ಬೆಂಗಳೂರು: ರೋಗಿ ಗುಣಮುಖವಾಗಬೇಕಾದರೆ ಚಿಕಿತ್ಸೆಯ ಜತೆಗೆ ಆತನೊಂದಿಗೆ ವೈದ್ಯರು ಅನುಸರಿಸುವ ಮಾನವೀಯ ಗುಣಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಆಲ್ಟಿಯಸ್ ಹಾಸ್ಪಿಟಲ್ ಪ್ರೈ.ಲಿ. ಭಾನುವಾರ ರೆಜಸ್ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗೈನಕಾಲಜಿ, ಎಂಡೋಸ್ಕೋಪಿ ಮತ್ತು ಯೂರೋಗೈನಕಾಲಜಿಯಲ್ಲಿ ಇತ್ತೀಚಿನ ಆವಿಷ್ಕಾರಗಳ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಮೌಲ್ಯಗಳು ಕೂಡ ಪರಿಣಾಮಕಾರಿ ಚಿಕಿತ್ಸೆಯ ಭಾಗವಾಗಿವೆ.
ರೋಗಿಯೊಂದಿಗೆ ವೈದ್ಯರು ವರ್ತಿಸುವ ರೀತಿಯೂ ಪ್ರಭಾವ ಬೀರುತ್ತದೆ. ಇದಕ್ಕೆ ಮುನ್ನಾಭಾಯಿ ಎಂಬಿಬಿಎಸ್ ಚಿತ್ರ ಉತ್ತಮ ಉದಾಹರಣೆ ಎಂದ ಅವರು, ಆ ಚಿತ್ರದಲ್ಲಿನ ಒಳ್ಳೆಯ ಅಂಶಗಳನ್ನು ವೈದ್ಯರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಆದರೆ, ದುರದೃಷ್ಟವೆಂದರೆ ವೈದ್ಯರು ಸೇರಿದಂತೆ ಬಹುತೇಕರಲ್ಲಿ ಈ ಮಾನವೀಯ ಗುಣಗಳು ಗೌಣವಾಗುತ್ತಿವೆ. ಬಡವರು ಮತ್ತು ಶ್ರೀಮಂತರಿಗೆ ಸಿಗುವ ವೈದ್ಯಕೀಯ ಚಿಕಿತ್ಸೆಯಲ್ಲಿ ಸಾಕಷ್ಟು ಭಿನ್ನತೆ ಇದೆ ಎಂದರು.
ಜೈಲಿಗೆ ಹೋಗಿಬಂದವರು ನಾಯಕರು: ಕಾಮನ್‌ವೆಲ್ತ್, ಕಲ್ಲಿದ್ದಲು ಸೇರಿದಂತೆ ಅನೇಕ ಹಗರಣಗಳಲ್ಲಿ ಸಾವಿರಾರು ಕೋಟಿ ಹಣ ಲೂಟಿ ಮಾಡಲಾಗಿದೆ. ಒಂದೆಡೆ ಜೈಲು ಶಿಕ್ಷೆ ಅನುಭವಿಸಿ ಬಂದವರಿಗೆ ಹಾರ ಹಾಕಿ, ತಮ್ಮ ನಾಯಕನನ್ನಾಗಿ ವಿಜೃಂಭಿಸಲಾಗುತ್ತಿದೆ.
ಒಟ್ಟಾರೆ ಇತ್ತೀಚಿನ ಬೆಳವಣಿಗೆಗಳು ತೃಪ್ತಿಕರವಾಗಿಲ್ಲ. ಹಗರಣದ ಹಣವನ್ನು ಬಡವರಿಗೆ ಹಂಚಿದ್ದರೆ, ಇಡೀ ದೇಶ ಇಷ್ಟೊತ್ತಿಗೆ ಬಡತನಮುಕ್ತವಾಗುತ್ತಿತ್ತು ಎಂದ ಸಂತೋಷ್ ಹೆಗ್ಡೆ, ಯುವಕರಿಗೆ ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಅರಿವಿರಬೇಕು ಹಾಗೂ ಅದಕ್ಕೆ ಸ್ಪಂದಿಸಬೇಕು.
ಸಮಸ್ಯೆಗಳಿಂದ ವಿಮುಖ ಆಗುವುದು ಪರಿಹಾರ ಅಲ್ಲ. ಅನ್ಯಾಯ ಆದಾಗ ಅದನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ರವೀಂದ್ರ, ಶಿವಮೊಗ್ಗ ಸಿಟಿ ಆಸ್ಪತ್ರೆ ನಿರ್ದೇಶಕ ಡಾ.ಮಲ್ಲೇಶ್ ಹುಳಮನಿ ಮತ್ತಿತರರು ಉಪಸ್ಥಿತರಿದ್ದರು.