ಉಡುಪಿ: ದೇಶದಾದ್ಯಂತ ಬೆಳೆಯುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ ಇಂದು ಬದುಕಿಗೆ ಅನಿವಾರ್ಯ. ಆರೋಗ್ಯವಂತ ಬದುಕಿಗೆ ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತವಿರ ಬೇಕಾದಂತೆ ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಅಷ್ಟೇ ಮುಖ್ಯ ಎಂದು ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಾಣಿಜ್ಯ ವಿಭಾಗವು ಮಂಗಳೂರು ವಿ.ವಿ. ವಾಣಿಜ್ಯ ಉಪನ್ಯಾಸಕರ ಸಂಘದ ಸಹಯೋಗದಲ್ಲಿ “ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಆವಿಷ್ಕಾರಗಳು’ ವಿಚಾರದ ಮೇಲೆ ಆಯೋಜಿಸಿದ ರಾಷ್ಟ್ರ ಮಟ್ಟದ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಶಾಸ್ತ್ರದಲ್ಲಿಯೂ ಹೂಡಿಕೆಯ ವಿಚಾರವಿದೆ. ಅಲ್ಲಿ ಹೂಡಿಕೆ ಪ್ರಮಾಣಕ್ಕಿಂತ ಸಾಧನೆಗೆ ಪ್ರಾಮುಖ್ಯ. ಆದರೆ ಲೌಕಿಕದಲ್ಲಿ ಕಡಿಮೆ ಹೂಡಿಕೆಯೊಂದಿಗೆ ಅಧಿಕ ಲಾಭವನ್ನು ನಿರೀಕ್ಷಿಸುತ್ತೇವೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ| ಬಿ. ಜಗದೀಶ್ ಶೆಟ್ಟಿ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೂ, ಇತಿಹಾಸಕ್ಕೂ ಸಂಬಂಧವಿದೆ. ಇತಿಹಾಸದಲ್ಲಿ ಮಹಮ್ಮದ್ ಬಿನ್‌ತುಘಲಕ್ ನಾಣ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದವನು. ಆದರೆ ಅದಕ್ಕೆ ಜನರ ಸಹಕಾರ ಸಿಗಲಿಲ್ಲ. ಇಂದು ಡಿಜಿಟಲ್ ಬ್ಯಾಂಕಿಂಗ್ ಶರವೇಗದಲ್ಲಿ ವ್ಯಾಪಿಸುತ್ತಿದ್ದು, ಜನತೆ ಅದಕ್ಕೆ ಸ್ಪಂದಿಸಬೇಕೆಂದರು.
ಪ್ರಾಂಶುಪಾಲ ಡಾ| ಎ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪೂರ್ಣಪ್ರಜ್ಞ ಸಂಶೋಧನ ಮತ್ತು ಅಭಿವೃದ್ಧಿ ಕೇಂದ್ರದ ಸಂಶೋಧಕ ಡಾ| ಕೃಷ್ಣ ಕೊತಾಯ ದಿಕ್ಸೂಚಿ ಭಾಷಣ ಮಾಡಿದರು. ಕಾಲೇಜಿನ ಗೌರವ ಕಾರ್ಯದರ್ಶಿ ಡಾ| ಜಿ.ಎಸ್.ಚಂದ್ರಶೇಖರ್, ಮಂಗಳೂರು ವಿ.ವಿ. ವಾಣಿಜ್ಯ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪೊ›| ಲೂಯಿಸ್ ಮನೋಜ್, ಉಪನ್ಯಾಸಕಿ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವಕುಮಾರ್ ಸ್ವಾಗತಿಸಿ, ಜ್ಯೋತಿ ಆಚಾರ್ಯ ನಿರೂಪಿಸಿದರು. ಉಪನ್ಯಾಸಕ ಸಂದೀಪ್ ಶೆಟ್ಟಿ ವಂದಿಸಿದರು.