ಕೊಪ್ಪಳ: ನಮ್ಮ ಪೂರ್ವಜರ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ ಸಿರಿಧಾನ್ಯ ಬೆಳೆಗಳು ಕಣ್ಮರೆಯಾಗುವ ಆತಂಕ ಎದುರಾಗಿದೆ. ಸರ್ಕಾರವೇ ಈ ಹಿಂದಿನ ವರ್ಷ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ನೀಡಿ, ಈಗ ತನ್ನ ಆಸಕ್ತಿಯನ್ನೇ ಕಡಿಮೆ ಮಾಡಿಕೊಂಡಿದೆ. ಹೀಗಾಗಿ ರೈತರು ಸಹ ಬೆಳೆ ಬೆಳೆಯಲು ನಿರಾಸಕ್ತಿ ತೋರುತ್ತಿದ್ದಾರೆ.
ಹೌದು. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಸಿರಿಧಾನ್ಯಗಳ ಬಗ್ಗೆ ಜನತೆಗೆ ಪರಿಚಯಿಸಲು ಯೋಜನೆಗಳ ಮೂಲಕ ರೈತರಿಗೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಿತು. ಅದರಂತೆ ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ 3500 ಹೆಕ್ಟೇರ್‌ನಲ್ಲಿ ಜೋಳ, ಸಜ್ಜೆ, ನವಣೆಯನ್ನು ರೈತರು ಬೆಳೆದಿದ್ದರು. ಸರ್ಕಾರ ಮತ್ತಷ್ಟು ರೈತರಿಗೆ ಸಿರಿಧಾನ್ಯ ಬೆಳೆ ಬಗ್ಗೆ ಪ್ರೇರಣೆ ನೀಡಿದಾಗ, 2017-18ನೇ ಸಾಲಿನಲ್ಲಿ 9346 ಹೆಕ್ಟೇರ್ ಗುರಿ ಪೈಕಿ 5677 ಹೆಕ್ಟೇರ್‌ನಲ್ಲಿ ಬೆಳೆದರು. ಆದರೆ ಸರ್ಕಾರದ ಆಸಕ್ತಿ ಕಳೆದ ವರ್ಷ ತುಂಬ ಕಡಿಮೆಯಾದ ಕಾರಣ 2018-19ರಲ್ಲಿ 1000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ರೈತ ಸಮೂಹ ಸಿರಿಧಾನ್ಯ ಬೆಳೆಯನ್ನು ಬೆಳೆದಿದ್ದಾನೆ.
ಸಿಗಲಿಲ್ಲ ಮಾರುಕಟ್ಟೆ: ರಾಜ್ಯದ ತುಂಬೆಲ್ಲ ರೈತರು ಆರಂಭದ ದಿನದಲ್ಲಿ ಖುಷಿಯಿಂದಲೇ ಸಿರಿಧಾನ್ಯ ಬೆಳೆದರು. ಇಳುವರಿಯೂ ತಕ್ಕಮಟ್ಟಿಗೆ ಬಂದಿತು. ಆದರೆ ಮಾರುಕಟ್ಟೆಯಲ್ಲಿ ಸಿರಿಧಾನ್ಯಕ್ಕೆ ಬೆಲೆಯೇ ಇಲ್ಲದ ಪರಿಸ್ಥಿತಿ ಎದುರಾಯಿತು. ಎಪಿಎಂಸಿಗಳಲ್ಲಂತೂ ಖರೀದಿ ಮಾಡುವವರೇ ಇಲ್ಲವೆಂಬ ಮಾತು ಕೇಳಿ ಬಂದವು. ರೈತನೇ ನೇರವಾಗಿ ಅವಶ್ಯವಿದ್ದವರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಸ್ಥಿತಿ ಬಂದಿತು. ಹಾಗಾಗಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸಿಗದ ಹಿನ್ನೆಲೆಯಲ್ಲಿ ರೈತನೂ ತೊಂದರೆ ಅನುಭವಿಸಿದನು. ಇತ್ತ ಅಧಿಕಾರಿಗಳು ಪೇಚಾಟಕ್ಕೆ ಸಿಲುಕುವಂತಾಯಿತು.
ಯೋಜನೆ ಬಂದಾಗಗಷ್ಟೆ ಆಸಕ್ತಿ: ಇನ್ನೂ ಸರ್ಕಾರಗಳು ರೂಪಿಸುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಆಸಕ್ತಿ ತೋರಿದಂತೆ ಕಾಣುತ್ತದೆ. ಆರಂಭದಲ್ಲಿ ಸರ್ಕಾರ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಿತು. ಕ್ರಮೇಣ ತನ್ನ ಆಸಕ್ತಿ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಇತ್ತ ಅಧಿಕಾರಿಗಳು ಸಹಿತ ರೈತರಿಗೆ ಸಿರಿಧಾನ್ಯ ಬೆಳೆಯಲು ಹೇಳುತ್ತಿಲ್ಲ. ಸರ್ಕಾರ ಹೇಳಿದಾಗಷ್ಟೆ ಆಸಕ್ತಿ ತೋರುವ ಕೃಷಿ ಇಲಾಖೆ ಆ ಬಳಿಕ ಅದರ ಬಗ್ಗೆ ತಲೆಯೂ ಹಾಕಲ್ಲ ಎನ್ನುವ ಮಾತು ಕೇಳಿ ಬಂದಿವೆ.
ಸಿರಿಧಾನ್ಯದಿಂದ ಹಲವು ಲಾಭ: ಸಿರಿಧಾನ್ಯ ಬೆಳೆ ಈಗಿನದ್ದಲ್ಲ. ನಮ್ಮ ಪೂರ್ವಜರ ಕಾಲದಿಂದ ಬೆಳೆಯಲಾಗುತ್ತದೆ. ಪ್ರಮುಖವಾಗಿ ಕೊರ್ಲೆ, ಜೋಳ, ಸಜ್ಜೆ, ನವಣೆ, ಬರಗು, ಊದಲು, ಆರ್ಕ ಬೆಳೆಯಲ್ಲಿ ಪೌಷ್ಟಿಕಾಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಿರಿಧಾನ್ಯ ಸೇವನೆಯಿಂದ ರೋಗಮುಕ್ತ, ಆರೋಗ್ಯಯುಕ್ತ ಜೀವನ ನಡೆಸಬಹುದು. ಮಕ್ಕಳು, ಮಹಿಳೆಯರು ಸೇರಿ ಸರ್ವರಿಗೂ ಸಿರಿಧಾನ್ಯಗಳಿಂದ ಹಲವು ಲಾಭಗಳಿವೆ. ಆದರೆ ಸರ್ಕಾರ ಕೇವಲ ರೈತರಿಗೆ ಪ್ರೇರೇಪಣೆ ನೀಡಿದೆಯೇ ವಿನಃ ಮಾರುಕಟ್ಟೆಯ ವ್ಯವಸ್ಥೆ ಕಲ್ಪಿಸದೇ ಹಿನ್ನೆಲೆಯಲ್ಲಿ ಬೆಳೆ ಬೆಳೆಯುವ ಪ್ರಮಾಣ ಇಳಿಮುಖವಾಗಿದೆ ಎನ್ನುವ ಮಾತುಗಳು ಕೃಷಿ ಇಲಾಖೆಯಿಂದಲೇ ಕೇಳಿ ಬಂದಿದೆ. ಹಾಗಾಗಿ ಸಿರಿಧಾನ್ಯ ಬೆಳೆ ಮತ್ತೆ ಮರೆಯಾಗುತ್ತಿದೆಯೇನೋ ಎನ್ನುವ ಭಾವನೆ ರೈತ ಸಮೂಹದಲ್ಲಿ ಮೂಡಲಾರಂಭಿಸಿದೆ.
ಇನ್ನಾದರೂ ಸರ್ಕಾರ ಸಿರಿಧಾನ್ಯ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಶಾಲಾ ಮಕ್ಕಳಿಗೆ, ಗರ್ಭಿಣಿಯರಿಗೆ, ಮಹಿಳೆಯರಿಗೆ ಅಂತಹ ಆಹಾರವನ್ನು ಪೂರೈಕೆ ಮಾಡಿದರೆ ಮಾರುಕಟ್ಟೆ ವ್ಯವಸ್ಥೆಯನ್ನೂ ಕಲ್ಪಿಸಿದಂತಾಗಿ, ರೈತನಿಗೂ ಲಾಭವಾಗಲಿದೆ. ಇತ್ತಮ ಮಕ್ಕಳಿಗೂ ಪೌಷ್ಠಿಕ ಆಹಾರ ಪೂರೈಕೆ ಮಾಡಿದಂತಾಗಲಿದೆ. ಇಂತಹ ಯೋಜನೆಗಳ ಬಗ್ಗೆ ಸರ್ಕಾರ ಆಸಕ್ತಿ ಕೊಡುವ ಅವಶ್ಯಕತೆಯಿದೆ.
•ದತ್ತು ಕಮ್ಮಾರ