Advertisement

ಚಾನಲ್‌ಗೆ ವ್ಯಕ್ತಿ ಮುಖ್ಯ; ಕಾನ್ಸೆಪ್ಟ್ ಅಲ್ಲ

01:42 PM Apr 05, 2018 | Sharanya Alva |

1) ರವಿಕಿರಣ್‌ ಯಾಕೆ ಮುಂಚಿನಂತೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸುತ್ತಿಲ್ಲ?
2) ರವಿಕಿರಣ್‌ ಯಾಕೆ ಇತ್ತೀಚೆಗೆ ಯಾವುದೇ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿಲ್ಲ?
3) ಕಿರುತೆರೆಯಲ್ಲಿ ಅಷ್ಟೊಂದು ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ರವಿಕಿರಣ್‌, ಚಿತ್ರ ನಿರ್ದೇಶಿಸುವ ಮನಸ್ಸೇಕೆ ಮಾಡಿಲ್ಲ?
ಈ ಮೂರು ಪ್ರಶ್ನೆಗಳು ಬರುವುದು ಸಹಜ. ಏಕೆಂದರೆ, ಒಂದು ಕಾಲದಲ್ಲಿ ಕಿರುತೆರೆಯ ದೊಡ್ಡ ಹೆಸರಾದ ರವಿಕಿರಣ್‌ ಇತ್ತೀಚೆಗೆ ಅಷ್ಟಾಗಿ ತೆರೆಯ ಮೇಲೂ ಕಾಣಿಸುತ್ತಿಲ್ಲ. ಇನ್ನು ನಿರ್ಮಾಣ-ನಿರ್ದೇಶನದ ಸುದ್ದಿಯೂ ಇಲ್ಲ. ಅಪರೂಪಕ್ಕೆಂಬಂತೆ “ಮದುವೆ ದಿಬ್ಬಣ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಆ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಸಿಕ್ಕ ಸಂದರ್ಭದಲ್ಲಿ, ಅವರೆದುರು ಈ ಮೂರು ಪ್ರಶ್ನೆಗಳನ್ನು ಇಡಲಾಯಿತು. ಈ ಪ್ರಶ್ನೆಗಳಿಗೆ ಅವರೇನಂತಾರೆ ಗೊತ್ತಾ? ಮೂರು ಪ್ರಶ್ನೆಗಳಿಗೆ ಮೂರು ಉತ್ತರಗಳು ಇಲ್ಲಿವೆ.

Advertisement

1) ಕಳೆದ ಎರಡು ವರ್ಷಗಳಲ್ಲಿ ಎಲ್ಲಾ ಚಾನಲ್‌ಗ‌ಳಿಗೂ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ಎಲ್ಲರೂ ಕಾನ್ಸೆಪ್ಟ್ ಕೇಳುತ್ತಾರೆ. ನಿಜ ಹೇಳಬೇಕೆಂದರೆ, ಇಲ್ಲಿ ಕಾನ್ಸೆಪ್ಟ್ ಮುಖ್ಯ ಅಲ್ಲ. ನಿಮಗೆ ಕೊಡಬೇಕು ಅಂದರೆ ಕೊಟ್ಟೇ ಕೊಡುತ್ತಾರೆ. ಇಲ್ಲವಾದರೆ, 50 ಕಾನ್ಸೆಪ್ಟ್ ಕೊಟ್ಟರೂ ಓಕೆ ಆಗುವುದಿಲ್ಲ. ನಮ್ಮ ಕೇಸ್‌ನಲ್ಲಿ ಆಗುತ್ತಿರುವುದೂ ಅದೇ. ಕೆಲವರಿಗೆ ಮೂರ್ಮೂರು ಧಾರಾವಾಹಿಗಳನ್ನು ಮಾಡೋಕೆ ಅವಕಾಶ ಸಿಗುತ್ತದೆ. ಆದರೆ, ನಮಗೆ ಸಿಗುವುದಿಲ್ಲ. ಯಾಕೆ ಅಂತ ನನಗೆ ಗೊತ್ತಿಲ್ಲ.

 ನನ್ನ “ಶಕ್ತಿ’ ಧಾರಾವಾಹಿಯ 545 ಎಪಿಸೋಡುಗಳು ಪ್ರಸಾರವಾಗಿದ್ದವು. “ಬದುಕು’ ಧಾರಾವಾಹಿ 13 ವರ್ಷ ಪ್ರಸಾರವಾಗಿತ್ತು. ಇಷ್ಟೆಲ್ಲಾ ಆದರೂ ನಮಗೆ ನಿರ್ದೇಶನ ಮಾಡೋಕೆ ಅವಕಾಶ ಇಲ್ಲ. 50 ಎಪಿಸೋಡುಗಳು ಪ್ರಸಾರ ಮಾಡಿ, ಚೆನ್ನಾಗಿಲ್ಲ ಎಂದರೆ ದುಡ್ಡು ಕೊಡಬೇಡಿ ಅಂತಲೂ ಹೇಳಿದ್ದೇನೆ. ಸೋತರೆ ಸಂಪೂರ್ಣ ನಷ್ಟ ನನಗೇ ಇರಲಿ, ಗೆದ್ದರೆ ದುಡ್ಡು ಕೊಡಿ ಅಂತ ಸ್ಪಷ್ಟಪಡಿಸಿದ್ದೇನೆ. ಆದರೂ ಯಾಕೋ ಯಾರೂ ಅವಕಾಶ ಕೊಡುವ ಮನಸ್ಸು ಮಾಡುತ್ತಿಲ್ಲ.

2) ಇದು ನನ್ನೊಬ್ಬನ ಕಥೆಯಲ್ಲಿ. ಕಿರುತೆರೆಯ ಸಾಕಷ್ಟು ಕಲಾವಿದರ ಸಮಸ್ಯೆ ಇದು. ಇವತ್ತು ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ವಿಚಿತ್ರ ಎಂದರೆ ಅವರ್ಯಾರಿಗೂ ಸರಿಯಾದ ಕೆಲಸ ಇಲ್ಲ. ಇವತ್ತು ಒಂದು ಧಾರಾವಾಹಿ ಮಾಡಿದರೆ, ಅವರು ಫಿನಿಶ್‌ ಎನ್ನುವಂತಾಗಿದೆ. ಏಕೆಂದರೆ, ಪ್ರತಿ ಧಾರಾವಾಹಿಯಲ್ಲೂ ಹೊಸಬರು ಬರುತ್ತಲೇ ಇದ್ದಾರೆ. ಒಮ್ಮೆ ಒಬ್ಬರು ಒಂದು ಧಾರಾವಾಹಿಯಲ್ಲಿ ನಟಿಸಿದರೆ, ಪುನಃ ಅವರಿಗೆ ಕೆಲಸ ಸಿಗುವುದು ಕಷ್ಟ. ಇವತ್ತು ಅದೆಷ್ಟು ಹಿರಿಯ ಕಲಾವಿದರು ಸುಮ್ಮನೆ ಕೂತಿದ್ದಾರೆ ಗೊತ್ತಾ? 

ಏನಿಲ್ಲವೆಂದರೂ, 500 ಪೋಷಕ ಕಲಾವಿದರು ಸಿಗುತ್ತಾರೆ. ಅವರೆಲ್ಲರಿಗೂ ಕೆಲಸ ಕೊಡಬಹುದು ಮತ್ತು ಎಲ್ಲರಿಗೂ ಕೆಲಸ ಇದೆ. ಏಕೆಂದರೆ, ಒಂದು ಮನೆಯ ಕಥೆ ಎಂದರೆ ಅಲ್ಲಿ ಅಜ್ಜ, ಅಜ್ಜಿ, ದೊಡ್ಡಪ್ಪ, ಚಿಕ್ಕಪ್ಪ ಅಂತ ಎಲ್ಲರೂ ಇರುತ್ತಾರೆ. ಬರೀ ನಾಯಕ-ನಾಯಕಿಯನ್ನೇ ಎಷ್ಟು ಅಂತ ತೋರಿಸೋಕೆ ಆಗುತ್ತೆ? ಸೀನಿಯರ್‌ಗಳಿಗೂ ಕೆಲಸ ಕೊಡಿ. ಇವತ್ತು ಒಂದು ದಿನಕ್ಕೆ ಎಲ್ಲಾ ಚಾನಲ್‌ಗ‌ಳಿಂದ 60 ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಒಂದು ಧಾರಾವಾಹಿಯಲ್ಲಿ ಇಬ್ಬರು ಅಂತಿಟ್ಟುಕೊಂಡರೂ, 120 ನರಿಗೆ ಕೆಲಸ ಸಿಕ್ಕಂತಾಗುತ್ತದೆ. ಆದರೆ, ಕೆಲಸ ಕೊಡುವ ಮನಸ್ಸು ಮಾಡುತ್ತಿಲ್ಲ. ಇದರಿಂದ ಬಹಳಷ್ಟು ಕಲಾವಿದರಿಗೆ ಸಮಸ್ಯೆಯಾಗುತ್ತಿದೆ. ಹಣಕಾಸಿನ ಸಮಸ್ಯೆ ಎಷ್ಟೋ ಜನರನ್ನು ಕಾಡುತ್ತಿದೆ
.
3) ಕಳೆದ 10 ವರ್ಷಗಳಿಂದ ಸಿನಿಮಾ ಮಾಡಬೇಕು ಅಂತ ನನಗೂ ಆಸೆ ಇದೆ. ಸಿನಿಮಾ ಮಾಡಿ ಫ‌ಸ್ಟ್‌ ಕಾಪಿ ತರಬಹುದು. ಆಮೇಲೇನು ಅಂತ ನೆನಪಿಸಿಕೊಂಡರೆ ಭಯ ಆಗುತ್ತದೆ. ಮುಂಚೆ ಮಿನಿಮಮ್‌ ಗ್ಯಾರಂಟಿ ಅಂತ ಇತ್ತು. ಈಗ ಎಲ್ಲವೂ ಬದಲಾಗಿದೆ. ಸಿಕ್ಕಾಪಟ್ಟೆ ಚಿತ್ರಗಳು ಬರುತ್ತಿವೆ. ಅವು ಬಿಡುಗಡೆಯಾಗುವುದೇ ಗೊತ್ತಾಗುತ್ತಿಲ್ಲ. “ಮದುವೆ ದಿಬ್ಬಣ’ ಚಿತ್ರದ ಶೂಟಿಂಗ್‌ಗೆ ಮಳವಳ್ಳಿಗೆ ಹೋದಾಗ, ಅಲ್ಲಿ ಐದಾರು ತಂಡದವರು ಚಿತ್ರಗಳನ್ನು ಮಾಡುತ್ತಿದ್ದರು. ಎಲ್ಲರೂ ಹೊಸಬರೇ. 

Advertisement

5ಡಿ ಕ್ಯಾಮೆರಾಗಳನ್ನಿಟ್ಟುಕೊಂಡು ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡುತ್ತಿದ್ದರು. ಒಂದು ಕಾಲದಲ್ಲಿ ಸಿನಿಮಾ ಅಂದರೆ “ಲಾರ್ಜರ್‌ ದ್ಯಾನ್‌ ಲೈಫ್’ ಅಂತ ಇತ್ತು. ಈಗ ಹಾಗೇನಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಇತ್ತೀಚೆಗೆ ಯಾರು ದೊಡ್ಡ ದುಡ್ಡು ಮಾಡಿದ್ದಾರೆ ಹೇಳಿ? ಯಾರೂ ಇಲ್ಲ. ಸಿನಿಮಾ ಮಾಡಿಬಿಡಬಹುದು. ಸ್ನೇಹಿತರೊಂದಿಷ್ಟು ಜನ ಸೇರಿಕೊಂಡು, ಒಬ್ಬೊಬ್ಬರು 10 ಲಕ್ಷ ಅಂತ ಹಾಕಿದರೂ ಸಿನಿಮಾ ಆಗೋದು ಕಷ್ಟ ಅಲ್ಲ. ನನ್ನ ಸ್ನೇಹಿತರೇ ಹೇಳುತ್ತಾರೆ. ಅವರು ಕೊಡುವ ಹಣ ಸರಿಯಾಗಿ ಬಳಕೆಯಾಗಬೇಕು. ಹಾಕಿ ಏನೂ ಬರಲಿಲ್ಲ ಎಂದರೆ ಹೇಗೆ? ಅದೇ ಕಾರಣಕ್ಕೆ ಬೇಡ ಅಂತ ಸುಮ್ಮನೆ ಉಳಿದುಬಿಟ್ಟಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next