Advertisement

ಜಿಲ್ಲೆಗೂ ತಟ್ಟಿತು ಪೆಟ್ರೋಲ್‌-ಡೀಸೆಲ್‌ ಶಾಕ್‌

12:43 AM Jan 12, 2020 | mahesh |

ಉಡುಪಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯ ಏರುಪೇರು ಹಾಗೂ ದೇಶದಲ್ಲಿ ಕುಂಠಿತಗೊಂಡಿರುವ ವ್ಯಾಪಾರ ವಹಿವಾಟುಗಳ ಪರಿಣಾಮ ಡೀಸೆಲ್‌, ಪೆಟ್ರೋಲ್‌ ಬೆಲೆಗಳ ಮೇಲಾಗುತ್ತಿದ್ದು ಜಿಲ್ಲೆಗೂ ಬಿಸಿ ತಟ್ಟಿದೆ.

Advertisement

ಜಿಲ್ಲೆಯಲ್ಲಿ ಅಕ್ಟೋಬರ್‌ ಅಂತ್ಯಕ್ಕೆ 75.14ರಷ್ಟಿದ್ದ ಪೆಟ್ರೋಲ್‌ ದರ ಡಿಸೆಂಬರ್‌ ಅಂತ್ಯಕ್ಕೆ 77.68ಕ್ಕೆ ತಲುಪಿದೆ. ಈ ಮೂಲಕ ಕಳೆದ ಮೂರು ತಿಂಗಳ ಅವಧಿಯಲ್ಲಿ 2.54 ರೂ.ಗಳಷ್ಟು ದರ ಹೆಚ್ಚಳವಾಗಿದೆ. ಡೀಸೆಲ್‌ ದರವೂ ಅಕ್ಟೋಬರ್‌ ಅಂತ್ಯಕ್ಕೆ 67.81 ರಷ್ಟಿತ್ತು. ಡಿಸೆಂಬರ್‌ ಅಂತ್ಯಕ್ಕೆ 69.81ಕ್ಕೆ ತಲುಪಿದೆ. ಅಂದರೆ ಮೂರು ತಿಂಗಳ ಅವಧಿಯಲ್ಲಿ ಹೆಚ್ಚಳವಾದ ದರ 2 ರೂ.ಗಳು.

ಡೀಸೆಲ್‌ಗೆ ಕುಸಿದ ಬೇಡಿಕೆ
ಸಾಮಾನ್ಯವಾಗಿ ದಿನನಿತ್ಯ ಬಳಕೆ ಮಾಡುವ ಪೆಟ್ರೋಲ್‌, ಡೀಸೆಲ್‌ಗ‌ಳ ದರದಲ್ಲಿ ಅದೆಷ್ಟೇ ಏರಿಕೆ ಕಂಡರೂ ಅದರ ಉಪಯೋಗ ಅನಿವಾರ್ಯವಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ವ್ಯಾಪಾರ, ಮೀನುಗಾರಿಗೆ, ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತಿರುವುದರಿಂದ ಭಾರೀ ಗಾತ್ರದ ಡೀಸೆಲ್‌ ವಾಹನಗಳಿಗೆ ಕೆಲಸವಿಲ್ಲದೆ ನಿಲುಗಡೆಗೊಳಿಸುವ ಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳ ಯಂತ್ರೋಪಕರಣಗಳು ಮತ್ತು ವಾಹನಗಳಲ್ಲಿ ಡೀಸೆಲ್‌ ಬಳಕೆ ಅಧಿಕ ಪ್ರಮಾಣದಲ್ಲಿದೆ. ಆರ್ಥಿಕ ಹಿಂಜರಿತದಿಂದ ನಿರ್ಮಾಣ ವಲಯದಲ್ಲೂ ಕಾಮಗಾರಿ ವಿರಳವಾಗಿರುವುದರಿಂದ ಡೀಸೆಲ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ.

ಪೂರೈಕೆ ಪ್ರಮಾಣವೂ ಇಳಿಮುಖ
ಪೆಟ್ರೋಲ್‌ ಹಾಗೂ ಡೀಸೆಲ್‌ ಬಳಕೆ ಇಳಿಮುಖವಾದ ಕಾರಣ ಜಿಲ್ಲೆಗೆ ಪೂರೈಕೆಯೂ ಕಡಿಮೆಯಾಗುತ್ತಿದೆ. ಅಕ್ಟೋಬರ್‌ ತಿಂಗಳಲ್ಲಿ ಜಿಲ್ಲೆಗೆ ವಿವಿಧ ತೈಲ ಕಂಪೆನಿಗಳ ಮೂಲಕ 6,550 ಕಿಲೋ ಲೀ. ಪೆಟ್ರೋಲ್‌ ಪೂರೈಕೆಯಾಗುತ್ತಿತ್ತು. ನವೆಂಬರ್‌ನಲ್ಲಿ ಈ ಪ್ರಮಾಣ 5,980ಕ್ಕೆ ಇಳಿದರೆ ಡಿಸೆಂಬರ್‌ ವೇಳೆಗೆ 5,500 ಕ್ಕೆ ಇಳಿದಿದೆ. ಇನ್ನು ಡೀಸೆಲ್‌ ಕಥೆಯೂ ಇದೇ ರೀತಿಯಾಗಿದೆ. ಪೂರೈಕೆ ಪ್ರಮಾಣ ಅಕ್ಟೋಬರ್‌ನಲ್ಲಿ 23,510 ಕಿಲೋ ಲೀ.ರಷ್ಟಿತ್ತು. ನವೆಂಬರ್‌ನಲ್ಲಿ 18,100ಕ್ಕೆ ಇಳಿದರೆ ಡಿಸೆಂಬರ್‌ ವೇಳೆಗೆ 17,500ಕ್ಕೆ ಇಳಿದಿದೆ.

ಬೇಡಿಕೆ ಬಂದರಷ್ಟೇ ಪೂರೈಕೆ
ಇಂಧನಕ್ಕೆ ಜಿಲ್ಲೆಗಳಿಂದ ಬರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತದೆ. ಈ ಹಿಂದೆ ಒಂದೆರಡು ಬಾರಿ ಪೂರೈಕೆ ಯಲ್ಲೂ ವ್ಯತ್ಯಯವುಂಟಾಗಿ ಜಿಲ್ಲೆಯ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಕೊರತೆ ಉಂಟಾಗಿತ್ತು. ಆದರೆ ಈಗ ಬೇಡಿಕೆ ಪ್ರಮಾಣವೇ ಕಡಿಮೆಯಾಗಿದೆ. ಪ್ರತೀ ಜಿಲ್ಲೆಯಲ್ಲೂ ಇಂಧನಕ್ಕೆ ಬೇಡಿಕೆ ಕಡಿಮೆಯಾಗುತ್ತಾ ಬಂದರೆ ದೇಶದ ಒಟ್ಟು ಆರ್ಥಿಕ ವ್ಯವಸ್ಥೆಯ ಮೇಲೆ ಇದು ನೇರ ಪರಿಣಾಮ ಬೀರಲಿದೆ ಎನ್ನುತ್ತಾರೆ ತೈಲ ಪೂರೈಕೆ ಕಂಪೆನಿಯ ಸಿಬಂದಿ.

Advertisement

ಇಂಧನ ಬೇಡಿಕೆ ಕುಸಿತ
ಜಿಲ್ಲೆಯ ಅಭಿವೃದ್ಧಿಯಲ್ಲಿ ಸಾರಿಗೆ, ಮೀನುಗಾರಿಕೆಗೆ ಬಹಳ ಪ್ರಾಮುಖ್ಯತೆಯಿದೆ. ಒಟ್ಟು ಆರ್ಥಿಕ ವ್ಯವಸ್ಥೆ ಇವೆರಡರ ಮೇಲೆ ನಿಂತಿದೆ. ಇಂಧನ ದರದಲ್ಲಿ ಏರುಪೇರು ಹಾಗೂ ಜನರಲ್ಲಿ ಹಣಕಾಸು ಇರದಿರುವುದು ಒಟ್ಟು ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ಸಂಖ್ಯೆಯ ಘನ ವಾಹನಗಳು ಕೆಲಸವಿಲ್ಲದೆ ದಿನಕಳೆಯುತ್ತಿವೆ. ಪೈಸೆಯ ಲೆಕ್ಕದಲ್ಲಿ ಏರುಪೇರಾಗುವ ಇಂಧನ ದರ ತಿಂಗಳಾಂತ್ಯದ ವೇಳೆಗೆ ರೂ.ಗಳಲ್ಲಿರುತ್ತದೆ. ಬೇಡಿಕೆ ಕಡಿಮೆಯಾದ ಕಾರಣ ಜಿಲ್ಲೆಗೆ ಇಂಧನ ಪೂರೈಕೆಯೂ ಕಡಿಮೆಯಾಗುತ್ತಿದೆ.

ಜಿಲ್ಲೆಗೆ ತೈಲ ಪೂರೈಸುವ ಪ್ರಮುಖ 5 ಕಂಪೆನಿಗಳು
ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ, ಎಚ್‌ಪಿಸಿಎಲ್‌, ರಿಲಯನ್ಸ್‌, ಇಎಸ್‌ಎಸ್‌ಎಆರ್‌.

ವ್ಯಾಪಾರ ಕುಂಠಿತ ಕಾರಣ
ದೇಶಾದ್ಯಂತ ವ್ಯಾಪಾರ ವಹಿವಾಟು ಕುಂಠಿತವಾಗಿದೆ. ಈ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲೂ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಪ್ರಮಾಣದಲ್ಲಿ ಶೇ.25ರಷ್ಟು ವ್ಯತ್ಯಯವುಂಟಾಗಿದೆ. ಮುಖ್ಯವಾಗಿ ಮೀನುಗಾರಿಗೆ, ಸಿವಿಲ್‌ ಕ್ಷೇತ್ರಗಳಲ್ಲಿ ಕೆಲಸಕಾರ್ಯಗಳು ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಇಂಧನ ಬಳಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ.
-ಪ್ರಭಾಕರ ಶೆಟ್ಟಿ, ಅಧ್ಯಕ್ಷರು, ಕರಾವಳಿ ಪೆಟ್ರೋಲಿಯಂ ಡೀಲರ್ ಅಸೋಸಿಯೇಶನ್‌

ಉದ್ಯಮ ಕ್ಷೇತ್ರದಲ್ಲಿ ಕುಂಠಿತ
ಡೀಸೆಲ್‌ ದರ ಪ್ರತಿ ನಿತ್ಯ ಪೈಸೆಯ ಲೆಕ್ಕದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಬಸ್ಸು ಮಾಲಕರು ಕೂಡ ಅತ್ತ ದರ ಏರಿಕೆ ಮಾಡಲಾಗದ ಸ್ಥಿತಿಯಲ್ಲಿದಾರೆ. ಒಂದೇ ಬಾರಿ ದರ ಏರಿಕೆಯಾದರೆ ಸುಲಭದಲ್ಲಿ ಬಸ್ಸು ದರ ಏರಿಕೆ ಮಾಡಬಹುದು. ಗುತ್ತಿಗೆದಾರರಿಗೆ ನೀಡುವ ವಿಳಂಬ ವೇತನ ಸಹಿತ ಹಲವಾರು ಕಾರಣಗಳಿಂದಾಗಿ ಸಾರಿಗೆ ಉದ್ಯಮ ನಿಧಾನಗತಿಯಲ್ಲಿದೆ.
-ಕೃಷ್ಣ ಬಿಲ್ಲವ, ಸಾರಿಗೆ ಉದ್ಯಮಿ

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next