ಬ್ಯಾಡಗಿ: ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೇ ಕೂಲಿ ಕಾರ್ಮಿಕರ ವೇತನ ನೀಡಲು ವಿಳಂಬವಾದಲ್ಲಿ ಅದಕ್ಕೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನೇ ನೇರವಾಗಿ ಹೊಣೆಯನ್ನಾಗಿಸಲಾಗುವುದು ಎಂದು ಸಾಮಾಜಿಕ ಲೆಕ್ಕಪರಿಶೋಧನೆ ತಾಲೂಕು ಸಂಯೋಜಕ ಬಸವರಾಜ ಅಮಾತಿ ಎಚ್ಚರಿಸಿದರು.
ತಾಲೂಕಿನ ಗುಂಡೇನಹಳ್ಳಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ನರೇಗಾ ಯೋಜನೆ ಹಾಗೂ ಸಾಮಾಜಿಕ ಭದ್ರತೆ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ವಿಶೇಷ ರೋಜ್‌ಗಾರ್ ದಿನಾಚರಣೆ ಸಭೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಗ್ರಾಪಂಗಳು ಎಂಐಎಸ್ ಹಾಗೂ ಎಫ್‌ಟಿಒ ಮಾಡಿಕೊಂಡಲ್ಲಿ ಕೂಲಿಕಾರ್ಮಿಕರಿಗೆ ಶೀಘ್ರವಾಗಿ ಅನುದಾನ ಬಿಡುಗಡೆಯಾಗಲು ಸಹಕಾರಿಯಾಗುತ್ತದೆ. ಇಲ್ಲದೇ ಹೋದಲ್ಲಿ ಅನಗತ್ಯ ವಿಳಂಬಕ್ಕೆ ನೇರ ಹೊಣೆಯನ್ನಾಗಿಸುಲಾಗುತ್ತದೆ. ಯೋಜನೆಯಡಿ ಕಾಮಗಾರಿ ನಿರ್ವಹಿಸಿದ ಕೂಲಿಕಾರ್ಮಿಕರಿಗೆ ವೇತನ ಬಿಡುಗಡೆ ಮೊದಲ ಆದ್ಯತೆ ಮಾಡಿಕೊಳ್ಳಬೇಕು. ಬಳಿಕವಷ್ಟೇ ಸಾಮಗ್ರಿಗಳ ವೆಚ್ಚದ ಮೊತ್ತವನ್ನು ಬಿಡುಗಡೆಗೊಳಿಸಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಕಳೆದ ಅಕ್ಟೋಬರ್‌ನಿಂದ ಪ್ರಸಕ್ತ ವರ್ಷದ ಮಾರ್ಚ್ ವರೆಗೆ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ಕಾಮಗಾರಿಗಳ ಲೆಕ್ಕ ಪರಿಶೋಧನೆ ನಡೆಸಲಾಗಿದ್ದು, ಒಟ್ಟು 109 ಕಾಮಗಾರಿ ನಿರ್ವಹಿಸಿ ಅದಕ್ಕಾಗಿ 20.19 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ರೇಷ್ಮೆ ಇಲಾಖೆ ಅನುಷ್ಠಾನಗೊಳಿಸಿರುವ ಕಾಮಗಾರಿ ಕಡತವನ್ನು ನೀಡದೇ ಇರುವುದರಿಂದ, ಕಾಮಗಾರಿ ವೆಚ್ಚ 57282 ರೂ.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದ್ದು, ಅರಣ್ಯ ಇಲಾಖೆ ಅನುಷ್ಠಾನಗೊಳಿಸಿರುವ ಗುಂಡೇನಹಳ್ಳಿ ಹಾಗೂ ಅರಬಗೊಂಡ ಗ್ರಾಮಗಳ ಗುಡ್ಡದ ಪ್ರದೇಶದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗೆ ಬಳಸಿರುವ 82239 ಸಾವಿರ ರೂ.ಗಳನ್ನು ವಸೂಲಾತಿಗೆ ಸೂಚಿಸಿದೆ ಎಂದು ಸಭೆಗೆ ತಿಳಿಸಿದರು.
ಕೃಷಿ ಇಲಾಖೆಯ ಅಧಿಕಾರಿ ಹಿಮಾಚಲ ಮಾತನಾಡಿ, ಅತಿವೃಷ್ಟಿಯಿಂದ ಬೆಳೆಹಾನಿಗೊಳಗಾದ ರೈತರು ತಮ್ಮ ಹೊಲದ ಪೋಟೋದೊಂದಿಗೆ ಕೃಷಿ ಅಧಿಕಾರಿಗಳಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಕೃಷಿ ಇಲಾಖೆಯಲ್ಲಿ ಅರ್ಹ ಫಲಾನುಭವಿ ರೈತರಿಗೆ ರಿಯಾಯಿತಿ ದರದಲ್ಲಿ ಬೀಜ ಹಾಗೂ ಔಷಧಿ ಸೇರಿದಂತೆ ವಿವಿಧ ಕೃಷಿ ಪರಿಕರಗಳನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಭೆಯಲ್ಲಿ ಮನವಿ ಮಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ರಹಮತ್‌ಬಿ ಮಾತನಾಡಿ, ನರೇಗಾ ಯೋಜನೆಯಡಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಕೂಲಿ ಕೆಲಸ ಸೇರಿದಂತೆ ವೇತನವನ್ನು ಒದಗಿಸಲಾಗುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷ, ರೇಣುಕಾ ಭರಡಿ, ಉಪಾಧ್ಯಕ್ಷ ರವಿ ಹೊಸ್ಮನಿ, ಸದಸ್ಯರಾದ ಸುರೇಶ ದೇವಿಹೊಸೂರ, ಗುಡ್ಡಪ್ಪ ಆನ್ವೇರಿ, ಫಕ್ಕಿರಪ್ಪ ಹುರಕಡ್ಲಿ, ನರೇಗಾ ಎಂಜಿನಿಯರ್ ಮಂಜು ದೊಡ್ಡಗೌಡ್ರ, ಮಲ್ಲೇಶ ಅಳಲಗೇರಿ, ಮಂಜು ಡಮ್ಮಳ್ಳಿ, ಗ್ರಾಪಂ ಸಿಬ್ಬಂದಿ ಹನುಮಂತ ಸಭೆಯಲ್ಲಿದ್ದರು.