ತುಮಕೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಮುಂದು ವರೆದಿದ್ದು ಬುಧವಾರವೂ ನಗರವೂ ಸೇರಿ ದಂತೆ ಜಿಲ್ಲೆಯ ವಿವಿಧ ಕಡೆ ಆಲಿಕಲ್ಲು ಮಳೆ ಬಿದ್ದಪರಿಣಾಮ ಜನರು ಆಲಿಕಲ್ಲು ಹಿಡಿಯಲು ಮುಂದಾಗಿ ಮಳೆ ಬೀಳುವುದನ್ನು ಕಂಡು ಸಂಭ್ರಮಪಟ್ಟರು.
ನೆಲಕಚ್ಚಿದ ತೆಂಗು, ಅಡಕೆ, ಬಾಳೆ: ಬುಧವಾರ ಬೆಳಗ್ಗೆಯಿಂದಲೇ ಸುಡು ಬಿಸಿಲಿನ ಬೇಗೆ ತಾಳಲಾರದೇ ಇದ್ದ ನಾಗರಿಕರಿಗೆ ಸಂಜೆಯ ವೇಳೆಗೆ ಮೋಡ ಮುಸುಕಿದ ವಾತಾವರಣವಾಗಿ ಗುಡುಗು, ಸಿಡಿಲು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಗಾಳಿಯ ರಭಸಕ್ಕೆ ಕೆಲವು ಕಡೆಗಳಲ್ಲಿ ನೂರಾರು ತೆಂಗು, ಅಡಿಕೆ, ಬಾಳೆ ತೋಟಗಳು ನೆಲ ಕಚ್ಚಿದ್ದು, ರೈತರಿಗೆ ಸಾವಿರಾರು ರೂ. ನಷ್ಟ ಉಂಟಾಗಿದೆ.
ಜಿಲ್ಲೆಯಲ್ಲಿ ಮಾವು ಬೆಳೆದ ರೈತರು ಮಾನಿವ ಫಸಲು ಕೀಳುವ ವೇಳೆಯಲ್ಲಿ ಆಲಿಕಲ್ಲು ಮಳೆ ಬೀಳುತ್ತಿರುವುದರಿಂದ ಬೆಳೆಗೆ ತೊಂದರೆ ಉಂಟಾಗುತ್ತಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ.
ಹದ ಮಳೆ: ಸುಡು ಬಿಸಿಲಿನ ಬೇಸಿಗೆಯಿಂದ ನೊಂದಿದ್ದ ನಾಗರಿಕರಿಗೆ ವರ್ಷಧಾರೆ ಹರ್ಷ ನೀಡಿ ಭೂಮಿಯನ್ನು ತಂಪಾಗಿರಿಸಿದೆ. ಈಗಾಗಲೇ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಕಾಣಿಸಿಕೊಳ್ಳುತ್ತಿರುವಂತೆಯೇ ಜಿಲ್ಲೆಯಲ್ಲೂ ಅಲಲ್ಲಿ ಸಾಧಾರಣ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಹದ ಮಳೆಯಾಗಿದೆ.
ಬಿತ್ತನೆಗೆ ಸಿದ್ಧತೆ: ಕಳೆದ ಸಾಲಿನ ಪೂರ್ವ ಮುಂಗಾರಿಗೆ ಹೊಲಿಸಿದರೆ ಈ ಬಾರಿ ಮಳೆ ಉತ್ತಮವಾಗಿ ಬರುತ್ತಿದೆ. ರೈತರು ಈ ಬಾರಿಯ ಪೂರ್ವ ಮುಂಗಾರಿನಲ್ಲಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಮೆಕ್ಕೆಜೋಳ, ಅಲಸಂದೆ ಬೀಜಗಳನ್ನು ಭಿತ್ತನೆ ಚುರುಕು ಮಾಡಿದ್ದರು 4 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನು ಬಿತ್ತನೆ ಮಾಡಲು ರೈತರು ಭೂಮಿ ಹಸನು ಮಾಡುತ್ತಿದ್ದಾರೆ.
ರಸ್ತೆಯಲ್ಲೆಲ್ಲಾ ಹರಿದ ನೀರು: ನಗರದಲ್ಲಿ ಸುರಿದ ಮಳೆಯಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿ ಸಂಚಾರ ಅಸ್ತವ್ಯಸ್ತವಾಯಿತು. ರಸ್ತೆಯೂ ಕಾಣದ ರೀತಿಯಲ್ಲಿ ಮಳೆ ರಭಸವಾಗಿ ಬರುತ್ತಿದ್ದ ಹಿನ್ನಲೆಯಲ್ಲಿ ರಸ್ತೆ ಪಕ್ಕದ ಚರಂಡಿಗಳೆಲ್ಲಾ ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿತ್ತು, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನೀರು ನುಗ್ಗಿ ದೆ.