Advertisement

ವ್ಯಕ್ತಿ ಚಿತ್ರದಂಥ ಬರವಣಿಗೆಯಲ್ಲಿ ವೈಭವೀಕರಣ ಸಲ್ಲದು: ಗಂಗಾಧರ ಹಿರೇಗುತ್ತಿ

03:10 PM Nov 15, 2021 | Team Udayavani |

ಶಿರಸಿ: ವ್ಯಕ್ತಿ ಚಿತ್ರದಂಥ ಬರವಣಿಗೆಯಲ್ಲಿ ವೈಭವೀಕರಣ ಸಲ್ಲದು ಎಂದು ಕರಾವಳಿ ಮುಂಜಾವು ದೈನಿಕ ಪ್ರಧಾನ ಸಂಪಾದಕ ಗಂಗಾಧರ ಹಿರೇಗುತ್ತಿ ಹೇಳಿದರು.

Advertisement

ಬಂಡಾಯ ಪ್ರಕಾಶನದ ಸಾರಥ್ಯ ವಹಿಸಿದ್ದ ಡಾ.ವಿಠ್ಠಲ ಭಂಡಾರಿ ಸ್ಮರಣಾರ್ಥ ಉಪನ್ಯಾಸಕ ಉಮೇಶ ನಾಯ್ಕ ರಚಿಸಿರುವ ಕತ್ತಲ ಧ್ಯಾನಿಸಿದ ನಂತರ ಹಾಗೂ ನಾಲ್ಕೇ ಕ್ಲಾಸು ಓದಿದವನು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸತ್ಯ ವಿಚಾರ ಮರೆಮಾಚುವ ಕಾರ್ಯ ಆಗಬಾರದು. ಅನುಭವಗಳನ್ನು ಇದ್ದಂತೆ ಬರೆದರೆ ಅದು ಬದಲಾವಣೆಗೆ ನಾಂದಿಯಾಗುತ್ತದೆ ಎಂದು ಪ್ರತಿಪಾದಿಸಿದರು.

ವ್ಯಕ್ತಿ ಸಂಪ್ರದಾಯದ ಭಯದಿಂದ ದೂರ ಉಳಿದು ಕಟ್ಟಳೆಗಳಿಂದ ಕಳಚುವಂತೆ ಸಾಹಿತ್ಯ ಕೂಡ ಆ ಭಯದಿಂದ ದೂರ ಇದ್ದು ರಚನೆಯಾಗಬೇಕು. ಇಂದು ಸಾಹಿತ್ಯ ಸಾಯುತ್ತಿದೆ. ಅದನ್ನು ಯುವ ಪೀಳಿಗೆ ಉಳಿಸುವ ಅಗತ್ಯವಿದೆ. ಪುಸ್ತಕಗಳ ಓದು ಹೆಚ್ಚಬೇಕಿದೆ. ಸಂಪ್ರದಾಯದ ಭಯದಿಂದ ಹೊರಗಿದ್ದು ಪುಸ್ತಕ ರಚಿಸುವ ಕಾರ್ಯ ಹೆಚ್ಚಬೇಕು ಎಂದೂ ಸಲಹೆ ಮಾಡಿದ ಅವರು, ಉಮೇಶ ನಾಯ್ಕ ತಮ್ಮ ಬರಹದ ಮೂಲಕ ಪ್ರಾಮಾಣಿಕ ಕಾರ್ಯ ಮಾಡಿದ್ದಾರೆ ಎಂದರು.

ಮನುಷ್ಯನ ಚೈತನ್ಯಗಳು ಯಾವುದೇ ಮಡಿವಂತಿಕೆ ಮೇಲೆ ನಿಂತಿಲ್ಲ ಆದರೆ ಇತರರ ಅನ್ನ ಕಸಿಯುವ ಕಾರ್ಯ ಯಾರಿಂದಲೂ ಆಗಬಾರದು ಎಂಬ ಆರ್.ವಿ.ಭಂಡಾರಿ, ವಿಠ್ಠಲ ಭಂಡಾರಿಯವರ ಆಶಯವನ್ನು ಅಭಿಯಾನದ ಮಾದರಿಯಲ್ಲಿ  ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ಸಲಹೆ ಮಾಡಿದರು.

ಇದನ್ನೂ ಓದಿ:ವಿದ್ಯುತ್‌ ಉಪಕೇಂದ್ರ ಕಾಮಗಾರಿ ಶೀಘ್ರ ಪ್ರಾರಂಭ: ಶಾಸಕ ರಾಜೇಗೌಡ

Advertisement

ರಂಗಕರ್ಮಿ ಶ್ರೀಪಾದ ಭಟ್ಟ, ಸಮಾಜದ ಕುರಿತು ವಿಶೇಷ ಪ್ರೀತಿ ಇರದೇ ಇದ್ದರೆ ಕತ್ತಲನ್ನು ಧ್ಯಾನಿಸಲಾಗದು. ಕಾವ್ಯದ ಬದುಕು ಜೀವಾಶ್ರು ಹಾಗೂ ಜೀವ ಕರುಣೆ ಮಿಡಿಯುವ ಕಾಯಕವಾಗಿದೆ ಎಂದರು. ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ, ಉಮೇಶರ ಕೃತಿಯಲ್ಲಿ ಜಾತ್ಯಾತೀತ ಗುಣ ಹಿಡಿಸಿದೆ ಎಂದರು.

ಹಿರಿಯ ಸಾಹಿತಿ ವಿಷ್ಣು ನಾಯ್ಕ ಅಧ್ಯಕ್ಷತೆವಹಿಸಿ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ನಂಬಿಕೆ ಇದೆ ಎಂದರು. ಕೃತಿಕಾರ ಉಮೇಶ ನಾಯ್ಕ ಇದ್ದರು. ಬಂಡಾಯ ಪ್ರಕಾಶನದ ಯಮುನಾ ಗಾಂವಕರ ಪ್ರಾಸ್ತಾವಿಕ ಮಾತನಾಡಿದರು. ಪ್ರಥಮ ನಾಯ್ಕ ಪ್ರಾರ್ಥಿಸಿದರು. ಬರಹಗಾರ ವೀರಲಿಂಗನ ಗೌಡರ ಸ್ವಾಗತಿಸಿದರು. ಸುಮತಿ ನಾಯ್ಕ ನಿರೂಪಿಸಿದರು. ಭಾರತಿ ನಾಯ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next