ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿ ನೀರು ಜಿಂದಾಲ್ ಕೈಗಾರಿಕೆ ಸಮೂಹಕ್ಕೆ ಸರಬರಾಜಾಗಿರುವ ಬೃಹತ್ ಕೊಳವೆ ಮಾರ್ಗದ ವಾಲ್ವ್ ಒಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು, ಜಮೀನಿನ ಫಲವತ್ತಾದ ಮಣ್ಣು ಹಳ್ಳ ಸೇರಿದೆ.
ವಾಲ್ವ್ ಬಂದ್‌ಗೆ ತಡೆದು ಆಕ್ರೋಶ: ಕುಷ್ಟಗಿ ಸೀಮಾದ ಗುರಪ್ಪ ಕೋತ್ನಿ ಅವರ ಜಮೀನಿಗೆ ದೌಡಾಯಿಸಿದ ಜಿಂದಾಲ್ ಪೈಪ್‌ಲೈನ್ ಮೇಲುಸ್ತುವಾರಿ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಂದಾಲ್ ಪೈಪ್‌ಲೈನ್ ನಿರ್ವಹಣೆ ಸಿಬ್ಬಂದಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ರೈತರ ಬೇಡಿಕೆಗೆ ಅನುಗುಣವಾಗಿ ಪರಿಹಾರ, ಜೊತೆಗೆ ಕೊಚ್ಚಿ ಹೋದ ಮಣ್ಣು ತಂದು ಹಾಕುವ ಹಾಗೂ ಜಮೀನು ದಾರಿ, ಬೆಳೆ ಪರಿಹಾರದ ಭರವಸೆ ನಂತರ ವಾಲ್ವ್ ಬಂದ್ ಮಾಡಲು ಅವಕಾಶ ಕಲ್ಪಿಸಲಾಯಿತು.
Advertisement
ಜಿಂದಾಲ್ ಕೊಳವೆ ಮಾರ್ಗದ ವಾಲ್ವ್ ಒಡೆಯುವಿಕೆ ತಿಂಗಳಲ್ಲಿ ಇದು ಎರಡನೇ ಬಾರಿ. ಜುಲೈ 9ರಂದು ಇದೇ ಮಾರ್ಗದ ಮುಂದಿನ ಭಾಗದ ರೇಣಮ್ಮ ಕಂದಗಲ್ ಅವರ ಜಮೀನಿನಲ್ಲಿದ್ದ ವಾಲ್ವ್ ಒಡೆದು, ಅಪಾರ ಪ್ರಮಾಣದಲ್ಲಿ ನೀರು ಹಳ್ಳಕ್ಕೆ ಹರಿದಿತ್ತು. ಆ ಘಟನೆ ಮಾಸುವ ಮುನ್ನವೇ ಬುಧವಾರ ತಡರಾತ್ರಿ 12ಕ್ಕೆ ಪಟ್ಟಣದ ಹೊರವಲಯದ ಟೆಂಗುಂಟಿ ರಸ್ತೆಯ ಗುರಪ್ಪ ಕೋತ್ನಿ ಅವರ ಜಮೀನಿನಲ್ಲಿ ವಾಲ್ವ್ ಒಡೆದಿದ್ದು, ಸುಮಾರು 10 ಅಡಿವರೆಗೂ ನೀರು ಚಿಮ್ಮಿ, ಅಪಾರ ಪ್ರಮಾಣ ನೀರು ಪೋಲಾಗಿದೆ. ರೈತರಿಗೆ ವಾಲ್ವ್ ಒಡೆದಿರುವ ಕುರಿತು ಜಿಂದಾಲ್ ಪೈಪ್‌ಲೈನ್ ಉಸ್ತುವಾರಿ ಸಿಬ್ಬಂದಿ ಗಮನಕ್ಕೆ ತಂದರು.
ಪದೇ ಪದೇ ಜಿಂದಾಲ್ ಕೊಳವೆಮಾರ್ಗದಲ್ಲಿ ವಾಲ್ವ್ ಒಡೆದು ಬೆಳೆ ಸಮೇತ ಫಲವತ್ತಾದ ಮಣ್ಣು ಕೊಚ್ಚಿಹೋಗುತ್ತಿದೆ. ಮೊದಲೇ ಬರದ ಪರಿಸ್ಥಿತಿಯಲ್ಲಿ ಈ ರೀತಿಯಾಗುತ್ತಿದ್ದು, ಜಿಂದಾಲ್ ಕಂಪನಿಯವರು ಅಲ್ಪ ಪರಿಹಾರ ಬೇಕಿಲ್ಲ, ಜಿಂದಾಲ್ ಕಂಪನಿ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲ. ಈ ವಾಲ್ವ್ ಒಡೆದು ನೀರು ಪೋಲಾಗುವಾಗ ರೈತರ ಬಗ್ಗೆ ಸಹಾನೂಭೂತಿ ವ್ಯಕ್ತಪಡಿಸುತ್ತಿದ್ದು, ನೀರು ನಿಲ್ಲಿಸಿದ ಮೇಲೆ ರೈತರನ್ನು ಕಣ್ಣೆತ್ತಿಯೂ ನೋಡುವುದಿಲ್ಲ. • ಗುರಪ್ಪ ಕೋತ್ನಿ, ಅಮರೇಶ ಕಲಕಬಂಡಿ, ಚನ್ನಪ್ಪ ನಾಲಗಾರ ರೈತರು