Advertisement
ಬೆಂಗಳೂರಿನಿಂದ ರಕ್ಷಣಾ ಹೆಲಿಕಾಪ್ಟರ್‌ನಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನು ಸಂಜೆ 4.58ರ ವೇಳೆಗೆ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಕರೆತರಲಾಯಿತು. ಪಾರ್ಥಿವ ಶರೀರದ ಜತೆ ಮುಖ್ಯಮಂತ್ರಿ ಕುಮಾಸ್ವಾಮಿ, ಅಂಬರೀಶ್ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ನಿಖೀಲ್ ಕುಮಾರಸ್ವಾಮಿ ಹಾಗೂ ಸಚಿವ ಸಾ.ರಾ.ಮಹೇಶ್ ಆಗಮಿಸಿದರು. ಮತ್ತೂಂದು ಹೆಲಿಕಾಪ್ಟರ್ ತೂಬಿನಕೆರೆ ಹೆಲಿಪ್ಯಾಡ್‌ನಲ್ಲಿ ಇಳಿಯಿತು.
Related Articles
Advertisement
ಬೆಳಗ್ಗೆ 8 ಗಂಟೆಗೆ ದರ್ಶನಕ್ಕೆ ಅವಕಾಶ ನೀಡಿದ ಕೂಡಲೇ ಕೆರೆ ಕೋಡಿ ಹೊಡೆದು ನೀರು ಹರಿಯುವಂತೆ ನೂರಾರು ಜನರು ಕಲಿಯುಗದ ಕರ್ಣನನ್ನು ಕಾಣಲು ನುಗ್ಗಿದರು. ಅಂಬಿಯವರ ದೇಹವನ್ನು ಕಂಡು ಅಭಿಮಾನಿಗಳು ಕಣ್ಣೀರಿಡುತ್ತಾ, ಅಕ್ರಂದನದಲ್ಲಿಯೇ ಜೈಕಾರ ಹಾಕಿದ್ದು ಮನಕಲಕುವಂತಿತ್ತು. ಶೀಘ್ರ ದರ್ಶನ ಪಡೆಯಲು ನೂಕು-ನುಗ್ಗಲು ಆರಂಭವಾಗಿ ಸಾಲಿನಲ್ಲಿದ್ದವರಿಗೆ ಉಸಿರುಗಟ್ಟಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.
ಅಂಬರೀಷ್ ಅವರ ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳ ಪೈಕಿ ಒಬ್ಬರು ನಾಟಿ ಕೋಳಿ ಸಾರು, ಮುದ್ದೆ ತೆಗೆದುಕೊಂಡು ಬಂದಿದ್ದರು. ಪಾರ್ಥಿವ ಶರೀರದ ಬಳಿಗೆ ಬಂದ ಅವರು “ಅಣ್ಣ ನಿನ್ನಿಷ್ಟದ ನಾಟಿ ಕೋಳಿ ಸಾರು, ಮುದ್ದೆ ತಂದಿದ್ದೀನಿ ಎದ್ದೇಳಣ್ಣಾ ಎಂದು ಕಣ್ಣೀರು ಹಾಕುವ ಮೂಲಕ ಅಭಿಮಾನ ಪ್ರದರ್ಶಿಸಿದರು. ನೂರಾರು ಅಭಿಮಾನಿಗಳು ಬ್ಯಾರಿಕೇಡ್ ದಾಟಿ ದರ್ಶನ ಪಡೆಯಲು ಮುಂದಾಗುತ್ತಿದ್ದರು. ಇನ್ನು ಕೆಲ ಅಭಿಮಾನಿಗಳು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಬರುತ್ತಿದ್ದ ದೃಶ್ಯಗಳು ಕಂಡು ಬಂದವು.