ರಾಮದುರ್ಗ: ರಾಮದುರ್ಗ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಬೇಸಿಗೆ ಬಿಸಿಲಿನ ತಾಪ ತಾಳಲಾರದೇ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದು, ನೆರಳು, ತಂಪು ಪಾನೀಗಳತ್ತ ಮುಖ ಮಾಡುತ್ತಿದ್ದಾರೆ.
ತಂಪು ಪಾನೀಯಗಳಿಗೆ ಮೊರೆ: ಬಿಸಿಲಿನ ಬೇಗೆಯಿಂದ ಬಚಾವ್ ಆಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೋಲ್ಡ್ ಡ್ರಿಂಕ್ಸ್ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿವೆ. ಕಲ್ಲಂಗಡಿ, ಮೋಸಂಬಿ, ಮಜ್ಜಿಗೆ, ಸೌತೆಕಾಯಿ, ಎಳೆನೀರು ಸೇರಿದಂತೆ ಇತರ ಹಣ್ಣಿನ ರಸ ಸೇವಿಸಿ ಜನ ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಮನೆಯಲ್ಲಿ ರೆಫ್ರಿಜರೇಟರ್ ಮಡಿಕೆಯ ನೀರು ದಾಹ ತಣಿಸುತ್ತಿವೆ.
ಗಗನಕ್ಕೇರಿದ ಬೆಲೆಗಳು: 10 ರೂಗೆ 1 ಗ್ಲಾಸ್ ಕಬ್ಬಿನ ಹಾಲು, ಕಳೆದ ಸಾಲಿಗಿಂತಲೂ ಕಲ್ಲಂಗಡಿ ದರ ಹೆಚ್ಚಳವಾಗಿದ್ದು, 60 ರಿಂದ 100 ರೂ ವರೆಗೆ 1 ಕಲ್ಲಂಗಡಿ ದರ ನಿಗದಿಯಾಗಿದೆ. ಪೇಟೆಯ ನಾಲ್ಕಾರು ಕಡೆ ಕಲ್ಲಂಗಡಿ ವ್ಯಾಪಾರ ಜೋರಾಗಿದೆ. 1 ಎಳೆನೀರಿನ ಬೆಲೆ 20 ರಿಂದ 30 ರೂ. ಗೆ ಏರಿಕೆಯಾಗಿದೆ. 1 ರೂಪಾಯಿ ಮಾರಾಟವಾಗುವ 1 ಲಿಂಬೆ ಹಣ್ಣಿನಿನ ಬೆಲೆ ಈಗ 5 ರೂಪಾಯಿಗೆ ಒಂದರಂತೆ ಮಾರಾಟವಾಗುತ್ತಿವೆ. ಒಟ್ಟಾರೆ ಬಿಸಿಲಿನ ಹೊಡೆತಕ್ಕೆ ತಂಪು ಪಾನೀಯಗಳಿಗೆ ಬಳಸುವ ಪದಾರ್ಥಗಳ ಬೆಲೆ ಗಗನಕ್ಕೇರಿದೆ.
ಅನಾರೋಗ್ಯದ ಆತಂಕ: ಬೆಳಗ್ಗೆ ಸೂರ್ಯೋದಯದೊಂದಿಗೆ ಪ್ರಾರಂಭ ವಾಗುವ ಬಿಸಿಲು ಹೊತ್ತು ಏರಿದಂತೆ ಬಿಸಿಲಿನ ಪ್ರಖರತೆ ಏರುತ್ತಾ ಹೋಗುತ್ತಿದೆ. ಬಿಸಿಲಿನ ಝಳದಿಂದ ಮಕ್ಕಳು ಹಾಗೂ ವಯೋವೃದ್ಧರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತಿದ್ದು, ಅನೇಕ ಕಾಯಿಲೆಗಳು ಬರತೊಡಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಬಿಸಿಲಿನ ಝಳಕ್ಕೆ ತತ್ತರಿಸಿ ಹೋಗಿರುವ ಜನತೆ ಮಳೆರಾಯನ ಆಗಮನದ ನಿರೀಕ್ಷೆಯಲ್ಲಿದ್ದು, ಒಂದು ದೊಡ್ಡ ಮಳೆ ಬಿದ್ದರೆ ಮಾತ್ರ ಬೇಸಿಗೆಯ ಬಿಸಿಲಿನ ತಾಪ ಸ್ವಲ್ಪಮಟ್ಟಿಗಾದರೂ ತಣ್ಣಗಾಗಬಹುದೆಂಬ ಲೆಕ್ಕಾಚಾರದಲ್ಲಿ ಜನರು ಕಾಲ ನೂಕುತ್ತಿದ್ದಾರೆ.
Advertisement
ಸದ್ಯ ತಾಪಮಾನ 40 ಡಿಗ್ರಿ ಆಸುಪಾಸು ಬಂದು ನಿಂತಿದ್ದು, ರಾಮದುರ್ಗ ಪಟ್ಟಣದ ಸುತ್ತಲು ಮುಳ್ಳೂರು, ಮುದಕವಿ ಹಾಗೂ ಮುದೇನೂರ ಗುಡ್ಡಗಳಿರುವದರಿಂದ ಹಗಲಿನಲ್ಲಿ ಉರಿ ಬಿಸಿಲಿಗೆ ಕಾದ ಗುಡ್ಡಗಳಿಂದ ಬೀಸುವ ಗಾಳಿ ಮಧ್ಯ ರಾತ್ರಿಯವರೆಗೂ ಬಿಸಿಯಾಗಿರುವದರಿಂದ ಹಾಯಾಗಿ ನಿದ್ರೆ ಮಾಡುವುದು ದುಸ್ತರವಾಗಿದೆ.
Related Articles
Advertisement