ಬೆಂಗಳೂರು: ಟ್ರಿನಿಟಿ ವೃತ್ತದ “ನಮ್ಮ ಮೆಟ್ರೋ’ ನಿಲ್ದಾಣದಲ್ಲಿನ ಬಿರುಕು ಮುಚ್ಚುವಷ್ಟರಲ್ಲಿ ಜಯನಗರದ ಮೆಟ್ರೋ ಮಾರ್ಗದಲ್ಲಿ ಮತ್ತೂಂದು ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಶುಕ್ರವಾರ ಆತಂಕಕ್ಕೆ ಕಾರಣವಾಯಿತು.
ಜಯನಗರದ ಸೌತ್ ಎಂಡ್ ವೃತ್ತದ ಬಳಿ ಇರುವ ಮೆಟ್ರೋ ಪಿಲ್ಲರ್ ಸಂಖ್ಯೆ 66 ಮತ್ತು 67ರಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ವದಂತಿ ಕೇಳಿಬಂದಿತು. ಇದಕ್ಕೆ ಪೂರಕವಾಗಿ ಸ್ಥಳಕ್ಕೆ ಮೆಟ್ರೋ ಸಿಬ್ಬಂದಿ ಕೂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತು ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು. ಇದರಿಂದ ಜನ ಆತಂಕಕ್ಕೆ ಒಳಗಾದರು.
ಬಿರುಕು ಅಲ್ಲ; ಜೋಡಣೆ – ಸ್ಪಷ್ಟನೆ: ಆದರೆ, 66 ಮತ್ತು 67ನೇ ಪಿಲ್ಲರ್‌ನಲ್ಲಿ ಯಾವುದೇ ರೀತಿಯ ಬಿರುಕು ಕಾಣಿಸಿಕೊಂಡಿಲ್ಲ. “ಬೇರಿಂಗ್ ಪೆಡೆಸ್ಟಲ್’ (ಬೇರಿಂಗ್ ಪೀಠ) ಅನ್ನು ಎರಡು ಸ್ತರಗಳಲ್ಲಿ ನಿರ್ಮಿಸಲಾಗಿದೆ. ಒಂದು ಬೇರಿಂಗ್ ಪೆಡೆಸ್ಟಲ್ ಜೋಡಿಸಿರುವುದು ಪಿಲ್ಲರ್ ಮೇಲೆ ಕಾಣಿಸುತ್ತಿದೆ. ಹಾಗಾಗಿ, ಅದು ಜೋಡಣೆಯಾದ ಜಾಗವೇ ಹೊರತು, ಬಿರುಕಲ್ಲ.
ಈ ರೀತಿಯ ಜೋಡಣೆಗಳು ಸರ್ವೇಸಾಮಾನ್ಯವಾಗಿ ಕಂಡುಬರುತ್ತವೆ. ಅದಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ಮೆಟ್ರೋ ಸುರಕ್ಷಿತವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಸ್ಪಷ್ಟಪಡಿಸಿದೆ. ಎಂದಿನಂತೆ ನಡೆಯುವ ಪರಿಶೀಲನೆ ವೇಳೆ ಇದು ಬಿಎಂಆರ್‌ಸಿ ಎಂಜಿನಿಯರ್‌ಗಳ ಕಣ್ಣಿಗೆ ಬಿದ್ದಿದ್ದು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅದನ್ನು ಸರಿಪಡಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ 67ನೇ ಪಿಲ್ಲರ್‌ನ ಬೇರಿಂಗ್ ಪೆಡೆಸ್ಟಲ್ ಅನ್ನು ಗುರುವಾರ ರಾತ್ರಿಯೇ ಸರಿಪಡಿಸಲಾಗಿದೆ. 66ನೇ ಪಿಲ್ಲರ್‌ನಲ್ಲಿ ಕಂಡುಬಂದ ಬೇರಿಂಗ್ ಪೆಡೆಸ್ಟಲ್ ಜೋಡಣೆಯಲ್ಲಿ ಶುಕ್ರವಾರ ರಾತ್ರಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.