡ ಖುಷಿಯಲ್ಲಿದೆ. ಅದರ ಬೆನ್ನಲ್ಲೇ ಚಿತ್ರತಂಡಕ್ಕೆ ಪೈರಸಿ ಆಗುತ್ತಿದೆ ಎಂಬ ಆತಂಕ ಎದುರಾಗಿದೆ. ಅಂದಹಾಗೆ, “ಮಾಯಾ ಬಜಾರ್’ ಬಿಡುಗಡೆಯಾಗಿ ಎರಡು ದಿನದಲ್ಲೇ ತಮಿಳು ರಾಕರ್ಸ್ ನಲ್ಲಿ ಲೀಕ್ ಆಗಿದ್ದು, ಇಡೀ ಚಿತ್ರ ಆನ್ ಲೈನ್‌ನಲ್ಲಿ ಪೈರಸಿ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರವನ್ನುಂಟು ಮಾಡಿದೆ. ಕನ್ನಡಕ್ಕೂ ಪೈರಸಿ ಕಾಟ ಹೆಚ್ಚಾಗಿದ್ದು, ಇದುವರೆಗೆ ಸ್ಟಾರ್ ಸಿನಿಮಾಗಳಿಗಷ್ಟೇ ಪೈರಸಿ ಕಾಟವಿತ್ತು.
ಈಗ ಹೊಸಬರ ಚಿತ್ರಗಳಿಗೂ ಪೈರಸಿ ಆವರಿಸಿಕೊಂಡಿರುವುದು ಬೇಸರದ ಸಂಗತಿ. ಒಳ್ಳೆಯ ಪ್ರತಿಕ್ರಿಯೆ ಸಿಗುವ ಸಿನಿಮಾಗಳಿಗೇ ಪೈರಸಿ ಕಾಟ ಹೆಚ್ಚುತ್ತಿರುವುದು ನಿಜಕ್ಕೂ ವಿಪರ್ಯಾಸ. ಸದ್ಯಕ್ಕೆ “ಮಾಯ ಬಜಾರ್’ ಚಿತ್ರಕ್ಕೆ ಒಳ್ಳೆಯ ಬೆಂಬಲ ಸಿಗುತ್ತಿದೆ. ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಅಚ್ಚುತ್ ಕುಮಾರ್, ಪ್ರಕಾಶ್ ರಾಜ್, ಚೈತ್ರಾ ರಾವ್, ಸಾಧುಕೋಕಿಲ ಸೇರಿದಂತೆ ಇತರರು ನಟಿಸಿದ್ದಾರೆ.