Advertisement

ಬಾಕಿ ಇರುವ ನೀರಾವರಿ ಯೋಜನೆ ಪೂರ್ಣ

03:28 PM Jan 15, 2018 | Team Udayavani |

ಕೆಜಿಎಫ್: ಬಿಜೆಪಿ ಅಧಿಕಾರಕ್ಕೆ ಬಂದರೆ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಅದಕ್ಕಾಗಿ ಒಂದು ಲಕ್ಷ ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ಇಲ್ಲಿನ ಸುಂದರಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ ನಾಲ್ಕೂ ಮುಕ್ಕಾಲು ವರ್ಷವಾದರೂ ಯಾವುದೇ ಪ್ರಗತಿ ಸಾಧಿಸಿಲ್ಲ. ಪೈಪ್‌ ಖರೀದಿ ಬಿಟ್ಟರೆ ಬೇರೇನೂ ಪ್ರಗತಿಯಾಗಿಲ್ಲ. ನಾವಿದ್ದಿದ್ದರೆ ಶೇ.90 ರಷ್ಟು ಪ್ರಗತಿ ಸಾಧಿಸುತ್ತಿದ್ದೆವು ಎಂದು ಹೇಳಿದರು.

ಮಹದಾಯಿ ಸಮಸ್ಯೆ ಕಾಂಗ್ರೆಸ್‌ ಕೂಸು: ಮಹದಾಯಿ ನೀರಿನ ಸಮಸ್ಯೆ ಕಾಂಗ್ರೆಸ್‌ ಪಕ್ಷದ ಕೂಸು. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಗೋವಾದಲ್ಲಿಯೇ ಇದ್ದರೂ ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಕಾಂಗ್ರೆಸ್‌ ಅಧ್ಯಕ್ಷರಿಗೆ ಹೇಳಲಿಲ್ಲ. ಸೋನಿಯಾ ಗಾಂಧಿ ಗೋವಾ ಚುನಾವಣೆಯಲ್ಲಿ ನೀರು ಬಿಡುವುದಿಲ್ಲ ಎಂದು ಹೇಳಿದ್ದೇ ಇಂದಿನ ಸಮಸ್ಯೆಗೆ ಕಾರಣ. ಮನೋಹರ್‌ ಪರ್ರಿಕ್ಕರ್‌ ಸಮಸ್ಯೆ ಬಗೆಹರಿಸಲು ಸಿದ್ಧವಿದ್ದರೂ ಕಾಂಗ್ರೆಸ್‌ನವರು ಬಿಡುತ್ತಿಲ್ಲ ಎಂದು ಆರೋಪಿಸಿದರು.

ಸುಳ್ಳು ಭರವಸೆ: ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ.ಅನುದಾನ ನೀಡಿದೆ. ಈ ಹಣವನ್ನು ಯಾವ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದೆ ಎಂಬುದಕ್ಕೆ ಲೆಕ್ಕ ಇಲ್ಲ. ಎಲ್ಲಾ ಸುಳ್ಳು ಭರವಸೆ ನೀಡುತ್ತಿದ್ದಾರೆ. ಸಿದ್ದರಾಮಯ್ಯರ ಹೆಸರಿನಲ್ಲಿ ರಾಮನ ಬದಲು ರಾವಣ ಎಂದಿರಬೇಕಿತ್ತು. ಧರ್ಮಸ್ಥಳದಲ್ಲಿ ಅಪಚಾರ ಮಾಡಿದರು. ಉಡುಪಿಗೆ ಹೋಗಿದ್ದರೂ ಶ್ರೀಕೃಷ್ಣನ ದರ್ಶನ ಮಾಡಲಿಲ್ಲ. ಈಗ ಹಿಂದೂ ಎನ್ನುತ್ತಿದ್ದಾರೆ. ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಹಿಂದುಗಳನ್ನು ಉಗ್ರಗಾಮಿಗಳೆನ್ನುತ್ತಾರೆ ಎಂದು ದೂರಿದರು.

ಸಿಎಂ ಅಧಿಕಾರದಲ್ಲಿರಲು ಅರ್ಹರಲ್ಲ: ರಾಜ್ಯದಲ್ಲಿ 6521 ಕೊಲೆಗಳಾಗಿವೆ. 4236 ನಾಪತ್ತೆ ಪ್ರಕರಣಗಳು ನಡೆದಿದೆ. 5447 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇಷ್ಟೆಲ್ಲಾ ನಡೆದಿರುವುದರಿಂದ ಅವರು ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ. ಕೆಜಿಎಫ್ನಲ್ಲಿ ಡಿಸಿಸಿ ಬ್ಯಾಂಕ್‌ ಸಾಲ ವಿತರಣೆ ಮಾಡುವಾಗ ಪಕ್ಷಪಾತ ಮಾಡಲಾಗುತ್ತಿದೆ. ಕಾಂಗ್ರೆಸ್‌ನವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಬಿಜೆಪಿ ಫೈಲ್‌ ಬಂದರೆ ಅದನ್ನು ಮೂಲೆಗುಂಪು ಮಾಡಲಾಗುತ್ತದೆ ಎಂದು ಕಿಡಿಕಾರಿದರು. 

Advertisement

ಯೋಜನೆ ಜನರಿಗೆ ತಲುಪಲ್ಲ: ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಹಿಂದುಳಿದ ನಾಯಕರೊಬ್ಬರು ನಮ್ಮ ಧ್ವನಿಯಾಗುತ್ತಾರೆಂಬ ಭರವಸೆ ಇತ್ತು. ಸಿದ್ದರಾಮಯ್ಯ ಪ್ರಕಟಿಸಿದ ಯೋಜನೆ ಊರಿನ ಮನೆಗೆ ತಲುಪಲ್ಲ. ಅಮಿತ್‌ ಷಾ ಆಡಳಿತ ಪಕ್ಷದ ಅಧ್ಯಕ್ಷರು. ರಾಜ್ಯಸಭಾ ಸದಸ್ಯರು. ಅವರಿಗೆ ಸಿಎಂ ಬಳಿ ಲೆಕ್ಕ ಕೇಳಲು ಹಕ್ಕಿದೆ. ಆದರೆ, ಮುಖ್ಯಮಂತ್ರಿ ಲೆಕ್ಕ ಕೇಳಲು ನೀವು ಯಾರು ಎನ್ನುತ್ತಾರೆ. ಮುಖ್ಯಮಂತ್ರಿಗಳ ಲೆಕ್ಕ ಗೋವಿಂದರಾಜು ಅವರ ಡೈರಿಯಲ್ಲಿದೆ. ಅದಕ್ಕೆ ನೀವು ಲೆಕ್ಕ ಕೊಡಲು ಆಗಲ್ಲ ಎಂದು ಲೇವಡಿ ಮಾಡಿದರು.

ಕೆಜಿಎಫ್ ಕ್ಷೇತ್ರಕ್ಕೆ ಪಕ್ಷಪಾತ: ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ರಾಜ್ಯ ಸರ್ಕಾರ ಕೆಜಿಎಫ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷಪಾತ ಮಾಡುತ್ತಿದೆ. ಸಮರ್ಪಕ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ನೀಡಿದ ಅನುದಾನದಿಂದ 70 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.

ಸಂಸದ ಪಿ.ಸಿ.ಮೋಹನ್‌ ಮಾತನಾಡಿದರು. ಮಾಜಿ ಸಚಿವ ಅಶೋಕ್‌, ಜಿಲ್ಲಾಧ್ಯಕ್ಷ ವೆಂಕಟಮುನಿಯಪ್ಪ, ಚ್ಚಿದಾನಂದ, ಬಿ.ವಿ.ಮಹೇಶ್‌, ಜಯಪ್ರಕಾಶ್‌ ನಾಯ್ಡು, ಬಾಟಾ ಗೋಪಾಲ್‌, ಸುರೇಶ್‌ನಾರಾಯಣ ಕುಟ್ಟಿ, ಎಂ.ನಾರಾಯಣಸ್ವಾಮಿ, ಕಮಲನಾಥನ್‌, ಚಿ.ನಾ.ರಾಮು, ಹನುಮಂತು, ವಿಜಯಕುಮಾರ್‌ ಮತ್ತಿತರರು ಹಾಜರಿದ್ದರು. ಜಿಪಂ ಸದಸ್ಯೆ ಅಶ್ವಿ‌ನಿ ಕಾರ್ಯಕ್ರಮ ನಿರೂಪಿಸಿದರು  ಕೇಂದ್ರದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಇಲಾಖೆಗಳಿಂದ ಬಂದ ಬೆಳೆ ನಾಶ ಪರಿಹಾರ ಏನಾಯಿತು? ಕೇಂದ್ರ ಸರ್ಕಾರಕ್ಕೆ ನಕಲಿ ಪ್ರಮಾಣ ಪತ್ರ ನೀಡಿದ ರಾಜ್ಯದ ಅಧಿಕಾರಿಗಳ ವಿರುದ್ಧ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 
ಕಿ ಶೋಭಾ ಕರಂದ್ಲಾಜೆ, ಸಂಸದೆ 

Advertisement

Udayavani is now on Telegram. Click here to join our channel and stay updated with the latest news.

Next