ಹುಣಸೂರು: ತಗ್ಗದ ಪ್ರವಾಹ, ತೆರವಾಗದ ಜಲ ದಿಗ್ಬಂಧನ, ವಿದ್ಯುತ್ ಕಡಿತ, ಕುಸಿಯುತ್ತಿರುವ ಮನೆಗಳು, ಆರಂಭವಾಗದ ಬಸ್ ಸಂಚಾರ, ಮುಂದುವರಿದ ಬೋಟ್ ಸಂಚಾರ, ಮೂರಾ ಬಟ್ಟೆಯಾದ ರೈತರ ಬದುಕು…. ಇವು ಜಲ ಸಂಕಷ್ಟಕ್ಕೆ ಸಿಲುಕಿರುವ ಹನಗೋಡು ಭಾಗದ ಜನತೆ ಅನುಭವಿಸುತ್ತಿರುವ ನರಕಯಾತನೆಯ ಬದುಕು. ಒಂದೆಡೆ ಜಲಸಂಕಟ, ಮತ್ತೂಂದೆಡೆ ಜನರ ಬದುಕಿನ ಜಂಜಾಟ. ಹೀಗೆ ಸಾಗುತ್ತಿದೆ ವಾರದಿಂದ ಈ ಭಾಗದ ಜನರ ವಿಧಿಯಾಟ.
ಯಥಾಸ್ಥಿತಿ ಮಳೆ: ಹನಗೋಡು ಅಣೆಕಟ್ಟೆ ಮೇಲೆ 40 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಸೇತುವೆಗಳು, ಮೋರಿಗಳು ಇನ್ನೂ ಜಲಾವೃತವಾಗಿದ್ದು, ಶನಿವಾರ-ಭಾನುವಾರವೂ ಬೆಳಗ್ಗೆ ಸೂರ್ಯ ಕಾಣಿಸಿಕೊಂಡನಾದರೂ ಮಧ್ಯಾಹ್ನದ ವೇಳೆಗೆ ವರುಣ ಮತ್ತೆ ಪ್ರತ್ಯಕ್ಷನಾಗಿ ತುಂತುರು ಮಳೆ ಸುರಿಸಿದ. ಹೀಗಾಗಿ ನದಿಯಲ್ಲಿ ನಾಲ್ಕು ಅಡಿಗಳಷ್ಟು ಪ್ರವಾಹ ಇಳಿಮುಖವಾಗಿದ್ದರೂ ಸೇತುವೆ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಬದಲಿ ಮಾರ್ಗ: ಹಳೇ ಸೇತುವೆಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೆ, ಹೊಸ ಸೇತುವೆಯಲ್ಲಿ ಓಡಾಡುವ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಾರೀ ವಾಹನ ಹಾಗೂ ಬಸ್ ಸಂಚಾರಕ್ಕೆ ಮೈಸೂರಿನಿಂದ ಕೊಡಗು ಭಾಗಕ್ಕೆ ತೆರಳುವ ಬಸ್‌ಗಳು ಕೆ.ಆರ್.ನಗರ ಮಾರ್ಗವಾಗಿ ಹಾಗೂ ಹುಣಸೂರಿನಿಂದ ಕೊಡಗಿಗೆ ತೆರಳುವ ಬಸ್ ಗಳಿಗೆ ಕಿರಿಜಾಜಿ-ಕಟ್ಟೆಮಳಲವಾಡಿ ಮಾರ್ಗವಾಗಿ ಸಂಚರಿಸಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಯಥಾಸ್ಥಿತಿ ಇದೆ.
ಇನ್ನೂ ಸಂಕಷ್ಟದಲ್ಲಿ ಗ್ರಾಮಗಳು: ಜಲಾವೃತಗೊಂಡಿರುವ ಕೋಣನಹೊಸಹಳ್ಳಿ, ಬಿಲ್ಲೇನಹೊಸಹಳ್ಳಿ, ಕೆ.ಜಿ.ಹಬ್ಬನಕುಪ್ಪೆ, ಶಿಂಡೇನಹಳ್ಳಿ, ದೊಡ್ಡಹೆಜೂjರು, ಅಬ್ಬೂರು, ಕಸಬಾ ಹೋಬಳಿಯ ಮರದೂರು, ರಾಮೇನಹಳ್ಳಿ, ಕಿರಿಜಾಜಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮನೆಗಳಿಗೆ ನುಗ್ಗಿರುವ ನೀರು ಅಪಾಯ ತಂದೊಡ್ಡುತ್ತಿದೆ. ಹನಗೋಡು ಹೋಬಳಿಯ ಶೆಟ್ಟಹಳ್ಳಿ, ಕಾಮಗೌಡನಹಳ್ಳಿ, ಬಿಲ್ಲೇನಹೊಸಹಳ್ಳಿಗಳಲ್ಲಿ ತೆರೆದಿರುವ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತ ಕುಟುಂಬಗಳು ಬೀಡು ಬಿಟ್ಟಿದೆ.
ಗರ್ಭಿಣಿ ಆಸ್ಪತ್ರೆಗೆ: ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿಯ ಪರಿಹಾರ ಕೇಂದ್ರದಲ್ಲಿದ್ದ ಗರ್ಭಿಣಿ ಮನು ಅವರನ್ನು ಮಾಜಿ ಶಾಸಕ ಮಂಜುನಾಥ್ ತಮ್ಮ ಕಾರಿನಲ್ಲೇ ಹನಗೋಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಅಬ್ಬೂರಿನಲ್ಲಿ ಮನೆಯೊಳಗೆ ನೀರು ತುಂಬಿ ಆಘಾತಕ್ಕೊಳಗಾಗಿ ಅಸ್ವಸ್ಥಗೊಂಡಿದ್ದ ಕುಮಾರಿ ಅವರನ್ನು ಹನಗೋಡು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಮನೆಗೆ ಕಳುಹಿಸಲಾಗಿದೆ.
ವಿದ್ಯುತ್ ಇಲ್ಲದೇ ಪರದಾಟ: ಸತತ ಮಳೆಯಿಂದ ಮನೆಗಳು ಬೀಳುತ್ತಲೇ ಇವೆ. ಬಹುತೇಕ ಹಳ್ಳಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕಬೇಕಿದೆ. ವಿದ್ಯುತ್ ಇಲ್ಲದೇ ರಾತ್ರಿ ವೇಳೆ ಹೆದರಿಕೆಯಿಂದಿರುವಂತಾಗಿದ್ದು, ಧಾನ್ಯಗಳ ಹಿಟ್ಟು ಮಾಡಿಸಲು, ಮೊಬೈಲ್ ಚಾರ್ಜ್ ಮಾಡಲು ಪರದಾಡುತ್ತಿದ್ದಾರೆ. ಒಟ್ಟಾರೆ ಕಳೆದ ಒಂದು ವಾರ ಸುರಿದ ಮಹಾಮಳೆಗೆ ಜನರು ಜರ್ಜರಿತರಾಗಿದ್ದಾರೆ.
ಬೋಟ್‌ನಲ್ಲೇ ಪ್ರಯಣ: ಹುಣಸೂರು ತಾಲೂಕಿನ ಹನಗೋಡು ಬಳಿಯ ಅಬ್ಬೂರು, ಶಿಂಡೇನಹಳ್ಳಿ ಗ್ರಾಮಸ್ಥರು ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇನ್ನು ಕಿರಂಗೂರು ಗ್ರಾಮ ಜಲದಿಗ್ಬಂಧನಕ್ಕೊಳಗಾಗಿದೆ. ತಹಶೀಲ್ದಾರ್ ಬಸವರಾಜು, ತಾಪಂ ಇಒ ಗಿರೀಶ್, ಎಸ್‌ಐ ಶಿವಪ್ರಕಾಶ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳು ಪರಿಹಾರ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ತಡವಾಗಿಯಾದರೂ ರಾಜಕಾರಣಿಗಳು ಕೊನೆಗೂ ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸುತ್ತಿದ್ದಾರೆ.
* ಸಂಪತ್‌ಕುಮಾರ್