Advertisement

ಪರೀಕ್ಷೆಗಳ ಪ್ರಮಾಣ ದೇಶದಲ್ಲಿಲ್ಲ ಸಮಾನ!

12:17 PM Jun 01, 2020 | mahesh |

ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್‌-19 ಪರೀಕ್ಷೆಗಳನ್ನು ನಡೆಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು ಎನ್ನುವುದು ಉತ್ತಮ ಸಂಗತಿಯೇ ಆದರೂ, ಜನಸಂಖ್ಯೆಗೆ ಹೋಲಿಸಿದರೆ, ನಮ್ಮಲ್ಲಿನ ಪರೀಕ್ಷೆಗಳ ಪ್ರಮಾಣ ಇನ್ನೂ ಕಡಿಮೆಯೇ ಇದೆ ಎನ್ನುವುದು ಅರ್ಥವಾಗುತ್ತದೆ. ಎಲ್ಲಕ್ಕಿಂತ ಕಳವಳಕಾರಿ ಸಂಗತಿಯೆಂದರೆ, ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದರೂ, ಕೆಲವು ರಾಜ್ಯಗಳೀಗ ಪರೀಕ್ಷೆಗಳ ಪ್ರಮಾಣವನ್ನೇ ತಗ್ಗಿಸಿಬಿಟ್ಟಿರುವ ಆರೋಪ ಎದುರಾಗುತ್ತಿದೆ. ಇದರ ಪರಿಣಾಮವಾಗಿ, ಆ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ದಾಖಲಾಗಲಾರಂಭಿಸಿದೆಯಾದರೂ, ಹೀಗೆ ಮಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆಯೇ ಸರಿ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಆದರೆ, ಇನ್ನೊಂದೆಡೆ ಕರ್ನಾಟಕದಲ್ಲಿ ಮೇ 20ರಿಂದ ಕೊರೊನಾ ಸೋಂಕು ಪತ್ತೆ ಪರೀಕ್ಷೆಗಳಲ್ಲಿ ಅಭೂತಪೂರ್ವ ಏರಿಕೆ ಕಂಡಿರುವುದು ಗಮನಾರ್ಹ ಸಂಗತಿ…

Advertisement

ಟೆಸ್ಟಿಂಗ್‌ ಹೆಚ್ಚಿಸಿದ ರಾಜ್ಯಗಳು
ಬೆರಳೆಣಿಕೆಯ ರಾಜ್ಯಗಳು ಮಾತ್ರ ಮೇ ತಿಂಗಳ ಆರಂಭಕ್ಕೆ ಹೋಲಿಸಿದರೆ, ಮೇ ತಿಂಗಳ ಅಂತ್ಯದ ವೇಳೆಗೆ ಪರೀಕ್ಷೆಗಳ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಮಾಡಿವೆ. ಈ ಪಟ್ಟಿಯಲ್ಲಿ ಮುಖ್ಯವಾಗಿ ಕರ್ನಾಟಕ,  ಪ. ಬಂಗಾಲ ಹಾಗೂ ರಾಜಾಸ್ಥಾನ ಇದೆ. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಲ ಪರೀಕ್ಷೆಗಳ ಪ್ರಮಾಣವನ್ನೀಗ ದ್ವಿಗುಣಗೊಳಿಸಿವೆ ಎನ್ನುವುದು ಗಮನಾರ್ಹ. ಆರಂಭಿಕ ದಿನಗಳಲ್ಲಿ ಮಮತಾ ಸರಕಾರ ಕೊರೊನಾ ಗಂಭೀರತೆಯನ್ನು ಕಡೆಗಣಿಸಿತು ಎನಿಸಿದರೂ ಕೆಲ ದಿನಗಳಿಂದ ಅದು ಈ ವಿಷಯದಲ್ಲಿ ಎಚ್ಚೆತ್ತುಕೊಂಡು, ರೋಗ ನಿಯಂತ್ರಣಕ್ಕಾಗಿ ಉತ್ತಮ ಹೆಜ್ಜೆ ಇಡುತ್ತಿದೆ ಎನ್ನುತ್ತಿವೆ ವರದಿಗಳು.

ಪರೀಕ್ಷೆಗಳೇಕೆ ಕಡಿಮೆಯಾಗುತ್ತಿವೆ?
ಕೆಲವು ರಾಜ್ಯಗಳೀಗ ತಮ್ಮಲ್ಲಿ ಕೊರೊನಾ ಸಮಸ್ಯೆ ಅಧಿಕವಿದ್ದರೂ ನಿತ್ಯ ಪರೀಕ್ಷೆಗಳ ಸಂಖ್ಯೆಯನ್ನು ತಗ್ಗಿಸಿಬಿಟ್ಟಿವೆ ಎನ್ನುತ್ತಿವೆ ಅಧ್ಯಯನ ವರದಿಗಳು. ದಿಲ್ಲಿ ಮೇ ತಿಂಗಳ ಮೊದಲ ವಾರಕ್ಕೆ ಹೋಲಿಸಿದರೆ, ಮೇ ತಿಂಗಳ ಎರಡನೇ ವಾರದಿಂದ ನಿತ್ಯ ಕಡಿಮೆ ಪರೀಕ್ಷೆಗಳನ್ನು ಮಾಡುತ್ತಿದೆ. ಇದೇ ಪರಿಸ್ಥಿತಿ ಗುಜರಾತ್‌ನಲ್ಲೂ ಇದ್ದು, ಈಗ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ನಿಧಾನ ಗತಿ ಕಾಣಿಸುತ್ತಿರುವುದರ ಹಿಂದೆ, ಕಡಿಮೆ ಟೆಸ್ಟ್‌ಗಳನ್ನು ಮಾಡಲಾಗುತ್ತಿರುವುದೇ ಕಾರಣ ಎಂಬ ಆರೋಪ ಎದುರಾಗುತ್ತಿದೆ. ಇನ್ನೊಂದೆಡೆ ಬಿಹಾರ, ಉತ್ತರಪ್ರದೇಶ ಹಾಗೂ ಜಾರ್ಖಂಡ್‌ನಲ್ಲೂ ಪರೀಕ್ಷೆಗಳ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂಡಿಯಾ ಟುಡೆ ಪತ್ರಿಕೆಯು, “”ಒಂದು ವೇಳೆ ಬಿಹಾರ ಮತ್ತು ಉತ್ತರಪ್ರದೇಶವೇನಾದರೂ ರಾಷ್ಟ್ರಗಳಾಗಿದ್ದವೆಂದರೆ, ಜಾಗತಿಕವಾಗಿ ಅತ್ಯಂತ ಕಡಿಮೆ ಪರೀಕ್ಷೆಗಳನ್ನು ನಡೆಸುತ್ತಿರುವ 40 ರಾಷ್ಟ್ರಗಳಲ್ಲಿ ಅವೂ ಸ್ಥಾನಪಡೆದಿರುತ್ತಿದ್ದವು” ಎನ್ನುತ್ತದೆ.

ನಿಜವಾದ ಅಂಕಿ ಅಂಶ ಮುಚ್ಚಿಡುತ್ತಿವೆಯೇ ರಾಜ್ಯಗಳು?
ಕೋವಿಡ್‌-19 ವಿಚಾರದಲ್ಲಿ ರಾಜ್ಯಸರಕಾರಗಳು ನಿಜಕ್ಕೂ ಪಾರದರ್ಶಕವಾಗಿವೆಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತಿದೆ. ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸರಕಾರ ತನ್ನ ಇಮೇಜ್‌ ಉಳಿಸಿಕೊಳ್ಳಲು ಕೋವಿಡ್‌-19ನ ನಿಜ ಸ್ಥಿತಿಯನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಇನ್ನೊಂದೆಡೆ ಗುಜರಾತ್‌ನ ಬಿಜೆಪಿ ಸರಕಾರ ತನ್ನ ಮುಖ ಉಳಿಸಿಕೊಳ್ಳಲು ನಿಜವಾದ ಅಂಕಿ ಅಂಶವನ್ನು ಮುಚ್ಚಿಡುತ್ತಿದೆ ಎನ್ನುವುದು ಪ್ರತಿಪಕ್ಷ ಕಾಂಗ್ರೆಸ್‌ನ ಆರೋಪ. ಅತ್ತ ಪಶ್ಚಿಮ ಬಂಗಾಳದಲ್ಲಿ ಮಮತಾ ಸರಕಾರವೂ ಸತ್ಯ ಹೇಳುತ್ತಿಲ್ಲ ಎನ್ನುವುದು ವಿಪಕ್ಷಗಳ ವಾದ, ಇತ್ತ ಕೇರಳ ಸರಕಾರವೂ ಸುಳ್ಳು ಹೇಳುತ್ತಿದೆ ಎನ್ನುವ ಆರೋಪ ವಿರೋಧ ಪಕ್ಷಗಳಿಂದ ಎದುರಾಗುತ್ತಿದೆ!

ಕಾಂಟ್ಯಾಕ್ಟ್ ಟ್ರೇಸಿಂಗ್‌: ಕರ್ನಾಟಕದ ಶ್ಲಾಘನೀಯ ಶ್ರಮ!
ಒಬ್ಬ ಸೋಂಕಿತನ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎಂದು ಪತ್ತೆ ಹಚ್ಚಿ, ಅವರನ್ನು ಪರೀಕ್ಷಿಸುವುದು ಮತ್ತು ಒಂದು ವೇಳೆ ಅವರಿಗೆ ಸೋಂಕು ತಗುಲಿದ್ದು ದೃಢಪಟ್ಟರೆ, ಅವರ ಸಂಪರ್ಕಕ್ಕೆ ಬಂದವರನ್ನು ಹುಡುಕುವುದನ್ನು ಕಾಂಟ್ಯಾಕ್ಟ್ ಟ್ರೇಸಿಂಗ್‌ ಎನ್ನಲಾಗುತ್ತದೆ. ರೋಗ ಹರಡುವಿಕೆಯನ್ನು ತಡೆಯಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಆದರೆ ಇದು ಸಾಕಷ್ಟು ಮಾನವಸಂಪನ್ಮೂಲ ಮತ್ತು ಪರಿಶ್ರಮವನ್ನು ಬೇಡುವ ಕೆಲಸ. ಆರಂಭಿಕ ಸಮಯದಲ್ಲಿ, ಅಂದರೆ ತಬ್ಲೀ ಸಮಾವೇಶದಿಂದಾಗಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಾಗ, ಕೇಂದ್ರ-ರಾಜ್ಯ ಸರಕಾರಗಳು ವ್ಯಾಪಕ ಪ್ರಮಾಣದಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌ ಮಾಡಿದ್ದವು. ಆದರೆ, ನಂತರದ ದಿನಗಳಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌ ಎಲ್ಲ ರಾಜ್ಯಗಳಲ್ಲೂ ಸಮಾನವಾಗಿಲ್ಲ.

Advertisement

ಮಹಾರಾಷ್ಟ್ರ ಮತ್ತು ದಿಲ್ಲಿಯು ಕೊರೊನಾದಿಂದ ಕಂಗೆಟ್ಟಿದ್ದರೂ, ಆ ರಾಜ್ಯಗಳಲ್ಲಿ ಎಪ್ರಿಲ್‌ 30ರ ವರೆಗೆ ಕಾಂಟ್ಯಾಕ್ಟ್ ಟ್ರೇಸಿಂಗ್‌ ಪ್ರಮಾಣ ಕಡಿಮೆ ಇತ್ತು. ಮಹಾರಾಷ್ಟ್ರದ ಉದಾಹರಣೆಯನ್ನೇ ನೋಡುವುದಾದರೆ, ಆ ರಾಜ್ಯವು ಎಪ್ರಿಲ್‌ ಅಂತ್ಯದ ವೇಳೆಗೆ ಪ್ರತಿ ಒಬ್ಬ ಸೋಂಕಿತ ಪತ್ತೆಯಾದಾಗ, ಆತನ ಸಂಪರ್ಕಕ್ಕೆ ಬಂದ ಇಬ್ಬರನ್ನು ಮಾತ್ರ ಪರೀಕ್ಷಿಸಿದೆ(ಸರಾಸರಿ). ಬಹುಶಃ, ಅತ್ಯಧಿಕ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರಿಂದ, ಆ ರಾಜ್ಯದ ಆಡಳಿತ ಹಾಗೂ ಆರೋಗ್ಯ ವ್ಯವಸ್ಥೆಯ ಮೇಲೆ ಬೃಹತ್‌ ಒತ್ತಡ ಬಿದ್ದಿದ್ದೇ ಈ ಕಡಿಮೆ ಸಂಖ್ಯೆಗೆ ಕಾರಣವಿರಬಹುದು. ಇನ್ನೊಂದೆಡೆ ಕರ್ನಾಟಕವು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಪರೀಕ್ಷಿಸುವಲ್ಲಿ ಅಭೂತಪೂರ್ವ ಕೆಲಸ ಮಾಡಿದ್ದು, ಇದೇ ಅವಧಿಯಲ್ಲಿ ರಾಜ್ಯವು ಒಬ್ಬ ಸೋಂಕಿತ ಪತ್ತೆಯಾದರೆ, ಆತನ ಸಂಪರ್ಕಕ್ಕೆ ಬಂದ 47 ಜನರನ್ನು ಪರೀಕ್ಷಿಸಿದೆ!

ದೇಶ                   ಒಟ್ಟು ಪರೀಕ್ಷೆಗಳು
ಅಮೆರಿಕ                  1 ಕೋಟಿ 72 ಲಕ್ಷ
ರಷ್ಯಾ                      1 ಕೋಟಿ 6 ಲಕ್ಷ
ಬ್ರಿಟನ್‌                    41 ಲಕ್ಷ 71 ಸಾವಿರ
ಜರ್ಮನಿ                  39 ಲಕ್ಷ 52 ಸಾವಿರ
ಇಟಲಿ                     38 ಲಕ್ಷ 24 ಸಾವಿರ
ಸ್ಪೇನ್‌                     25 ಲಕ್ಷ 56 ಸಾವಿರ
ಭಾರತ                   37 ಲಕ್ಷ 37 ಸಾವಿರ
ಬ್ರೆಜಿಲ್‌                    9 ಲಕ್ಷ 30 ಸಾವಿರ

Advertisement

Udayavani is now on Telegram. Click here to join our channel and stay updated with the latest news.

Next