ಜಗಳೂರು: ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ತೈಲ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಆಗ್ರಹಿಸಿದರು.
ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ನಂತರ ಅವರು ಮಾತನಾಡಿದರು. ದೇಶದಲ್ಲಿ ಶೇ .65ಕ್ಕೂ ಅ ಧಿಕ ಜನಸಂಖ್ಯೆ ಆರ್ಥಿಕ ಅಭಿವೃದ್ಧಿಗೆ ವ್ಯವಸಾಯವನ್ನೇ ಅವಲಂಬಿಸಿ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಕಳೆದ 75 ದಿನಗಳಿಂದ ದೆಹಲಿ ಗಡಿಯಲ್ಲಿ ರೈತರು ಚಳವಳಿ ನಡೆಸುತ್ತಿದ್ದಾರೆ. ಅನ್ನದಾತರ ನೋವುಗಳಿಗೆ ಸ್ಪಂದಿಸದೆ ಪ್ರಜಾಪ್ರಭುತ್ವ ಹೋರಾಟ ಹತ್ತಿಕ್ಕಲು ಅಡೆತಡೆಗಳನ್ನೊಡ್ಡಿ ದರ್ಪ ಮೆರೆಯುತ್ತಿರುವುದು ಖಂಡನೀಯ ಎಂದರು.
ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 110 ಡಾಲರ್‌ನಿಂದ 50 ಡಾಲರ್ ಗೆ ಇಳಿಮುಖವಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿಲ್ಲ. ಕೇಂದ್ರ ಸರ್ಕಾರ 19 ಲಕ್ಷ ಕೋಟಿ ರೂಪಾಯಿ ಸುಂಕವನ್ನು ಪೆಟ್ರೋಲ್,ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಗಳಿಂದ ಸಂಗ್ರಹಿಸಿದೆ. ರೈತರು, ಜನಸಾಮಾನ್ಯರು, ಕಾರ್ಮಿಕ ವರ್ಗ ತತ್ತರಿಸಿ ಹೋಗಿದ್ದಾರೆ. ಜನರ ಬವಣೆಗಳಿಗೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಸಾಂಕೇತಿಕ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಮೇಯರ್‌ರಿಂದ ಯುಜಿಡಿ ಕಾಮಗಾರಿ ಪರಿಶೀಲನೆ
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ತಾಪಂ ಸದಸ್ಯ ಕುಬೇಂದ್ರಪ್ಪ, ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಮುಖಂಡರಾದ ಬಿ. ಲೊಕೇಶ್, ರೇಣುಕೇಶ್, ವಿಜಯ್ ಕೆಂಚೊಳ್, ರಮೇಶ್, ಮಾದಿಹಳ್ಳಿ ಗೋಣೇಶ್, ಓಬಳೇಶ್, ಮಹಿಳಾ ಕಾಂಗ್ರೆಸ್‌ನ ಸಾವಿತ್ರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.